ಬೆಂಗಳೂರು: ಜೆ.ಪಿ.ಪಾರ್ಕ್‌ನಲ್ಲಿ ಭಾನುವಾರ ನಡೆದ ಕರಿಟೋಪಿ ಕಲಹಕ್ಕೆ ಬಿಜೆಪಿ ನಾಯಕರು ಕೆಂಡಕಾರಿದ್ದು, ಶಾಸಕ ಮುನಿರತ್ನ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆಶಿ ಅವರಿಗೆ ಅಧಿಕಾರದ ಅಮಲು ನೆತ್ತಿಗೇರಿದೆ. ಪ್ರಜಾಪ್ರಭುತ್ವದ ಪ್ರಬಲಾಸ್ತ್ರ ಜನಾಧಿಕಾರದ ಮೂಲಕ ಚುನಾಯಿತರಾದ ಶಾಸಕರನ್ನು ಕರಿಟೋಪಿ ಎಮ್‌ಎಲ್‌ಎ ಎಂದು ಸಂಬೋಧಿಸುವುದು ಎಷ್ಟು ಸರಿ? ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಗೂಂಡಾ ರಾಜ್ಯ ಗ್ಯಾರೆಂಟಿ ಕೊಟ್ಟಿದೆ ಕಾಂಗ್ರೆಸ್ ಸರ್ಕಾರ. ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿ, ವೇದಿಕೆಯಲ್ಲಿ ಶಾಸಕರನ್ನ ಅಗೌರವದಿಂದ ಸಂಬೋಧನೆ ಮಾಡಿ, ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಮೇಲೆ ಹಲ್ಲೆಗೆ ನಡೆಸಿರುವುದು ಕಾಂಗ್ರೆಸ್ ಪಕ್ಷದ ಗೂಂಡಾಗಿರಿ ಸಂಸ್ಕೃತಿಯನ್ನ ಪ್ರದರ್ಶನ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಡಿಕೆ.ಶಿವಕುಮಾರ್ ಅವರೇ, ಮತದಾರರು ಆರಿಸಿ ಕಳಿಸಿರುವ ಜನಪ್ರತಿನಿಧಿಗೆ ಅವಮಾನ ಮಾಡುವುದು ಮತದಾರರಿಗೆ ಅವಮಾನ ಮಾಡಿದಂತೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಸ್ವಾಮಿ, ತಮ್ಮ ನಡವಳಿಕೆಯನ್ನ ಜನರು ಗಮನಿಸುತ್ತಿದ್ದಾರೆ ಎನ್ನುವುದನ್ನ ಮರೆಯಬೇಡಿ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಳೇಗಾರಿಕೆ ಸಂಸ್ಕೃತಿಗೆ ಜಾಗವಿಲ್ಲ. ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಜನಪ್ರತಿನಿಧಿಯನ್ನು ಅಪಮಾನಿಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿಸಿದ್ದಾರೆ. ಶಾಸಕ ಮುನಿರತ್ನ ಅವರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸ್ಥಳೀಯ ಶಾಸಕ ಮುನಿರತ್ನರನ್ನೇ ಆಹ್ವಾನಿಸದೆ, ಶಾಸಕರೊಂದಿಗೆ ಉಡಾಫೆಯಿಂದ ವರ್ತಿಸಿರುವುದು ಹಾಗೂ ಅವರು ಧರಿಸಿದ್ದ ಆರ್'ಎಸ್ಎಸ್ ಗಣವೇಶವನ್ನು ಅಪಮಾನಿಸಿರುವುದು ಉದ್ಧಟತನದ ಪರಮಾವಧಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ಅವರ ಈ ನಡೆ ಸರ್ವಾಧಿಕಾರಿತನವನ್ನು ಪ್ರತಿಬಿಂಬಿಸಿದೆ. ಅಧಿಕಾರ ಶಾಶ್ವತವಲ್ಲ, ಅದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ನೀಡುವ ಭಿಕ್ಷೆ ಎಂಬ ಪರಿಜ್ಞಾನವಿಲ್ಲದೆ ನಡೆದುಕೊಳ್ಳುತ್ತಿರುವ ಅವರ ವರ್ತನೆ ಅತ್ಯಂತ ಖಂಡನೀಯ. ನಿಮ್ಮ ನಡೆ, ನುಡಿ, ವರ್ತನೆಯನ್ನು ಜನರು ಗಮನಿಸುತ್ತಿದ್ದಾರೆ, ತಕ್ಕ ಉತ್ತರದ ಪಾಠವನ್ನು ಇಷ್ಟರಲ್ಲೇ ನಿಮಗೆ ಕಲಿಸಲಿದ್ದಾರೆಂದು ತಿಳಿಸಿದ್ದಾರೆ.