ಸಿದ್ದರಾಮಯ್ಯ ಸಚಿವ ಸಂಪುಟ ಸಭೆ 
ರಾಜಕೀಯ

CM Dinner Meet: ಸಂಪುಟ ಪುನಾರಚನೆ ಕುರಿತು ಮಾತುಕತೆ; ಮಾನಸಿಕವಾಗಿ ಸಿದ್ಧರಾಗಿರುವಂತೆ ಸಚಿವರಿಗೆ ಸಿಎಂ ಸೂಚನೆ..?

ಔತಣಕೂಟದಲ್ಲಿ ಸಂಪುಟ ಪುನಾರಚನೆ ಕುರಿತು ಸುಳಿವು ನೀಡಿರುವ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಹೊಸಬರಿಗೆ ಅವಕಾಶ ನೀಡಲು ಸಂಪುಟ ಪುನಾರಚನೆ ಅನಿವಾರ್ಯ.

ಬೆಂಗಳೂರು: ತಮ್ಮ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಔತಣಕೂಟವನ್ನು ಆಯೋಜಿಸಿದ್ದರು.

ಔತಣಕೂಟದಲ್ಲಿ ಸಚಿವರೊಂದಿಗೆ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಸಂಪುಟ ಪುನಾರಚನೆ ಕುರಿತು ಸುಳಿವು ನೀಡಿದ್ದಾರೆಂದು ತಿಳಿದುಬಂದಿದೆ.

ಔತಣಕೂಟದಲ್ಲಿ ಡಿ.ಕೆ. ಶಿವಕುಮಾರ್ ಸ್ವಲ್ಪ ಸಮಯ ಹೊರನಡೆದಾಗ ಸಿದ್ದರಾಮಯ್ಯ ಅವರು, ಸಚಿವರೊಂದಿಗೆ ಒನ್-ಟು-ಒನ್ ಸಬೆ ನಡೆಸಿದ್ದು, ಈ ಬೆಳವಣಿಗೆ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ನವೆಂಬರ್ ನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ಬಳಿಕ ಸಂಪುಟ ಪುನಾರಚನೆ ನಡೆಸಲು ಚಿಂತನೆ ನಡೆಸಲಾಗಿದ್ದು, ಸಿದ್ದರಾಮಯ್ಯ ಅವರು ಇದರ ಪರವಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಔತಣಕೂಟದಲ್ಲಿ ಸಂಪುಟ ಪುನಾರಚನೆ ಕುರಿತು ಸುಳಿವು ನೀಡಿರುವ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಹೊಸಬರಿಗೆ ಅವಕಾಶ ನೀಡಲು ಸಂಪುಟ ಪುನಾರಚನೆ ಅನಿವಾರ್ಯ. ಹೀಗಾಗಿ ಮಾನಸಿಕವಾಗಿ ಸಿದರಾಗಿರುವಂತೆ ಹಾಗೂ ಈ ಬಗ್ಗೆ ಚಿಂತಿಸದೆ ನಿಮ್ಮ ಇಲಾಖೆಗಳತ್ತ ಗಮನ ಹರಿಸುವುದನ್ನು ಮುಂದುವರಿಸುವಂತೆ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

ಸರ್ಕಾರ ರಚನೆಯಾಗಿ ಎರಡೂವರೆ ವರ್ಷಗಳಾಗಿವೆ. ಜನರು ಬಿಜೆಪಿಯನ್ನು ಅದರ ದುರಾಡಳಿತಕ್ಕಾಗಿ ತಿರಸ್ಕರಿಸಿ ನಮಗೆ ಅಧಿಕಾರ ನೀಡಿರುವುದರಿಂದ ನಿಮ್ಮ ಇಲಾಖೆಗಳಲ್ಲಿ ಸುಧಾರಣೆಗಳನ್ನು ತನ್ನಿ. ಸರ್ಕಾರ ಜನಪರವಾಗಿರಬೇಕು ಮತ್ತು ನೀವು ಈ ಮಾರ್ಗಗಳಲ್ಲಿ ಕೆಲಸ ಮಾಡಬೇಕು ಮತ್ತು ನಿಮ್ಮ ಇಲಾಖೆಗಳಿಗೆ ಒಳ್ಳೆಯ ಹೆಸರು ತರಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಸಂಪುಟದಿಂದ ಕೆಲವರನ್ನು ಕೈ ಬಿಟ್ಟು ಬೇರೆಯವರಿಗೆ ಅವಕಾಶ ನೀಡಬೇಕಾಗಬಹುದು. ಸಚಿವ ಸ್ಥಾನ ತ್ಯಾಗ ಮಾಡಿದವರಿಗೆ ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಿದ್ದು, ಪಕ್ಷದ ಸಂಘಟನೆಯ ಮಹತ್ವದ ಜವಾಬ್ದಾರಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಹೈಕಮಾಂಡ್ ಪುನಾ ರಚನೆಗೆ ಆಸಕ್ತಿ ಹೊಂದಿದೆ. ಹೊಸಬರಿಗೆ ಅವಕಾಶ ನೀಡಲು ಇದು ಅನಿವಾರ್ಯವೂ ಕೂಡ. ಹೈಕಮಾಂಡ್ ಬಳಿ ಸಚಿವರ ರಿಪೋರ್ಟ್ ಕಾರ್ಡ್ ಇದ್ದು, ಅದರ ಆಧಾರದ ಮೇಲೆ ಯಾವಾಗ ಬೇಕಾದರೂ ಸೂಚನೆ ನೀಡಬಹುದು. ಹೀಗಾಗಿ ಮಾನಸಿಕವಾಗಿ ಸಿದ್ಧವಾಗಿರಿ ಎಂದು ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ಆಡಳಿತದ ಜೊತೆಗೆ ಮುಂದಿನ ಬಾರಿಗೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪಕ್ಷ ಸಂಘಟನೆಯೂ ಮುಖ್ಯ, ಪಕ್ಷವನ್ನು ಬಲವಾಗಿ ಸಂಘಟಿಸಿ ಮುಂದಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗಳನ್ನು ಗೆಲ್ಲಿಸಬೇಕು. ಜೊತೆಗೆ 2028ರ ಚುನಾ ವಣೆಗೂ ಸಿದ್ದತೆ ನಡೆಸಬೇಕೆಂದು ಸೂಚಿಸಿರುವುದಾಗಿ ತಿಳಿದುಬಂದಿದೆ,

ಇದೇ ವೇಳೆ ಪಕ್ಷದ ಹೈಕಮಾಂಡ್ ನಿಯೋಜಿಸಿದರೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಾಯಕರು ವಹಿಸಬೇಕಾದ ಪಾತ್ರಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಆದೇಶದ ಕುರಿತಂತೆಯೂ ಚರ್ಚಿಸಿದ್ದಾರೆಂದು ತಿಳಿದುಬಂದಿದೆ.

ವಿರೋಧ ಪಕ್ಷಗಳನ್ನು, ವಿಶೇಷವಾಗಿ ಬಿಜೆಪಿಯನ್ನು, ಕೆಲವು ವಿಷಯಗಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸುವ ಬಗ್ಗೆಯೂ ಚರ್ಚಿಸಲಾಗಿದೆ.

ಐದು ಗ್ಯಾರಂಟಿ ಯೋಜನೆಗಳ ಕುರಿತು ಸರ್ಕಾರದ ವಿರುದ್ಧದ ಟೀಕೆ, ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದ ನಂತರ ಆರಂಭದಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆ ಕಂಡುಬಂದರೂ, ಆದಾಯ ಗಳಿಸಲು ಹೆಚ್ಚಿನ ಮಾರ್ಗಗಳು ಕಂಡುಬಂದ ಕಾರಣ ಸರ್ಕಾರದ ಆರ್ಥಿಕತೆ ಸ್ಥಿರವಾಗಿದೆ ಎಂದು ಸಿಎಂ ಸಚಿವರಿಗೆ ತಿಳಿಸಿದರು ಎಂದು ತಿಳಿದುಬಂದಿದೆ. ಇದೇ ವೇಳೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದಾಗಿಯೂ ಸಿಎಂ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.

ಏತನ್ಮಧ್ಯೆ ಸಿದ್ದು ಪಾಳಯದಲ್ಲಿರುವ ರಾಮದುರ್ಗ ಶಾಸಕ ಅಶೋಕ್ ಪಟ್ಟಣ್ ಮತ್ತು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಸಚಿವರಾಗುವ ಬಯಕೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷದ ಸಂಘಟನೆಯಲ್ಲಿ ಕೈಬಿಡಲಾದವರಿಗೆ ಅವರ ವ್ಯಕ್ತಿತ್ವಕ್ಕೆ ಸೂಕ್ತವಾದ ಹುದ್ದೆಗಳನ್ನು ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಚಿವರೊಂದಿಗೆ ಸಿಎಂ ನಡೆಸಿದ ಒನ್-ಟು-ಒನ್ ಸಭೆಯನ್ನು ಸಚಿವ ಸಂತೋಷ್ ಲಾಡ್ ಅವರು ದೃಢಪಡಿಸಿದ್ದಾರೆ. ಮುಖ್ಯಮಂತ್ರಿಗಳು ಸಚಿವರ ವೈಯಕ್ತಿಕ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ನಾನು ನನ್ನ ಇಲಾಖೆಯ ವಿವರಗಳನ್ನು ನೀಡಿದ್ದೇನೆ. ಇತರರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಹೇಳಿದರು.

ಇದೇ ವೇಳೆ ಊಟದ ಮೆನು ಕುರಿತ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ ಅವರು, ರಾಗಿ ಮುದ್ದೆ, ಗ್ರೇವಿ, ಕೋಳಿ ಮಾಂಸ, ಮಟನ್, ಇಡ್ಲಿ ಎಲ್ಲವೂ ಇತ್ತು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Operation Sindoor ಗೆ ಪಾಕಿಸ್ತಾನದ 100 ಕ್ಕೂ ಹೆಚ್ಚು ಸೈನಿಕರು ಬಲಿ, 12 ವಿಮಾನಗಳು ಧ್ವಂಸ: ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್

ಜೈಸಲ್ಮೇರ್‌ನಲ್ಲಿ ಹೊತ್ತಿ ಉರಿದ ಬಸ್: 15 ಮಂದಿ ಸಜೀವದಹನ; ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ಪ್ರಯಾಣಿಕರು, Video!

ಟೀಕೆ ಬದಲು ಸಾಮೂಹಿಕ ಪ್ರಯತ್ನ ಅಗತ್ಯ: ಕಿರಣ್​ ಮಜುಂದಾರ್​ಗೆ ಡಿ.ಕೆ ಶಿವಕುಮಾರ್ ತಿರುಗೇಟು

ಕದನ ವಿರಾಮಕ್ಕೆ ಕಿಮ್ಮತ್ತಿಲ್ಲ: ಗಾಜಾದಲ್ಲಿ ಮಾರಣ ಹೋಮ ಮುಂದುವರೆಸಿದ ಇಸ್ರೇಲ್; 9 ಪ್ಯಾಲೆಸ್ತೇನಿಯರು ಸಾವು!

ಮಿತಿ ಮೀರುತ್ತಿದ್ದೀರಾ? ಒಕ್ಕೂಟ ವ್ಯವಸ್ಥೆಯ ಕಥೆಯೇನು?: ತಮಿಳುನಾಡು ಕೇಸ್ ನಲ್ಲಿ ED ವಿರುದ್ಧ 'ಸುಪ್ರೀಂ' ಗರಂ; ಕೋರ್ಟ್ ಚಾಟಿಗೆ ತನಿಖಾ ಸಂಸ್ಥೆ ಬೇಸ್ತು!

SCROLL FOR NEXT