ಬೆಳಗಾವಿ: ದೀಪಾವಳಿ ನಂತರ ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ರಮೇಶ್ ಕತ್ತಿ ಅವರ ಹೇಳಿಕೆಗಳಿಗೆ ಸೂಕ್ತ ಉತ್ತರ ನೀಡುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಂಗಳವಾರ ಹೇಳಿದರು.
ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಕ್ಕೇರಿ ವಿದ್ಯುತ್ ಸಹಕಾರ ಸಂಘ ಮತ್ತು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ನಂತರ, ಅಭಿವೃದ್ಧಿ ಕಾರ್ಯಸೂಚಿಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಹೇಳಿದರು.
ಡಿಸಿಸಿ ಚುನಾವಣೆ ಹಿನ್ನೆಲೆಯಲ್ಲಿ ವೈಯಕ್ತಿಕ ಟೀಕೆಗೆ ರಮೇಶ ಕತ್ತಿ ವಿರುದ್ಧ ಕಾನೂನಾತ್ಮಕ ಹೋರಾಟ ವಿಚಾರವಾಗಿ ಮಾತನಾಡಿದ, ಕತ್ತಿ ಹೇಳಿಕೆಗೆ ಸಮುದಾಯದ ಜನರು ಉತ್ತರಿಸುತ್ತಾರೆ. ಡಿಸಿಸಿ ಚುನಾವಣೆ ಮುಗಿದಿದ್ದು, ಬ್ಯಾಂಕ್ ಅಧ್ಯಕ್ಷರ ಆಯ್ಕೆಗೆ ಇನ್ನೂ ಸಮಯವಿದೆ. ಅಧ್ಯಕ್ಷ ಸ್ಥಾನಕ್ಕೆ ಇನ್ನೂ ಯಾರ ಹೆಸರೂ ಚರ್ಚೆಗೆ ಬಂದಿಲ್ಲ. ಹುಕ್ಕೇರಿಯಲ್ಲಿ ಎಂದಿನಂತೆ ನಮ್ಮ ಸಂಘಟನೆ ನಡೆಯುತ್ತದೆ ಎಂದು ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ಆರ್ಎಸ್ಎಸ್ ಬ್ಯಾನ್ ಮಾಡುತ್ತೇವೆ ಎಂದು ಹೇಳಿದ್ರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚುನಾವಣೆ ಪ್ರಣಾಳಿಕೆಯಲ್ಲಿಯೂ ಆರ್ಎಸ್ಎಸ್ ಬ್ಯಾನ್ ಮಾಡುತ್ತೇವೆ ಎಂದು ಪ್ರಿಂಟ್ ಆಗಿತ್ತು. ನಂತರ ಅದನ್ನು ಕೈಬಿಡಲಾಗಿತ್ತು. ಸಂಘ-ಸಂಸ್ಥೆಗಳು ಅನುಮತಿ ಪಡೆಯುವುದು ಕಡ್ಡಾಯ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ. ಎಲ್ಲರಿಗೂ ಅನ್ವಯಿಸುತ್ತದೆ. ನಾವು ಕೇವಲ ಆರ್ಎಸ್ಎಸ್ಗೆ ಮಾತ್ರ ಎಂದು ಹೇಳಲು ಆಗಲ್ಲ, ನಾವು ಎಲ್ಲಿಯೂ ಕೂಡಾ ಈ ಬಗ್ಗೆ ಹೇಳಿಕೆ ಕೊಟ್ಟಿಲ್ಲ ಎಂದರು.
ಬಿಹಾರ ಚುನಾವಣೆಗೆ ಸಚಿವರು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಅವರು ಹೀಗೆ ಹೇಳುವುದು ಹೊಸದೇನಲ್ಲ, ಸಿಎಂ ಊಟಕ್ಕೆ ಕರೆಯಿಸಿದರೆ ಹೀಗೆ ಹೇಳುತ್ತಾರೆ. ಸಿಎಂ ಅವರು ವರ್ಷಕ್ಕೆ ಎರಡು ಬಾರಿ ಊಟಕ್ಕೆ ಕರೆಯುತ್ತಿರುತ್ತಾರೆ, ಮಾತನಾಡುತ್ತಿರುತ್ತಾರೆ, ವಾಡಿಕೆಯಿದೆ ಎಂದು ಬಿಜೆಪಿ ನಾಯಕರ ಆರೋಪವನ್ನು ತಳ್ಳಿ ಹಾಕಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ವಿಚಾರದ ಕುರಿತು ಮಾತನಾಡಿ, ನಿನ್ನೆ ಡಿಸಿಸಿ ಬ್ಯಾಂಕ್ ಚುನಾವಣೆ ಮುಗಿದಿದೆ. ಅದರ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಯ್ಕೆಗೆ ಇನ್ನೂ ಸಮಯವಿದೆ. ಅಧ್ಯಕ್ಷ ಸ್ಥಾನಕ್ಕೆ ಇನ್ನೂ ಯಾರ ಹೆಸರೂ ಚರ್ಚೆಗೆ ಬಂದಿಲ್ಲ. ಹುಕ್ಕೇರಿಯಲ್ಲಿ ಎಂದಿನಂತೆ ನಮ್ಮ ಸಂಘಟನೆ ನಡೆಯುತ್ತೆ. ಡಿಸಿಸಿ ಬ್ಯಾಂಕಿಗೆ ನಾಮನಿರ್ದೇಶನ ನಿರ್ದೇಶಕರ ಸ್ಥಾನವನ್ನು ಹಾಲು ಮತ ಸಮಾಜಕ್ಕೆ ನೀಡುವಂತೆ ಸಲಹೆ ಮಾಡಿದ್ದೇವೆ ಎಂದು ತಿಳಿಸಿದರು,
ಸಾಮಾನ್ಯ ಕ್ಷೇತ್ರದಲ್ಲಿ ಜಾರಕಿಹೊಳಿ ಬ್ರದರ್ಸ್ ಸ್ಪರ್ಧೆಗೆ ರಮೇಶ್ ಕತ್ತಿ ವಿರೋಧ ವಿಚಾರವಾಗಿ ಮಾತನಾಡಿ, ಸಾಮಾನ್ಯ ಕ್ಷೇತ್ರದಲ್ಲಿ ಯಾರಿಗೆ ಶಕ್ತಿ ಇದೆ, ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರು ಸ್ಪರ್ಧೆ ಮಾಡುತ್ತಾರೆ. ಜನರಲ್ ಇದ್ದಲ್ಲಿ ಇವರಿಗೆ ಕೊಡಬೇಕು ಎಂದು ಕಾನೂನಿನಲ್ಲಿ ಇಲ್ಲ. ನಮ್ಮದು ಹಕ್ಕು ಇದೆ, ವೋಟ್ ಬ್ಯಾಂಕ್ ಇದೆ, ನಮಗೂ ಶಕ್ತಿ ಇದೆ. ನಾವು ಕೇಳಲು ಅರ್ಹರಿದ್ದೇವೆ ಎಂದು ತಿರುಗೇಟು ನೀಡಿದರು.