ಮೈಸೂರು: ತಮ್ಮ ತಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಕಾಂಗ್ರೆಸ್ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ, 'ನವೆಂಬರ್ ಕ್ರಾಂತಿ' ಕೇವಲ ಊಹಾಪೋಹ. ನಮ್ಮ ಪಕ್ಷದಲ್ಲಿ ಅಂತಹ ಯಾವುದೇ ಚರ್ಚೆ ಇಲ್ಲ ಎಂದರು.
ನಿಮ್ಮ ತಂದೆ ಐದು ವರ್ಷ ಪೂರ್ಣಗೊಳಿಸುತ್ತಾರೆಯೇ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಪುತ್ರ, "ಪ್ರಸ್ತುತ ಪರಿಸ್ಥಿತಿಯಲ್ಲಿ, ಅವರು ಐದು ವರ್ಷಗಳ ಅವಧಿ ಪೂರ್ಣಗೊಳಿಸುತ್ತಾರೆ" ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ನಂತರ ಸಚಿವ ಸತೀಶ್ ಜಾರಕಿಹೊಳಿ ಉತ್ತರಾಧಿಕಾರಿ ಎಂಬ ಅರ್ಥದಲ್ಲಿ ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡ ಯತೀಂದ್ರ, ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದಿದ್ದಾರೆ.
ನನ್ನ ಹೇಳಿಕೆಯಲ್ಲಿ ತಪ್ಪೇನಿಲ್ಲ. ನನ್ನ ಹೇಳಿಕೆಯನ್ನು ಬೇರೆ ಬೇರೆ ರೀತಿ ಬಿಂಬಿಸುತ್ತಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ.
ಇನ್ನು ಪಕ್ಷದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದಿರುವ ಸಿಎಂ ಪುತ್ರ, ಪಕ್ಷ ನೋಟಿಸ್ ಕೊಟ್ಟರೆ ಅದಕ್ಕೆ ನಾನು ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.