ಬೆಂಗಳೂರು: ಈ ಹಿಂದೆ ಧರ್ಮಸ್ಥಳ ಸಮಾಧಿ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂದು ಬಾಂಬ್ ಸಿಡಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಧರ್ಮಸ್ಥಳ ವಿರುದ್ಧದ "ಅಪಪ್ರಚಾರ"ದ ಹಿಂದೆ ಬಿಜೆಪಿ ಮತ್ತು ಅದರ ಸಹಚರರ ಕೈವಾಡವಿದೆ ಎಂದು ಸೋಮವಾರ ಆರೋಪಿಸಿದ್ದಾರೆ. ಅಲ್ಲದೆ ಕೇಸರಿ ಪಕ್ಷದೊಳಗಿನ ಆಂತರಿಕ ಬಿರುಕು ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಡಿಕೆ ಶಿವಕುಮಾರ್ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು ಮತ್ತು ಷಡ್ಯಂತ್ರ ಯಾರದ್ದು ಎಂದು ಹೇಳಬೇಕೆಂದು ಪ್ರತಿಪಕ್ಷ ನಾಯಕರು ಬಿಗಿಪಟ್ಟು ಹಿಡಿದಿದ್ದರು. ಅಲ್ಲದೇ ಈ ಬಗ್ಗೆ ಅಧಿವೇಶನದಲ್ಲೂ ಆಗ್ರಹಿಸಿದ್ದರು.
ಆದರೂ ಬಾಯ್ಬಿಡದ ಡಿಕೆ ಶಿವಕುಮಾರ್, ಇಂದು ಷಡ್ಯಂತ್ರದ ಗುಟ್ಟು ಬಿಚ್ಚಿಟ್ಟಿದ್ದು, ಧರ್ಮಸ್ಥಳ ಪ್ರಕಣದಲ್ಲಿ ಬಿಜೆಪಿ ಮೂಲ ಕಾರ್ಯಕರ್ತರೇ ಷಡ್ಯಂತ್ರ ಮಾಡಿರುವುದು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಪ್ರಸ್ತುತ ಎಸ್‌ಐಟಿ ಮಾಡಿರುವ ತನಿಖೆ ಬಗ್ಗೆ ಅವರಿಗೆ(ಬಿಜೆಪಿ) ಸಮಾಧಾನ ಇಲ್ಲವೇ? ಬಿಜೆಪಿಯಲ್ಲಿ ಆಂತರಿಕವಾಗಿ ಎರಡು ಬಣಗಳು ಕಚ್ಚಾಡುತ್ತಿವೆ. ಇದೆಲ್ಲವೂ ಅವರದ್ದೇ ಷಡ್ಯಂತ್ರ. ಎಸ್ಐಟಿ ರಚನೆಯನ್ನು ಸ್ವಾಗತ ಮಾಡಿದವರೂ ಅವರೇ, ಈಗ ನಾಟಕ ಮಾಡುತ್ತಿರುವವರು ಅವರೇ ಎಂದರು.
ಎನ್‌ಐಎ ತನಿಖೆಗೆ ಬಿಜೆಪಿಯವರು ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಧರ್ಮಸ್ಥಳಕ್ಕೆ ನ್ಯಾಯ ಸಿಗಬೇಕು ಎಂದು ಬಿಜೆಪಿಯವರು ಎಂದೂ ಹೇಳಿಲ್ಲ. ಬಿಜೆಪಿಯ ಮೂಲ ಕಾರ್ಯಕರ್ತರೇ ಧರ್ಮಸ್ಥಳದ ವಿರುದ್ಧ ಕೆಟ್ಟ ಹೆಸರು ತರಬೇಕು ಎಂದು ಮಾಡಿರುವ ಕೆಲಸವಿದು ಎಂದು ನೇರವಾಗಿ ಆರೋಪಿಸಿದ್ದಾರೆ.