ಬೆಂಗಳೂರು: ಮಂಡ್ಯದಲ್ಲಿ ಮತ ಬ್ಯಾಂಕ್ ರಾಜಕೀಯವನ್ನು ಬಿಜೆಪಿ ಆರಂಭಿಸಿದ್ದು, ಇದಕ್ಕಾಗಿ ಕೋಮುವಾದವನ್ನು ಬಳಸುತ್ತಿದೆ ಎಂದು ಮಾಜಿ ಶಾಸಕ ಬಿ ಸೋಮಶೇಖರ್ ಅವರು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯವನ್ನು ಕೋಮುವಾದೀಕರಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೆರೆಗೋಡಿನಲ್ಲಿನ ಪರಿಸ್ಥಿತಿ ಇದ್ದಕ್ಕಿದ್ದಂತೆ ಭುಗಿಲೇಳಲಿಲ್ಲ. ಇದು ಬಿಜೆಪಿ ನಡೆಸಿದ ನಾಟಕವಾಗಿತ್ತು. ಕೆರೆಗೋಡು, ನಾಗಮಂಗಲ ಮತ್ತು ಮದ್ದೂರಿನಲ್ಲಿ ಕೋಮು ಅಶಾಂತಿ ಸೃಷ್ಟಿಸಿದೆ. ಒಂದು ಕಾಲದಲ್ಲಿ ಒಂದರ ಹಿಂದಿನ ಒಂದು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿಗಳು, ನಿಧಾನಗತಿಯಲ್ಲಿ ಮಂಡ್ಯ ಜನರನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಕೋಮು ಅಸ್ತ್ರವನ್ನು ಬಳಕೆ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಎಂಎಲ್‌ಸಿ ಬಿ ಕೆ ಹರಿಪ್ರಸಾದ್ ಕೂಡ ಇದೇ ರೀತಿಯ ಆರೋಪವನ್ನು ಮಾಡಿದ್ದಾರೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಷಡ್ಯಂತ್ರವಾಗಿದೆ. ಉದ್ದೇಶಪೂರ್ವಕವಾಗಿ ಕೋಮುವಾದೀಕರಿಸುವುದು, ಶಾಂತಿಯನ್ನು ಭಂಗಗೊಳಿಸುವುದು ಮತ್ತು ಕ್ಷೇತ್ರದ ಮೇಲೆ ನಿಯಂತ್ರಣ ಸಾಧಿಸುವ ತಂತ್ರ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮಾತನಾಡಿ, ಮಂಡ್ಯದಲ್ಲಿ ಬಿಜೆಪಿ ಅಸ್ತಿತ್ವ ಸಾಧಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ರಾಜಕೀಯ ವಿಶ್ಲೇಷಕ ಹರೀಶ್ ಬಿಜೂರ್ ಅವರು ಸಂಯಮ ಕಾಯ್ದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಇಂತಹ ಪ್ರಯತ್ನಗಳು ಅಲ್ಫಾವಧಿಗೆ ಲಾಭವನ್ನು ನೀಡಬರುದು. ಆದರೆ, ಕೋಮು ಸಾಮರಸ್ಯ ಹದಗೆಟ್ಟರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.
ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಅವರು ಮಾತನಾಡಿ, ತಾಲ್ಲೂಕುವಾರು ಬಿಜೆಪಿ ನಾಯಕರು, ಜೆಡಿಎಸ್‌ನ ಪ್ರಮುಖ ಮತಗಳನ್ನು ಗುರಿಯಾಗಿಸಿಕೊಂಡಿದೆ, ಆದರೆ, ಜೆಡಿಎಸ್ ಮುಖಂಡರಾದ ಎಚ್‌ಡಿ ಕುಮಾರಸ್ವಾಮಿ ಮತ್ತು ಎಚ್‌ಡಿ ದೇವೇಗೌಡರು ಅಸಹಾಯಕತೆಯಿಂದ ನೋಡುತ್ತಿದ್ದಾರೆ. ಇದು ಜೆಡಿಎಸ್ ನೆಲೆ ಕಳೆದುಕೊಳ್ಳುವಂತೆ ಮಾಡಬಹುದು.
ಹಿಂದುತ್ವದ ಫೈರ್‌ಬ್ರಾಂಡ್ ನಾಯಕರಾದ ಬಸನಗೌಡ ಯತ್ನಾಳ್ ಮತ್ತು ಪ್ರತಾಪ್ ಸಿಂಹ ಅವರು ಮಂಡ್ಯದಲ್ಲಿ ಜನಪ್ರಿಯತೆ ಗಳಿಸುತ್ತಿದ್ದಾರೆ, "ಜೆಡಿಎಸ್‌ನ ಶರಣಾಗತಿ" ಎಂದು ಹೇಳಿದ್ದಾರೆ.