ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ 
ರಾಜಕೀಯ

ಬೆಂಗಳೂರು 'ಗುಂಡಿಯೂರು' ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ನೀವು ಬೆಂಗಳೂರು ಬಿಡುವುದು ಬೇಡ. ಈ ನಗರಕ್ಕೆ ಮಹಾನ್ ಪರಂಪರೆ, ಹಿನ್ನೆಲೆ ಇದೆ. ಈ ಎಮ್ಮೆ ಚರ್ಮದ ಸರಕಾರಕ್ಕೆ ಪಾಠ ಕಲಿಸುತ್ತೇವೆ. ನಿಮ್ಮ ಜತೆ ನಾವು, ಇಡೀ ಕರ್ನಾಟಕದ ಜನತೆ ಇದ್ದೇವೆ.

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ. ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ.

ಭಾರೀ ಸಂಚಾರ ದಟ್ಟಣೆ ಹಾಗೂ ಕಳಪೆ ರಸ್ತೆಯ ಸ್ಥಿತಿಯಿಂದಾಗಿ ಹೊರ ವರ್ತುಲ ರಸ್ತೆಯ ಕಾಡುಬೀಸನಹಳ್ಳಿಯ ವಸ್ವಾನಿ ಪ್ರೆಸಿಡೊದಿಂದ ಸ್ಥಳಾಂತರಗೊಳ್ಳುವುದಾಗಿ ಬೆಂಗಳೂರು ಮೂಲದ ಲಾಜಿಸ್ಟಿಕ್ ಕಂಪನಿ ‘ಬ್ಲ್ಯಾಕ್‌ಬಕ್’ ಹೇಳಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಕುಮಾರಸ್ವಾಮಿಯವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರು ಈ ಅಪಮಾನಕ್ಕೆ ಹೊಣೆಗಾರರು. ಬೆಂಗಳೂರು ಮತ್ತು ಕರ್ನಾಟಕ ಇವತ್ತು ಅದಕ್ಷರು, ಭ್ರಷ್ಟರ ಕೈಯ್ಯಲ್ಲಿ ಸಿಕ್ಕಿ ನರಳುತ್ತಿವೆ. ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ. ಕಂಡೆಲ್ಲೆಲ್ಲ ಕಸದ ರಾಶಿ. ಗ್ರೇಟರ್ ಬೆಂಗಳೂರು ಎಂದರೆ ಇದೇನಾ? ಜಿಬಿಎ ಏನು ಮಾಡುತ್ತಿದೆ? ಜನರ ತೆರಿಗೆ ದುಡ್ಡು ನುಂಗಿ ಗೊರಕೆ ಹೊಡೆಯುತ್ತಿದೆಯಾ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಆಡಳಿತದ ಘೋರ ವೈಫಲ್ಯವಾಗಿದೆ ಎಂದು ಉದ್ಯಮಿಗಳು ದೂರಿರುವುದು ಸರಿ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಉದ್ಯಮಿಗಳು ಸರಕಾರದ ವೈಫಲ್ಯವನ್ನು ಇಷ್ಟು ಕಠಿಣವಾಗಿ ಎತ್ತಿ ತೋರಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ಈ ಸರಕಾರಕ್ಕೆ ಎಳ್ಳಷ್ಟೂ ಸಂಕೋಚ, ಆತ್ಮಾಭಿಮಾನವಿಲ್ಲ. ಕನ್ನಡಿಗರ ಸ್ವಾಭಿಮಾನವನ್ನು ಗುಂಡಿಪಾಲು ಮಾಡಿದೆ.

ತೆರಿಗೆ ಹಾಕುವುದರಲ್ಲಿ ಸರಕಾರದ್ದು ರಾಕೆಟ್ ವೇಗ. ಗುಂಡಿ ಮುಚ್ಚುವುದರಲ್ಲಿ ಕೊನೇಪಕ್ಷ ಆಮೆ ವೇಗವೂ ಇಲ್ಲ. ಕೊಳ್ಳೆ ಹೊಡೆಯುವುದರಲ್ಲಿ ಇರುವ ಉನ್ಮಾದ, ಅಭಿವೃದ್ಧಿಯತ್ತ ವಿಪರೀತ ಉಪೇಕ್ಷೆ. ಚುನಾವಣಾ ಗ್ಯಾರಂಟಿಗಳಿಗೆ ರಾಜ್ಯದ ಅಭಿವೃದ್ಧಿ ಬಲಿಯಾಗಿ ಗ್ರೇಟರ್ ಬೆಂಗಳೂರು ಗಬ್ಬೆದ್ದು ನಾರುತ್ತಿದೆ.ಗುಂಡಿ ಮುಚ್ಚುವುದಕ್ಕೆ ಬಿಡಿಗಾಸಿಲ್ಲದ ಸರಕಾರ ಜನರಿಂದ ಕಿತ್ತುಕೊಳ್ಳುತ್ತಿರುವ ತೆರಿಗೆ ಹಣ ಏನು ಮಾಡುತ್ತಿದೆ? ಅದು ಯಾರ ಕಿಸೆ ಸೇರುತ್ತಿದೆ? ಇದಕ್ಕೆ ಉತ್ತರ ಬೇಕು ಎಂದು ಆಗ್ರಹಿಸಿದ್ದಾರೆ.

ಕಂಪನಿಗಳು ರಾಜ್ಯ ಸರಕಾರದ ಮೇಲೆ ಭರವಸೆ ಕಳೆದುಕೊಂಡು ನೆರೆರಾಜ್ಯಗಳತ್ತ ವಲಸೆ ಹೋಗುತ್ತಿವೆ. ಆ ರಾಜ್ಯಗಳು ಇಂಥ ಸಮಯಕ್ಕೇ ಕಾಯುತ್ತಾ ರಿಯಾಯ್ತಿ ಮೇಲೆ ರಿಯಾಯ್ತಿಗಳನ್ನು ನೀಡುತ್ತಿವೆ. ಭಂಡ ಸರಕಾರಕ್ಕೆ ಅರ್ಥವಾಗುತ್ತಿಲ್ಲ. ಈ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಬೆಂಗಳೂರು ತೊರೆಯಲು ಮುಂದಾಗಿರುವ ಕಂಪನಿಗಳಿಗೆ ಮನವಿ ಮಾಡಿರುವ ಅವರು, ನೀವು ಬೆಂಗಳೂರು ಬಿಡುವುದು ಬೇಡ. ಈ ನಗರಕ್ಕೆ ಮಹಾನ್ ಪರಂಪರೆ, ಹಿನ್ನೆಲೆ ಇದೆ. ಈ ಎಮ್ಮೆ ಚರ್ಮದ ಸರಕಾರಕ್ಕೆ ಪಾಠ ಕಲಿಸುತ್ತೇವೆ. ನಿಮ್ಮ ಜತೆ ನಾವು, ಇಡೀ ಕರ್ನಾಟಕದ ಜನತೆ ಇದ್ದೇವೆ. ಹೋಗುತ್ತೇವೆ ಎನ್ನುವ ಮಾತನ್ನು ಮನಸ್ಸಿನಿಂದ ತೆಗೆದುಬಿಡಿ. ನಾವೆಲ್ಲರೂ ಸೇರಿ ಬೆಂಗಳೂರು ನಗರವನ್ನು ಬದಲಿಸೋಣ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬಾನು ಮುಷ್ತಾಕ್​ರಿಂದ ದಸರಾ ಉದ್ಘಾಟನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ; ನಾಳೆ ವಿಚಾರಣೆ

CEC 'ಮತ ಕಳ್ಳರ ರಕ್ಷಕ'; ಕರ್ನಾಟಕದ ಆಳಂದ ಕ್ಷೇತ್ರದಲ್ಲಿ 6,000 ಮತದಾರರ ಹೆಸರು ಡಿಲೀಟ್: ರಾಹುಲ್ ಗಾಂಧಿ ಆರೋಪ; Video

'ಒಳನುಸುಳುಕೋರರಿಗೆ ಆದ್ಯತೆ ನೀಡುವ ರಾಜಕೀಯ ಕಾರ್ಯಸೂಚಿ': ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ವೋಟ್ ಚೋರಿ ಬಗ್ಗೆ CID ಚುನಾವಣಾ ಆಯೋಗಕ್ಕೆ 18 ಪತ್ರ ಬರೆದಿದೆ, ಯಾವುದಕ್ಕೂ ಉತ್ತರ ಇಲ್ಲ: ಖರ್ಗೆ

Onlineನಲ್ಲಿ ಮತ ಅಳಿಸಲು ಸಾಧ್ಯವಿಲ್ಲ, ರಾಹುಲ್ ಗಾಂಧಿ ಮತಗಳ್ಳತನ ಆರೋಪ ಆಧಾರರಹಿತ: ಚುನಾವಣಾ ಆಯೋಗ

SCROLL FOR NEXT