ಹಾವೇರಿ: ಕೇಂದ್ರ ಸರ್ಕಾರ ಸಮೀಕ್ಷೆ ನಡೆಸುವುದಾಗಿ ಹೇಳಿದ್ದು, ಯಾರನ್ನೋ ಮೆಚ್ಚಿಸಲು ರಾಜ್ಯ ಸರ್ಕಾರ ಸಮೀಕ್ಷೆ ಮಾಡಬಾರದು ಎಂದು ಸಂಸದ ಬಸವರಾಜ ಬೊಮ್ಮಾಯಿಯವರು ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಮೀಕ್ಷಾ ಕಾಯ್ದೆಯ ಪ್ರಕಾರ ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಸಮೀಕ್ಷೆ ನಡೆಸುವ ಅಧಿಕಾರವಿಲ್ಲ, ಕೇವಲ ಸ್ಯಾಂಪಲ್ ಸರ್ವೆ ಮಾತ್ರ ಮಾಡಬಹುದು. ಆದಾಗ್ಯೂ, ಸಮೀಕ್ಷೆಯ ಹೆಸರಿನಲ್ಲಿ, 'ವೀರಶೈವ ಲಿಂಗಾಯತ'ವನ್ನು ಪ್ರತ್ಯೇಕ ಜಾತಿ ಮತ್ತು 'ಲಿಂಗಾಯತ ವೀರಶೈವ'ವನ್ನು ಮತ್ತೊಂದು ಜಾತಿ ಎಂದು ಘೋಷಿಸುವ ಮೂಲಕ ಸರ್ಕಾರ ಗೊಂದಲಗಳನ್ನು ಸೃಷ್ಟಿಸಿದೆ. ಪ್ರತಿ ಸಮುದಾಯದಲ್ಲಿ, ಸರ್ಕಾರವು 25 ರಿಂದ 30 ಹೊಸ ಉಪಜಾತಿಗಳನ್ನು ರಚಿಸಿದೆ ಎಂದು ಆರೋಪಿಸಿದ್ದಾರೆ.
ಮತಾಂತರಗೊಂಡ ಕ್ರೈಸ್ತರಿಗಾಗಿ ಸರ್ಕಾರವು ಪ್ರತ್ಯೇಕ ಕಾಲಂ ಮಾಡಿದೆ. ಎಲ್ಲಾ ಸಮಾಜದಲ್ಲಿ ಕನ್ವರ್ಟೆಡ್ ಕ್ರಿಶ್ಚಿಯನ್ ಇರೋ ರೀತಿಯಲ್ಲಿ ಮಾಡಿದ್ದಾರೆ. ಕನ್ವರ್ಟೆಡ್ಗೆ ಯಾವುದೇ ಕಾಲಂ ಸಂವಿಧಾನದಲ್ಲಿ ಇಲ್ಲ. ಸರ್ಕಾರ ಸಮಾಜವನ್ನು ಒಗ್ಗೂಡಿಸುವ ಬದಲು ಚೂರು ಚೂರಾಗಿ ತುಂಡಾಗಿಸುತ್ತಿದೆ. ಜಾತಿಗಣತಿ ಒಳ್ಳೆಯ ಉದ್ದೇಶವನ್ನು ಹೊಂದಿಲ್ಲ. ಇದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಮುಖ್ಯಮಂತ್ರಿಗಳು ಯಾರನ್ನೊ ಮೆಚ್ಚಿಸಲು ಸಮೀಕ್ಷೆ ನಡೆಸಬಾರದು ಎಂದು ತಿಳಿಸಿದ್ದಾರೆ.
ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವ ಸರ್ಕಾರ ಚಿಂತನೆ ಕುರಿತು ಪ್ರತಿಕ್ರಿಯಿಸಿ, ಸರ್ಕಾರವು ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.
ನಾನು ಸಿಎಂ ಆಗಿದ್ದ ವೇಳೆ ವಾಲ್ಮೀಕಿ ಸಮಾಜಕ್ಕೆ ಶೇ.3ರಿಂದ 7ರಷ್ಟು ಮೀಸಲಾತಿ ಮಾಡಿದ್ದೆ. ಎಸ್ಸಿಗೆ 15 ರಿಂದ 17 ಮಾಡಿದ್ದೇನೆ. ಈಗ ಅದರ ಪ್ರಕಾರ ನಡೆದಿದೆ. ಮುಂದೆ ಕೇಂದ್ರ ಸರ್ಕಾರ ಸಮೀಕ್ಷೆ ಮಾಡಲಿದೆ. ಅದರ ಆಧಾರದ ಮೇಲೆ ಜನಸಂಖ್ಯೆ ಗೊತ್ತಾಗುತ್ತೆ. ಆ ಮೇಲೆ ಮುಂದೆ ನಿರ್ಧಾರ ಆಗುತ್ತೆ ಎಂದು ತಿಳಿಸಿದರು.