ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಹಳೆ ಕಥೆ ಹೇಳುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಿನ್ನೆ ರಾಜ್ಯಾದ್ಯಂತ ಒಂದು ಗಂಟೆ ರಸ್ತೆ ತಡೆ ಮಾಡಿದೆ. ಗುಂಡಿಗಳನ್ನೂ ಮುಚ್ಚಿ ರಾಜ್ಯ ಸರ್ಕಾರಕ್ಕೆ ಈ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ಪುಗ್ಸಟ್ಟೆ ಭಾಷಣ ಮಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಕೆಲಸಗಳ ಕಡೆ ಗಮನ ಹರಿಸಬೇಕು.
ಬೆಂಗಳೂರಿನ ಗೌರವ, ಮರ್ಯಾದೆ ತೆಗೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಅತೀ ಶೀಘ್ರವೇ ಗುಂಡಿಗಳನ್ನು ಮುಚ್ಚಿ ಬೆಂಗಳೂರಿನ ಗೌರವ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೆಂಗಳೂರು ಮಹಾನಗರ ಮಾತ್ರವಲ್ಲದೇ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ರಸ್ತೆಗಳಲ್ಲಿರುವ ಗುಂಡಿಗಳಿಗೆ ಮುಕ್ತಿ ಕೊಡುವ ಕೆಲಸವನ್ನು ಮಾಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಅಧಿಕಾರಿಗಳು ಹೋಗಿ ಎಷ್ಟು ರಸ್ತೆ ಗುಂಡಿಗಳಿವೆ ಎಂದು ಲೆಕ್ಕ ಹಾಕಿ ಬಂದಿದ್ದಾರೋ ಗೊತ್ತಿಲ್ಲ. ಹಲವಾರು ಬಾರಿ ಡೆಡ್‌ಲೈನ್ ಕೊಟ್ಟರೂ ಇವತ್ತಿಗೂ ಗುಂಡಿಗಳನ್ನು ಮುಚ್ಚಲು ಈ ಸರ್ಕಾರದ ಕಡೆಯಿಂದ ಸಾಧ್ಯವಾಗಿಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಸರ್ಕಾರವು ಯಾವುದೇ ಆಯೋಗಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಿಲ್ಲ. ಕಾಂತರಾಜು ಆಯೋಗಕ್ಕೆ 150 ಕೋಟಿ ರೂ., 160 ಕೋಟಿ ರೂ. ಖರ್ಚು ಮಾಡಿ, ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದಾಗಿದೆ. ಈಗ 500- 600 ಕೋಟಿ ರೂ. ಖರ್ಚು ಮಾಡಿ ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ. ನಾಗಮೋಹನ್ ದಾಸ್ ಅವರ ವಿಚಾರದಲ್ಲೂ ಅಷ್ಟೇ ಮಾಡಿದ್ದಾರೆ. ಕಾಂಗ್ರೆಸ್ಸಿನವರು ಬಿಜೆಪಿ ಹಿಂದಿನ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡಿ, ಅಧಿಕಾರಕ್ಕೆ ಬಂದಿದ್ದಾರೆ ಎಂದರು.
ರಾಜ್ಯ ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾಗಿ ಜನರು ಅಭಿವೃದ್ಧಿ ಆಗುತ್ತಿಲ್ಲ ಎಂದು ಉಗಿಯಲು ಆರಂಭಿಸಿದಾಗ ಜಾತಿಗಣತಿಯಂಥ ಗೊಂದಲಗಳನ್ನು ಉಂಟು ಮಾಡುತ್ತಾರೆ. ಕಾಂತರಾಜು ವರದಿ ಕುರಿತು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುವುದಾಗಿ ಮುಖ್ಯಮಂತ್ರಿಗಳು ಎಷ್ಟು ಬಾರಿ ಹೇಳಿದ್ದಾರೆ? ಈ ಸರ್ಕಾರಕ್ಕೆ ಗೊಂದಲ ಸೃಷ್ಟಿಸುವ ಮನಸ್ಸಿದೆ. ಜಾತಿ ವಿಷಬೀಜ ಬಿತ್ತಿ ಹಿಂದೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆಯೇ ವಿನಃ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳಿಗೆ ಗೊಂದಲ ಸೃಷ್ಟಿಸುವುದನ್ನು ಬಿಟ್ಟರೆ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಟೀಕಿಸಿದರು
ಬೆಂಗಳೂರಿನ ಗೌರವ, ಮರ್ಯಾದೆ ತೆಗೆಯುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಅತಿ ಶೀಘ್ರವೇ ಗುಂಡಿಗಳನ್ನು ಮುಚ್ಚಿ ಬೆಂಗಳೂರಿನ ಗೌರವ ಉಳಿಸಬೇಕು ಎಂದು ಅವರು ಒತ್ತಾಯಿಸಿದರು.