ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿನ ಕಾಂಗ್ರೆಸ್ ಪಕ್ಷದಲ್ಲಿನ ಪಕ್ಷವಿರೋಧಿ ಚಟುವಟಿಕೆಗೆ ಸಂಬಂದಿಸಿದಂತೆ ಮತ್ತೊಂದು ತಲೆದಂಡವಾಗಲಿದ್ದು, ಸಚಿವ ಜಮೀರ್ ಸ್ಥಾನಕ್ಕೂ ಕುತ್ತು ಬರಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಪಿ ರೇಣುಕಾಚಾರ್ಯ, 'ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಚುನಾವಣೆ ಘಟನೆಗಳ ಹಿನ್ನೆಲೆ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಮುಂದೆ ಜಮೀರ್ ಅಹ್ಮದ್ ರಾಜೀನಾಮೆ ನೀಡಬೇಕಾಗುತ್ತದೆ ಎಂದರು.
ಇಂದು ರಾತ್ರಿಯೇ ಕ್ಲೈಮ್ಯಾಕ್ಸ್
ಅಂತೆಯೇ ತಮ್ಮ ಮಾತು ಮುಂದುವರೆಸಿದ ರೇಣುಕಾಚಾರ್ಯ, ನಮಗೆ ತಿಳಿದಿರುವ ಮಾಹಿತಿ ಪ್ರಕಾರ ಜಮೀರ್ ಗೆ ಇಂದು ರಾತ್ರಿ ದೆಹಲಿಗೆ ಬರುವಂತೆ ಬುಲಾವ್ ಬಂದಿದೆ. ಇಂದು ರಾತ್ರಿಯೇ ಅವರ ಸಚಿವಸ್ಥಾನದ ಭವಿಷ್ಯ ನಿರ್ಧಾರವಾಗುತ್ತದೆ. ನಾಳೆ ಅವರು ರಾಜಿನಾಮೆ ನೀಡಬಹುದು ಅಥವಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲೂ ಬಹುದು ಎಂದರು.
ಆಂತರಿಕ ಕಚ್ಚಾಟದಿಂದಲೇ ಕಾಂಗ್ರೆಸ್ ಸರ್ಕಾರದ ಪತನ
ಇದೇ ವೇಳೆ ಆಂತರಿಕ ಕಚ್ಚಾಟದಿಂದಲೇ ಕಾಂಗ್ರೆಸ್ ಸರ್ಕಾರದ ಪತನವಾಗಲಿದೆ ಎಂದು ಹೇಳಿದ ಅವರು, 'ರಾಜ್ಯದ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸದೆ ಕುರ್ಚಿ ಕಾಳಗದಲ್ಲಿ ತೊಡಗಿರುವ ಸರ್ಕಾರ ನೂರಕ್ಕೆ ನೂರು ಪತನವಾಗಲಿದೆ.
ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಎಂದರೆ ಡಿ.ಕೆ. ಶಿವಕುಮಾರ್ ನಾನು ಮುಖ್ಯಮಂತ್ರಿ ಆಗಬೇಕು ಎಂದು ಪೈಪೋಟಿ ನಡೆಸುತ್ತಿದ್ದಾರೆ ಎಂದ ಅವರು, ಸೂರ್ಯಚಂದ್ರರು ಇರುವುದು ಎಷ್ಟು ಸತ್ಯವೋ ದಾವಣಗೆರೆ ದಕ್ಷಿಣದಲ್ಲಿ ಶ್ರೀನಿವಾಸ್ ದಾಸಕರಿಯಪ್ಪ ಜಯಶೀಲರಾಗುವುದು ಅಷ್ಟೇ ಸತ್ಯ ಎಂದರು.
ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಎಂಬಂತೆ ಇದೆ. ಬೇಸಿಗೆ ಕಾಲದಲ್ಲಿ ನೀರಿನ ಹಾಹಾಕಾರ ಕಂಡು ಬರುತ್ತಿದೆ. ಸರ್ಕಾರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸದೆ ಬರೀ ಕುರ್ಚಿ ಕಚ್ಚಾಟದಲ್ಲಿ ತೊಡಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಎಷ್ಟು ದಿನ ಇರುತ್ತೋ ಸಚಿವರು ಶಾಸಕರಿಗೇ ಗೊತ್ತಿಲ್ಲ
ಸಂಪುಟದ ಸಚಿವರು, ಶಾಸಕರಿಗೆ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬುದೇ ಗೊತ್ತಿಲ್ಲ. ಹಾಗಾಗಿ ಕುಡಿಯುವ ನೀರಿನ ಸಮಸ್ಯೆ, ತ್ರೈಮಾಸಿಕ ಸಭೆ ನಡೆಸುತ್ತಿಲ್ಲ. ಈ ಸರ್ಕಾರಕ್ಕೆ ರಾಜ್ಯದ ಜನರು ರಸ್ತೆಯಲ್ಲಿ ಛೀಮಾರಿ ಹಾಕುತ್ತಿದ್ದಾರೆ. ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಔಟ್ ಗೋಯಿಂಗ್, ಬಿಜೆಪಿ ಇನ್ ಕಮಿಂಗ್ ಸರ್ಕಾರ ಎಂದು ಜನರು ಹೇಳುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದ ಆರ್ಥಿಕತೆ ಕೇಂದ್ರ ಸರ್ಕಾರಕ್ಕಿಂತಲೂ ಚೆನ್ನಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಸರ್ಕಾರದ ಖಜಾನೆ ಸುಭದ್ರವಾಗಿಲ್ಲ. ಶೇ. 60 ಕಮಿಷನ್ ಸರ್ಕಾರದಲ್ಲಿ ಖಜಾನೆ ಸುಭದ್ರವಾಗಿಲ್ಲ. ನಾಯಕರ ಖಜಾನೆ ಭರ್ತಿ ಆಗಿವೆ. ಕೇಂದ್ರ ಸರ್ಕಾರ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿ 20 ವರ್ಷ ಮುಂದಿದೆ. ರಾಜ್ಯ ಸರ್ಕಾರ ಯಾವುದರಲ್ಲೂ ಕೇಂದ್ರಕ್ಕೆ ಸಾಟಿ ಇಲ್ಲ ಎಂದು ಹೇಳಿದರು.