ಬೆಂಗಳೂರು: ಕೆಲವು 'ಒತ್ತಡ'ಗಳಿಂದಾಗಿ ಸಿದ್ದರಾಮಯ್ಯ 'ಅಸಹಾಯಕ ಪರಿಸ್ಥಿತಿ'ಯಲ್ಲಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಹಾದಿ ತಪ್ಪುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗ ಬಹಿರಂಗ ಸತ್ಯವಾಗಿದ್ದು, ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಮಾಜಿ ಸಚಿವ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 'ತಟಸ್ಥ ಧೋರಣೆ' ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 'ಶಿಸ್ತು' ಉಲ್ಲಂಘನೆಯ ಬಗ್ಗೆ ರಾಜಣ್ಣ ಅತ್ಯಂತ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಪಕ್ಷದ ಕೆಲವು ನಾಯಕರ ವಿರುದ್ಧ ಕ್ರಮ ಕೈಗೊಂಡ ನಂತರ, ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಆಪ್ತರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಹೇಳಿಕೆಗಳ ನಡುವೆಯೇ ಹಿರಿಯ ಶಾಸಕ ಕೆ.ಎನ್. ರಾಜಣ್ಣ ಶುಕ್ರವಾರ ಮುಖ್ಯಮಂತ್ರಿಗಳು "ಅಸಹಾಯಕ" ಮತ್ತು ಕೆಲವು 'ಒತ್ತಡ'ದಿಂದ ತಮ್ಮ ಬೆಂಬಲಿಗ ನಾಯಕರನ್ನು ರಕ್ಷಿಸಲು ನಿಲ್ಲುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಏಪ್ರಿಲ್ 9 ರಂದು ನಡೆದ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ಧ ಆಂತರಿಕ ಪಿತೂರಿ ನಡೆದಿದೆ ಎಂಬ ಆರೋಪದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹತ್ತಿರವೆಂದು ಪರಿಗಣಿಸಲಾದ ಕೆಲವು ಅಲ್ಪಸಂಖ್ಯಾತ ಸಮುದಾಯದ ನಾಯಕರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿತ್ತು. ಕಾಂಗ್ರೆಸ್ ಇತ್ತೀಚೆಗೆ ಎಂಎಲ್‌ಸಿ ಕೆ. ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿತು ಮತ್ತು ಮತ್ತೊಬ್ಬ ಎಂಎಲ್‌ಸಿ ನಸೀರ್ ಅಹ್ಮದ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಿತು.
ಜಬ್ಬಾರ್ ಮತ್ತು ನಸೀರ್ ಅಹ್ಮದ್ ವಿರುದ್ಧದ ಕ್ರಮದ ನಂತರ, ಮುಂದಿನ ಸಚಿವ ಸಂಪುಟ ಪುನರ್ರಚನೆಯ ಸಮಯದಲ್ಲಿ ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರ ಮೇಲೂ ಕ್ರಮ ಕೈಗೊಳ್ಳಬಹುದು ಎಂಬ ಊಹಾಪೋಹ ಕೇಳಿಬರುತ್ತಿದೆ. ಏಕೆಂದರೆ ಈ ಮೂವರು ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ವ್ಯಕ್ತಿಗೆ ಉಪಚುನಾವಣೆ ಟಿಕೆಟ್ ನೀಡಬೇಕೆಂದು ಬಯಸಿದ್ದರು. ಪಕ್ಷವು ದಿವಂಗತ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿತ್ತು. ನಂತರ, ಸಿದ್ದರಾಮಯ್ಯ ಅವರ ಆಪ್ತರು ಎಂದು ಪರಿಗಣಿಸಲಾದ ಮಾಜಿ ಸಚಿವರಿಂದ ಈ ಹೇಳಿಕೆ ಬಂದಿದೆ.
ಸಿದ್ದರಾಮಯ್ಯ 'ಅಸಹಾಯಕ ಪರಿಸ್ಥಿತಿ'.. ರಾಜಣ್ಣ ಹೇಳಿದ್ದೇನು?
ಕೆಲವು 'ಒತ್ತಡ'ಗಳಿಂದಾಗಿ ಸಿದ್ದರಾಮಯ್ಯ 'ಅಸಹಾಯಕ ಪರಿಸ್ಥಿತಿ'ಯಲ್ಲಿದ್ದಾರೆ. ಸಿದ್ದರಾಮಯ್ಯ ಅವರಿಂದ ಇಂಥ ಅಸಹಾಯಕತೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯ ಪರವಾಗಿ ಇರುವವರನ್ನು ಸತತವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಿಎಂ ಗಟ್ಟಿಯಾಗಿ ನಿಲ್ಲಬೇಕಿತ್ತು, ಆದರೆ ಅವರು ಯಾಕೆ ತಟಸ್ಥರಾಗಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ. ಅವರ ಧ್ವನಿ ಕುಗ್ಗಿದಾಗ ನಮಗೂ ಅಸಹಾಯಕತೆ ಎನಿಸುತ್ತದೆ' ಎಂದು ರಾಜಣ್ಣ ಬೇಸರ ವ್ಯಕ್ತಪಡಿಸಿದರು. ಅಂತೆಯೇ ಸಿದ್ದರಾಮಯ್ಯ ಅವರಿಗೆ ಯಾವುದಾದರೂ ಒತ್ತಡ ಇದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.
ಹಾದಿ ತಪ್ಪುತ್ತಿದ್ದಾರ.. ಹೆಸರೆತ್ತದೇ ಡಿಕೆಶಿ ವಿರುದ್ಧ ಟೀಕೆ
ಅಂತೆಯೇ ಪಕ್ಷದ ಶಿಸ್ತಿನ ಬಗ್ಗೆ ಮಾತನಾಡುವ ಡಿ.ಕೆ. ಶಿವಕುಮಾರ್ ವಿರುದ್ಧ ಕೆ.ಎನ್. ರಾಜಣ್ಣ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದದ್ದು, 'ಹಿಂದೆ 'Who is Rahul Gandhi?' (ರಾಹುಲ್ ಗಾಂಧಿ ಅಂದ್ರೆ ಯಾರು?) ಎಂದು ಕೇಳಿದವರ ಜೊತೆ ವೇದಿಕೆ ಹಂಚಿಕೊಳ್ಳುವುದು ಪಕ್ಷದ ಶಿಸ್ತಾ? ರಾಹುಲ್ ಗಾಂಧಿಯವರ ಶತ್ರುಗಳಿಂದ ಆಮಂತ್ರಣ ಬಂದರೂ ಅವರು ಹೋಗುವುದಿಲ್ಲ, ಆದರೆ ಇವರು ಅಂತಹವರ ಮನೆ ಮದುವೆಗಳಿಗೆ ಹೋಗಿ ಬರುತ್ತಾರೆ' ಎಂದು ರಾಜಣ್ಣ ಟೀಕಿಸಿದರು. ಅಲ್ಲದೆ, 'ಪ್ರಯಾಗ್‌ರಾಜ್‌ನಲ್ಲಿ ಹೋಗಿ ಮುಳುಗಿದರೆ ಬಡತನ ಹೋಗುತ್ತಾ ಎಂದು ಎಐಸಿಸಿ ಅಧ್ಯಕ್ಷರೇ ಪ್ರಶ್ನಿಸಿದ್ದರು, ಆದರೆ ಇವರು ಅಲ್ಲಿಗೂ ಹೋಗಿ ಮುಳುಗಿ ಬಂದರು' ಎನ್ನುವ ಮೂಲಕ ಡಿ.ಕೆ. ಶಿವಕುಮಾರ್ ಅವರ ಧಾರ್ಮಿಕ ನಡವಳಿಕೆಗಳನ್ನೂ ರಾಜಕೀಯ ಅಸ್ತ್ರವಾಗಿ ಬಳಸಿದರು ಎಂದು ರಾಜಣ್ಣ ವಾಗ್ದಾಳಿ ನಡೆಸಿದರು.
ಶಿಸ್ತಿನ ಕ್ರಮದಲ್ಲೂ ತಾರತಮ್ಯ
ಪಕ್ಷದಲ್ಲಿ ಶಿಸ್ತು ಎನ್ನುವುದು ಕೇವಲ ಕೆಲವರಿಗೆ ಮಾತ್ರವೇ? ಎಂದು ಪ್ರಶ್ನಿಸಿದ ರಾಜಣ್ಣ, 'ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಶಾಮನೂರು ಶಿವಶಂಕಪ್ಪ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಲಿಲ್ಲ. ಇನ್ನೊಂದು ಪಕ್ಷಕ್ಕೆ ಮತ ಹಾಕಿ ಎನ್ನುವುದು ಪಕ್ಷ ವಿರೋಧಿ ಚಟುವಟಿಕೆ ಅಲ್ವಾ?' ಎಂದು ಪ್ರಶ್ನಿಸುವ ಮೂಲಕ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವದ ದ್ವಂದ್ವ ನೀತಿಯನ್ನು ಅವರು ಎತ್ತಿ ತೋರಿಸಿದರು.
ಅದೇ ರೀತಿ, ದಾವಣಗೆರೆ ದಕ್ಷಿಣಕ್ಕೆ ಪಕ್ಷವು ತನ್ನ ಅಭ್ಯರ್ಥಿಯನ್ನು ಘೋಷಿಸುವ ಮೊದಲು ಸಮರ್ಥ್ ಶಾಮನೂರು ದಾವಣಗೆರೆ ದಕ್ಷಿಣದಲ್ಲಿ ನಾಮಪತ್ರ ಸಲ್ಲಿಸಿದಾಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದು ಕೂಡ ಅಶಿಸ್ತಿನ ಕೃತ್ಯವಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ್ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, 'ಅವರೆಲ್ಲರೂ ಸಂಪುಟದ ಸದಸ್ಯರು, ಯಾರು ಯಾರನ್ನಾದರೂ ಭೇಟಿ ಮಾಡಬಹುದು. ಅದರಲ್ಲಿ ತಪ್ಪು ಭಾವಿಸುವ ಅಗತ್ಯವಿಲ್ಲ. ಆದರೆ ಸಿದ್ದರಾಮಯ್ಯ ಪರ ಇರುವವರನ್ನು ತುಳಿಯುವ ಪ್ರಯತ್ನ ನಡೆದರೆ ನಾವು ಸುಮ್ಮನಿರುವುದಿಲ್ಲ,' ಎಂದು ಎಚ್ಚರಿಸಿದ್ದಾರೆ. ತಮಗೆ ಸಚಿವ ಸ್ಥಾನದ ಆಕಾಂಕ್ಷೆ ಇಲ್ಲ ಎಂದು ಸ್ಪಷ್ಟಪಡಿಸಿದ ರಾಜಣ್ಣ, ಪಕ್ಷದ ನಿಷ್ಠಾವಂತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿರುವುದಾಗಿ ತಿಳಿಸಿದ್ದಾರೆ.
ವಜಾಗೊಂಡಿದ್ದ ರಾಜಣ್ಣ
ಈ ಹಿಂದೆ ಕಾಂಗ್ರೆಸ್ ಪಕ್ಷದ ಉನ್ನತ ನಾಯಕ ರಾಹುಲ್ ಗಾಂಧಿ ಅವರ "ಮತ ಕಳ್ಳತನ" ಆರೋಪವನ್ನು ಟೀಕಿಸಿದ ಹಿನ್ನಲೆಯಲ್ಲಿ, ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ರಾಜಣ್ಣ ಅವರನ್ನು ಕಳೆದ ಆಗಸ್ಟ್‌ನಲ್ಲಿ ಸಚಿವ ಸ್ಥಾನದಿಂದ ಜಾಗೊಳಿಸಲಾಗಿತ್ತು.