ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೊತೆಗೆ ಮಲ್ಲಿಕಾರ್ಜುನ ಖರ್ಗೆ. 
ರಾಜಕೀಯ

ಬೆಲೆ ಏರಿಕೆ ಕಾಂಗ್ರೆಸ್ಸಿನ 6ನೇ ಗ್ಯಾರಂಟಿ, ಜನರ ಹಿತ ಕಾಯುವಲ್ಲಿ ಸೋತಿರುವ ಈ ಭ್ರಷ್ಟ ಸರ್ಕಾರಕ್ಕೆ ನಾಡಿನ ಜನರ ಶಾಪ ತಟ್ಟದೆ ಇರದು: BJP

ಅಧಿಕಾರಕ್ಕೆ ಬರುವ ಮುನ್ನ "200 ಯೂನಿಟ್ ವಿದ್ಯುತ್ ಫ್ರೀ" ಎಂದು ಬಣ್ಣಬಣ್ಣದ ಮಾತುಗಳನ್ನಾಡಿ, ಜನರನ್ನು ನಂಬಿಸಿ ದ್ರೋಹ ಮಾಡಿರುವ ಈ ಸರ್ಕಾರ ಪದೇ ಪದೇ ವಿದ್ಯುತ್ ದರ ಏರಿಸುವ ಮೂಲಕ ಕನ್ನಡಿಗರ ಜೇಬಿಗೆ ಕನ್ನ ಹಾಕುವುದನ್ನೇ ಮುಖ್ಯ ಅಜೆಂಡಾ ಮಾಡಿಕೊಂಡಿದೆ.

ಬೆಂಗಳೂರು: ಬೆಲೆ ಏರಿಕೆಯೇ ಕಾಂಗ್ರೆಸ್ಸಿನ 6ನೇ ಗ್ಯಾರಂಟಿ ಎಂದು ಇಡೀ ರಾಜ್ಯಕ್ಕೆ ಈಗ ಮನವರಿಕೆಯಾಗಿದೆ. ಈ ದರ ಏರಿಕೆಯ ನಿರ್ಧಾರವನ್ನು ಕೂಡಲೇ ಕೈಬಿಡದಿದ್ದರೆ, ಕನ್ನಡಿಗರು ನಿಮ್ಮ ಈ ಭ್ರಷ್ಟ ಮತ್ತು ಜನವಿರೋಧಿ ಆಡಳಿತಕ್ಕೆ ತಕ್ಕ ಪಾಠ ಕಲಿಸುವುದು ಖಂಡಿತ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಎಚ್ಚರಿಕೆ ನೀಡಿದೆ.

ಗೃಹ ವಿದ್ಯುತ್ ದರ ಪರಿಷ್ಕರಣೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರ್.ಅಶೋಕ್ ಅವರು, ಬೆಲೆ ಏರಿಕೆಯ 'ಬಾದ್‌ಷಾ' ಸಿದ್ದರಾಮಯ್ಯ ಅವರು ಕನ್ನಡಿಗರಿಗೆ ಮತ್ತೊಂದು ವಿದ್ಯುತ್ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಕನ್ನಡಿಗರನ್ನು ಮತ್ತೊಮ್ಮೆ ಸುಲಿಗೆ ಮಾಡಲು ಹೊರಟಿದೆ. ಅಧಿಕಾರಕ್ಕೆ ಬರುವ ಮುನ್ನ "200 ಯೂನಿಟ್ ವಿದ್ಯುತ್ ಫ್ರೀ" ಎಂದು ಬಣ್ಣಬಣ್ಣದ ಮಾತುಗಳನ್ನಾಡಿ, ಜನರನ್ನು ನಂಬಿಸಿ ದ್ರೋಹ ಮಾಡಿರುವ ಈ ಸರ್ಕಾರ ಪದೇ ಪದೇ ವಿದ್ಯುತ್ ದರ ಏರಿಸುವ ಮೂಲಕ ಕನ್ನಡಿಗರ ಜೇಬಿಗೆ ಕನ್ನ ಹಾಕುವುದನ್ನೇ ಮುಖ್ಯ ಅಜೆಂಡಾ ಮಾಡಿಕೊಂಡಿದೆ.

ಅದರಲ್ಲೂ ಈ ದರ ಏರಿಕೆಯನ್ನು 2025ರ ಏಪ್ರಿಲ್‌ ತಿಂಗಳಿನಿಂದ ಪೂರ್ವಾನ್ವಯವಾಗುವ ನಿರ್ಧಾರ ಮಾಡಿರುವುದು ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಗೆ ಸ್ಪಷ್ಟ ನಿದರ್ಶನ. ಗೃಹಲಕ್ಷ್ಮಿ ಯೋಜನೆಯಡಿ ಒಂದು ಕೈಯಲ್ಲಿ ಹಣ ಕೊಟ್ಟಂತೆ ನಾಟಕವಾಡಿ, ಕರೆಂಟ್ ಬಿಲ್ ಏರಿಸುವ ಮೂಲಕ ಮತ್ತೊಂದು ಕೈಯಲ್ಲಿ ಜನರ ರಕ್ತ ಹೀರುತ್ತಿರುವುದು ಈ ಸರ್ಕಾರದ ಅಸಲಿ ಮುಖ. ಸ್ಮಾರ್ಟ್ ಮೀಟರ್ ಅಳವಡಿಕೆಯ ಹೆಸರಿನಲ್ಲಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳ ಹಗಲು ದರೋಡೆ ಮಾಡುತ್ತಿರುವ ಈ ಕಾಂಗ್ರೆಸ್ ಸರ್ಕಾರ, ಈಗ ಮತ್ತೊಂದು ದರ ಏರಿಕೆಯ ಮೂಲಕ ಸಾಮಾನ್ಯ ಜನರ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿದೆ.

ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದಿದ್ದರೂ, ಬೆಲೆ ಏರಿಕೆ ಮಾಡುವಲ್ಲಿ ಮಾತ್ರ ಈ ಸರ್ಕಾರ ನಂಬರ್ ಒನ್ ಸ್ಥಾನದಲ್ಲಿದೆ. ಇದು ಕೇವಲ ಬೆಲೆ ಏರಿಕೆಯಲ್ಲ, ಇದು ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ನಡೆಸುತ್ತಿರುವ ದೊಡ್ಡ ವಂಚನೆ. ಬೆಲೆ ಏರಿಕೆಯೇ ಕಾಂಗ್ರೆಸ್ಸಿನ 6ನೇ ಗ್ಯಾರಂಟಿ ಎಂದು ಇಡೀ ರಾಜ್ಯಕ್ಕೆ ಈಗ ಮನವರಿಕೆಯಾಗಿದೆ. ಈ ದರ ಏರಿಕೆಯ ನಿರ್ಧಾರವನ್ನು ಕೂಡಲೇ ಕೈಬಿಡದಿದ್ದರೆ, ಕನ್ನಡಿಗರು ನಿಮ್ಮ ಈ ಭ್ರಷ್ಟ ಮತ್ತು ಜನವಿರೋಧಿ ಆಡಳಿತಕ್ಕೆ ತಕ್ಕ ಪಾಠ ಕಲಿಸುವುದು ಖಂಡಿತ. ರಾಜ್ಯದ ಜನತೆ ದಂಗೆ ಏಳುವ ಮುನ್ನ ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ್ದಾರೆ.

ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ರಾಜ್ಯದ ಆರ್ಥಿಕತೆ ಕೇಂದ್ರ ಸರ್ಕಾರಕ್ಕಿಂತಲೂ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯ ಅಸಲಿಯತ್ತನ್ನು ಅವರದ್ದೇ ಸರ್ಕಾರ ಬಯಲು ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.

ಬಡವರ ಮತ್ತು ಮಧ್ಯಮ ವರ್ಗದವರಿಗೆ ವಿದ್ಯುತ್ ಬೆಲೆ ಏರಿಕೆಯ ಶಾಕ್ ನೀಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 56 ಪೈಸೆ ಹಾಗೂ ಸೆಸ್ಕ್ ವ್ಯಾಪ್ತಿಯಲ್ಲಿ 15 ಪೈಸೆ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಸಾರ್ವಜನಿಕರ ಮೇಲೆ ತನ್ನ ಆರ್ಥಿಕ ಅಸಾಮರ್ಥ್ಯದ ಹೊರೆಯನ್ನು ಜನರ ಮೇಲೆ ಮತ್ತೆ ಹಾಕಿದೆ.

ಅಸಮರ್ಪಕ ಆಡಳಿತ ಮತ್ತು ಆರ್ಥಿಕ ಶಿಸ್ತಿನ ಕೊರತೆಯಿಂದ ಉಂಟಾದ ನಷ್ಟವನ್ನು ಜನರ ಮೇಲೆ ಹೇರುತ್ತಿರುವುದು ಖಂಡನೀಯ. ಒಂದು ಕೈಯಿಂದ ಗ್ಯಾರಂಟಿ, ಉಚಿತ ಎಂದು ಹೇಳುವುದು, ಇನ್ನೊಂದು ಕೈಯಿಂದ ಜನರ, ಬಡವರ, ಹಣವನ್ನು ಲೂಟಿ ಮಾಡುತ್ತಿರುವುದು ಈ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಎಂದು ಕಿಡಿಕಾರಿದ್ದಾರೆ.

ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನತೆಗೆ ಮತ್ತೊಮ್ಮೆ ಈ ವಿದ್ಯುತ್ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದ್ದಲ್ಲದೆ, ಈಗ ರೈತರ ಮತ್ತು ಶ್ರಮಿಕರ ಮೇಲೆ 'ಪವರ್ ಶಾಕ್' ನೀಡುತ್ತಿರುವುದು ಈ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಕೂಡಲೇ ಈ ಜನವಿರೋಧಿ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇವೆ. ಜನರ ಹಿತ ಕಾಯುವಲ್ಲಿ ಸೋತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ಜನರ ಶಾಪ ತಟ್ಟದೆ ಇರದು ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ ನೌಕಾ ದಿಗ್ಬಂಧನ ಮುಂದುವರೆಸಿದರೆ ಹಾರ್ಮುಜ್ ಜಲಸಂಧಿ ಬಂದ್: ಇರಾನ್ ಎಚ್ಚರಿಕೆ, ಇಂಧನ ಮಾರುಕಟ್ಟೆ ಮತ್ತೆ ಅಸ್ಥಿರ..!

ಸೂರ್ಯಾಗೆ ಕೊಕ್?; ಭಾರತ ಟಿ20 ತಂಡದ ನಾಯಕ ಪಟ್ಟಕ್ಕೆ ಶ್ರೇಯಸ್ ಅಯ್ಯರ್, 11ರ ಬಳಗದಲ್ಲಿ ಸ್ಥಾನಕ್ಕೆ ರಜತ್ ಪಟಿದಾರ್ ಪೈಪೋಟಿ!

RCB vs DC: ಬೆಂಗಳೂರಿನಲ್ಲಿ ಇಂದು IPL; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ, ವಾಹನ ನಿಲುಗಡೆ ಮಾಹಿತಿ...

ಹಳೆಯ ಮಹಿಳಾ ಮಸೂದೆ ತನ್ನಿ, ಯಾರು ಮಹಿಳಾ ವಿರೋಧಿ ಎಂಬುದನ್ನು ನೋಡೋಣ- ಪ್ರಿಯಾಂಕಾ ಗಾಂಧಿ

BESCOM ಗ್ರಾಹಕರಿಗೆ ವಿದ್ಯುತ್ ಶಾಕ್: ಆದಾಯ ಕೊರತೆ ತುಂಬಲು ಪ್ರತಿ ಯುನಿಟ್‌ಗೆ 56 ಪೈಸೆ ಹೆಚ್ಚಳ..!

SCROLL FOR NEXT