ಬಾಗಲಕೋಟೆ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಕಿತ್ತಾಟ ಜೋರಾಗಿ ನಡೆದಿದ್ದು, ಡಿ.ಕೆ.ಶಿವಕುಮಾರ ಸಿಎಂ ಆಗಲು ಶಾಲು ಹೊತ್ತುಕೊಂಡು ಕೂತಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಕೇವಲ 15 ದಿನಗಳ ಸರದಾರ ಮಾತ್ರ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ದಿನವೇ ಸಿದ್ಧರಾಮಯ್ಯ ಅವರ ಕುರ್ಚಿ ಫಲಿತಾಂಶ ಪ್ರಕಟ ಆಗಲಿದೆ ಎಂದರು.
ರಾಜ್ಯ ಸರ್ಕಾರದಲ್ಲಿ ಕುರ್ಚಿ ಕಚ್ಚಾಟದಿಂದಾಗಿ ವಿಧಾನಸೌಧದಲ್ಲಿ ಆಡಳಿತವೇ ಇಲ್ಲದಂತಾಗಿದೆ. ಮೇ 4 ರಂದು ಐದು ರಾಜ್ಯಗಳ ಚುನಾವಣೆ ಫಲಿತಾಂಶ ಬರುತ್ತದೆ. ಅಂದು ದಾವಣಗೆರೆ ಮತ್ತು ಬಾಗಲಕೋಟೆ ಫಲಿತಾಂಶ ಸಹ ಬರುತ್ತದೆ. ಅದರ ಜೊತೆಗೆ ಸಿದ್ದರಾಮಯ್ಯ ಅವರ ಕುರ್ಚಿಯ ರಿಸಲ್ಟ್ ಕೂಡ ಬರಲಿದೆ ಎಂದರು. ಮಾಹಿತಿ ಪ್ರಕಾರ ಸಿದ್ಧರಾಮಯ್ಯ ಬೆಂಬಲಿಗ 40 ಜನ ಶಾಸಕರು, ಡಿ.ಕೆ.ಶಿವಕುಮಾರ ಪರವಾಗಿ 50 ಶಾಸಕರು ಹೈಕಮಾಂಡ್ ಬಳಿ ಹೋಗಿ ಲಾಭಿ ನಡೆಸುತ್ತಿದ್ದಾರೆ ಎಂದು ಹೇಳಿದರು.
ಬೇಸಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಅದನ್ನು ಪರಿಹರಿಸುವತ್ತ ಗಮನಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲೆಗೆ ಕನಿಷ್ಠ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರ್ಣಯ ಮಾಡಿದ ಒಳಮೀಸಲಾತಿ, ಅದು ಒಳ ಮೀಸಲಾತಿಯೇ ಅಲ್ಲ. ಒಳ ಮೀಸಲಾತಿಯೆಂದರೆ ಎಷ್ಟೇ ಹುದ್ದೆಗಳಿದ್ದರೂ ಆ ಹುದ್ದೆಗಳಿಗೆ ಅದು ಅನ್ವಯ ಆಗಬೇಕು. ತಾರತಮ್ಯ ಆಗಬಾರದು. ಆದರೆ, ಈ ತಾರತಮ್ಯ ನಿಮ್ಮವರಿಂದಲೇ ಆಗಿದೆ ಎಂದು ಕಾರಜೋಳ ಗಂಭೀರ ಆರೋಪ ಮಾಡಿದ್ದಾರೆ.
ವೈಜ್ಞಾನಿಕವಾಗಿ ನಾಗಮೋಹನದಾಸ್ ಅವರು ವರದಿಯನ್ನು ಕೊಟ್ಟಿದ್ದರು. ಆದರೆ, ಅದನ್ನು ನೀವು ಅವೈಜ್ಞಾನಿಕ ಎಂದು ಹೇಳಿದಿರಿ. ಮಾಧುಸ್ವಾಮಿ ಅವರ ವರದಿ, ನ್ಯಾಯಮೂರ್ತಿ ಸದಾಶಿವಯ್ಯನವರ ವರದಿ ಇವೆಲ್ಲವೂ ಅವೈಜ್ಞಾನಿಕ ಅಂತ ನೀವು ಘೋಷಣೆ ಮಾಡಿದರೆ, ಅದನ್ನು ಜನರಿಗೆ ತಿಳಿಸಿ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಅವರಿಂದ ಕಮಿಟಿ ಮಾಡಿ ಅವರಿಂದ ವರದಿ ತೆಗೆಸಿಕೊಂಡು ಮಾಡುವಂಥದ್ದು ಏನಿತ್ತು? ಒಳಮೀಸಲಾತಿ ಸರ್ವೆ ಮಾಡುವುದಕ್ಕೆ ಸಾವಿರಾರು ಕೋಟಿ ಖರ್ಚು ಮಾಡಿದ್ದೀರಿ. ಏನು ಪ್ರಯೋಜನ ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ದಲಿತ ನಾಯಕರಿಂದ ಸಂಭ್ರಮಾಚರಣೆ ಕುರಿತು ಮಾತನಾಡಿದ ಅವರು, ಕೆಲವರು ಸಂಭ್ರಮಾಚರಣೆಯನ್ನು ಮಾಡುತ್ತಿದ್ದಾರಲ್ಲ, ಅವರಿಗೆ ತವರು ಮನೆ ಯಾವುದು ಅಂತ ಗೊತ್ತಿಲ್ಲ. ಗಂಡನ ಮನೆಯೂ ಗೊತ್ತಿಲ್ಲ. ಗಂಡನ ಮನೆ ಹಾಗೂ ತವರು ಮನೆ ವ್ಯತ್ಯಾಸ ಗೊತ್ತಿಲ್ಲದವರಿಗೆ ಏನು ಹೇಳುವುದಕ್ಕೆ ಆಗುತ್ತದೆ? ಕೆಲವು ಕೋಳಿಗಳಿಗೆ ಕಾಳು ಹಾಕಿರುತ್ತಾರೆ. ಕಾಳು ತಿನ್ನುವ ಸಲುವಾಗಿ ಹೀಗೆಲ್ಲ ಮಾಡುತ್ತವೆ ಎಂದು ಕಾಂಗ್ರೆಸ್ ದಲಿತ ನಾಯಕರಿಗೆ ತೀಕ್ಷ್ಣವಾಗಿ ಹೇಳಿದರು.