ಗದಗ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿ.ಸಿ. ಪಾಟೀಲ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹೊಸ ಸಚಿವರ ಪಟ್ಟಿಯನ್ನು ಎಐಸಿಸಿ (AICC) ಲೆಟರ್‌ಹೆಡ್‌ನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರ ಸಹಿಯೊಂದಿಗೆ ಬಿಡುಗಡೆ ಮಾಡಿರುವುದರ ವಿರುದ್ಧ ಕಿಡಿಕಾರಿರುವ ಅವರು, "ರಾಜ್ಯವನ್ನು ನಿಜವಾಗಿ ನಡೆಸುತ್ತಿರುವವರು ಯಾರು? ವೇಣುಗೋಪಾಲ್, ರಂದೀಪ್ ಸುರ್ಜೇವಾಲಾ ಅಥವಾ ಮಲ್ಲಿಕಾರ್ಜುನ ಖರ್ಗೆ?" ಎಂದು ಪ್ರಶ್ನಿಸಿದ್ದಾರೆ.
ಗದಗದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ವೇಣುಗೋಪಾಲ್ ಸಹಿ ಇರುವ ಪತ್ರದ ಮೂಲಕವೇ ಸಚಿವರ ಪಟ್ಟಿ ಪ್ರಕಟವಾಗಿದೆ. ಹಾಗಾದರೆ ವಿಧಾನಸಭೆ ಸ್ಪೀಕರ್ ಮತ್ತು ಉಪಸಭಾಧ್ಯಕ್ಷರ ನೇಮಕವನ್ನೂ ಹೈಕಮಾಂಡ್‌ನಿಂದಲೇ ಮಾಡಲಾಗುತ್ತದೆಯೇ?" ಎಂದು ವ್ಯಂಗ್ಯವಾಡಿದರು.
ಸಚಿವರ ಆಯ್ಕೆ ಕುರಿತೂ ಟೀಕಿಸಿದ ಅವರು, "ಕಾಂಗ್ರೆಸ್‌ನಲ್ಲಿ ಭ್ರಷ್ಟರಿಗೆ ಬಹುಮಾನ ಸಿಕ್ಕಂತಾಗಿದೆ. ಆರೋಪ ಎದುರಿಸುತ್ತಿರುವವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗಿದೆ. ಸುಮಾರು ಒಂದು ಡಜನ್ ಸಚಿವರನ್ನು ಕೈಬಿಡಲಾಗಿದೆ. ಗದಗ ಸೇರಿದಂತೆ 10 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವೇ ಸಿಕ್ಕಿಲ್ಲ ಎಂದು ಆರೋಪಿಸಿದರು.
ಇಂತಹ ಸಚಿವ ಸಂಪುಟವನ್ನು ರಾಜ್ಯದ ಜನರು ಹಿಂದೆಂದೂ ನೋಡಿಲ್ಲ, ಮಹಿಳಾ ಮೀಸಲು ಮಸೂದೆಯನ್ನು ಕಾಂಗ್ರೆಸ್ ವಿರೋಧಿಸಿತ್ತು. ಈಗ 20 ಸಚಿವರ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ ಎಂದು ಟೀಕಿಸಿದರು.
ಇದೇ ವೇಳೆ ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಕೂಡಲೇ ಬರ ಪರಿಸ್ಥಿತಿಯನ್ನು ಘೋಷಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಸಿ.ಸಿ. ಪಾಟೀಲ್ ಆಗ್ರಹಿಸಿದರು.