ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮತ್ತೆ ಆಡಳಿತರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳು ಆರಂಭವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ಮೆಟ್ರೋ ಕೇವಲ ಸಾರಿಗೆ ವ್ಯವಸ್ಥೆಯಲ್ಲ, ಇದು ಲಕ್ಷಾಂತರ ದುಡಿಯುವ ಜನರು, ವಿದ್ಯಾರ್ಥಿಗಳು ಮತ್ತು ಕುಟುಂಬಗಳ ಜೀವನಾಡಿಯಾಗಿದೆ ಮತ್ತು ನಮ್ಮ ನಗರದ ಆಕಾಂಕ್ಷೆಗಳ ಸಂಕೇತವಾಗಿದೆ. ಆದರೆ ಇತ್ತೀಚಿನ ದರ ಪರಿಷ್ಕರಣೆಯ ಬಗ್ಗೆ ಪ್ರಯಾಣಿಕರ ಕಾಳಜಿ ಮತ್ತು ವೇದನೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಕರ್ನಾಟಕದ ಜನ ಸತ್ಯವನ್ನು ತಿಳಿದುಕೊಳ್ಳಬೇಕು, ಇದು ರಾಜಕೀಯ ವಂಚನೆಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೆಟ್ರೋ ಪ್ರಯಾಣ ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ. ಇದು ಕೇಂದ್ರ ಸರ್ಕಾರದ ಕಾಯ್ದೆಯಡಿ ರಚನೆಯಾದ ಸಮಿತಿಯ ತೀರ್ಮಾನವಾಗಿದ್ದು, ಅದನ್ನು ಜಾರಿಗೊಳಿಸುವುದು ಕಾನೂನಿನ ಅನಿವಾರ್ಯತೆಯಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಮೆಟ್ರೋ ದರಗಳನ್ನು ಕರ್ನಾಟಕ ಸರ್ಕಾರ ನಿರ್ಧರಿಸುವುದಿಲ್ಲ. ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ- 2002ರ ಅನ್ವಯ, ಮೆಟ್ರೋ ದರಗಳನ್ನು ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುವುದಿಲ್ಲ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ರಚಿಸುವ ಸ್ವತಂತ್ರ 'ದರ ನಿಗದಿ ಸಮಿತಿ' ಮಾತ್ರ ದರಗಳನ್ನು ನಿರ್ಧರಿಸುತ್ತದೆ.
ಕಾಯ್ದೆಯ ಸೆಕ್ಷನ್ 37ರ ಪ್ರಕಾರ, ಈ ಸಮಿತಿಯ ಶಿಫಾರಸುಗಳು ಮೆಟ್ರೋ ಆಡಳಿತ ಮಂಡಳಿಗೆ ಕಡ್ಡಾಯವಾಗಿರುತ್ತವೆ. ಈ ಶಿಫಾರಸುಗಳನ್ನು ತಿರಸ್ಕರಿಸುವ ಅಥವಾ ಬದಲಾಯಿಸುವ ಕಾನೂನುಬದ್ಧ ಅಧಿಕಾರ ರಾಜ್ಯ ಸರ್ಕಾರಕ್ಕಾಗಲಿ ಅಥವಾ ಬಿಎಂಆರ್‌ಸಿಎಲ್‌ಗಾಗಲಿ ಇರುವುದಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಕರ್ನಾಟಕ ಸರ್ಕಾರವನ್ನು ದೂಷಿಸುವುದು ವಾಸ್ತವಿಕವಾಗಿ ತಪ್ಪು ಮತ್ತು ಉದ್ದೇಶಪೂರ್ವಕವಾಗಿ ದಾರಿತಪ್ಪಿಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಕೇಂದ್ರಕ್ಕೆ ಪತ್ರ
ಕಾನೂನು ಚೌಕಟ್ಟು ಏನೇ ಇದ್ದರೂ, ರಾಜ್ಯ ಸರ್ಕಾರವು ಜನರ ಪರವಾಗಿ ನಿಲ್ಲಲಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
'ಜನಸಾಮಾನ್ಯರಿಗೆ ಹೊರೆಯಾಗಿರುವ ಈ ದರ ಏರಿಕೆಯನ್ನು ಮರುಪರಿಶೀಲಿಸುವಂತೆ ಕೋರಿ ನಾನು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ದರ ನಿಗದಿ ಸಮಿತಿಯ ಶಿಫಾರಸುಗಳನ್ನು ಮರುಪರಿಶೀಲಿಸಬೇಕು ಮತ್ತು ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಕಡಿಮೆ ಆದಾಯದ ವರ್ಗಗಳಿಗೆ ರಿಯಾಯಿತಿ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ. ಆರ್ಥಿಕ ಸುಸ್ಥಿರತೆಯ ಜೊತೆಗೆ ಸಾಮಾಜಿಕ ನ್ಯಾಯವನ್ನೂ ಕಾಪಾಡುವ ನೀತಿಗಳನ್ನು ರೂಪಿಸಲು ಕೇಂದ್ರವನ್ನು ಕೋರುತ್ತೇನೆ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ
ರಾಜ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ ಅವರು, ದುರದೃಷ್ಟವಶಾತ್, ದೆಹಲಿಯಲ್ಲಿ ಕರ್ನಾಟಕದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲರಾದ ಬಿಜೆಪಿ ನಾಯಕರು ಈಗ ಬೆಂಗಳೂರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.
ಬಿಜೆಪಿ ಸಂಸದರು ಸಂಸತ್ತಿನಲ್ಲಿ ಇದನ್ನು ಬಲವಾಗಿ ಏಕೆ ಪ್ರಸ್ತಾಪಿಸಲಿಲ್ಲ? ಮೆಟ್ರೋ ದರ ಏರಿಕೆಯನ್ನು ಬಿಜೆಪಿ ಸಚಿವರು ಏಕೆ ವಿರೋಧಿಸಲಿಲ್ಲ?
ರಾಜ್ಯ ಬಿಜೆಪಿ ನಾಯಕರು ಬೆಂಗಳೂರಿಗರ ಪರವಾಗಿ ನಿಲ್ಲುವ ಬದಲು ದೆಹಲಿ ನಾಯಕರ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಅವರಿಗೆ ಕರ್ನಾಟಕದ ಜನರಿಗಿಂತ ಹೈಕಮಾಂಡ್ ಮೆಚ್ಚಿಸುವುದೇ ಮುಖ್ಯವಾಗಿದೆ. ಅವರು ಮೊದಲು ಮೊಸಳೆ ಕಣ್ಣೀರು ಹಾಕುವುದನ್ನು ನಿಲ್ಲಿಸಲಿ ಎಂದಿದ್ದಾರೆ.