ಬೆಂಗಳೂರು: ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಬರುವಂತೆ ಸೂಚಿಸಿದ್ದಾರೆ. ಆದರೆ, ಸಭೆಯ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ ಎಂದು ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಬುಧವಾರ ಹೇಳಿದರು.
ಬೆಂಗಳೂರಿನಲ್ಲಿ ANI ಜೊತೆ ಮಾತನಾಡಿದ ವಿಧಾನಸಭೆ ಮುಖ್ಯ ಸಚೇತಕ ಪಟ್ಟಣ್, 'ನಿನ್ನೆ ರಾಹುಲ್ ಗಾಂಧಿ ಇಬ್ಬರಿಗೂ (ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್) ದೆಹಲಿಗೆ ಬರುವಂತೆ ಹೇಳಿದ್ದಾರೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ. ದಿನಾಂಕ ನಿಗದಿಪಡಿಸಿದ ನಂತರ ಇಬ್ಬರೂ ನಾಯಕರು ದೆಗಲಿಗೆ ಹೋಗುತ್ತಾರೆ' ಎಂದು ಅವರು ಹೇಳಿದರು.
ಮೊದಲು ಡಿಕೆ ಶಿವಕುಮಾರ್ ಮಾತನಾಡಬೇಕು ಎಂದರು. ಆಗ ಇಬ್ಬರು ದೆಹಲಿಗೆ ಬನ್ನಿ ಎಂದು ರಾಹುಲ್ ಗಾಂಧಿ ಹೇಳಿದರು ಮತ್ತು ದೆಹಲಿಗೆ ಹೋದ ಮೇಲೆ ಎಲ್ಲವನ್ನೂ ಸರಿಪಡಿಸುವುದಾಗಿ ಹೇಳಿದ್ದಾರೆ. ಸಂಕ್ರಾಂತಿ ನಂತರ ಉಭಯ ನಾಯಕರು ದೆಹಲಿಗೆ ಹೋಗಬಹುದು. ಮುಖ್ಯಮಂತ್ರಿ ಮತ್ತು ಡಿಸಿಎಂ ದೆಹಲಿ ಭೇಟಿಯ ನಂತರ ನೂರಕ್ಕೆ ನೂರು ಗೊಂದಲ ಸರಿ ಹೋಗುತ್ತದೆ. ನಾವೆಲ್ಲ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದರು.
'ಈ ಭೇಟಿ ವೇಳೆ ಸಂಪುಟ ವಿಸ್ತರಣೆ ಸೇರಿ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆಯಾಗಲಿದೆ. ಸಂಪುಟ ಪುನರ್ ರಚನೆಯಾಗಬೇಕು ಎಂದು ನನಗೂ ಆಸೆ ಇದೆ. ನಾವೆಲ್ಲರೂ ಸಂಪುಟ ಪುನರ್ ರಚನೆಯನ್ನು ಒತ್ತಾಯಿಸುತ್ತೇವೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನಾನು ಮಂತ್ರಿ ಆಗಬೇಕು. ಇದೆಲ್ಲದರ ಬಗ್ಗೆ ದೆಹಲಿಯಲ್ಲಿ ಮಾತನಾಡುತ್ತಾರೆ' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಅವರು ಜರ್ಮನ್ ಚಾನ್ಸೆಲರ್ ಅನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಿಲ್ಲ ಎಂಬ ಬಿಜೆಪಿ ಟೀಕೆಯನ್ನು ತಳ್ಳಿಹಾಕಿದ ಪಟ್ಟಣ್, ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಸಣ್ಣ ವಿಷಯವನ್ನು ದೊಡ್ಡದನ್ನಾಗಿ ಮಾಡುತ್ತಿವೆ ಎಂದು ದೂರಿದರು.
'ನಮ್ಮ ನಾಯಕರು ನಮಗೆ ಬಹಳ ಮುಖ್ಯ; ಅದಕ್ಕಾಗಿಯೇ ನಾವು ರಾಹುಲ್ ಗಾಂಧಿಯನ್ನು ಬರಮಾಡಿಕೊಳ್ಳಲು ಅಲ್ಲಿಗೆ ಹೋಗಿದ್ದೆವು. ನಾವು ಅಲ್ಲಿಗೆ ಹೋಗಿ ಅವರನ್ನು (ಜರ್ಮನ್ ಚಾನ್ಸೆಲರ್) ಬರಮಾಡಿಕೊಳ್ಳಲು ಬಯಸಿದ್ದೆವು. ಆದರೆ, ಅನಿರೀಕ್ಷಿತ ಕಾರ್ಯಕ್ರಮದಿಂದಾಗಿ ಅದು ಸಾಧ್ಯವಾಗಲಿಲ್ಲ. ಬಿಜೆಪಿಗೆ ಮಾಡಲು ಏನೂ ಇಲ್ಲ. ಹೀಗಾಗಿಯೇ, ಅವರು ಸಣ್ಣ ಸಮಸ್ಯೆಗಳನ್ನು ದೊಡ್ಡದಾಗಿ ಪರಿವರ್ತಿಸುತ್ತಾರೆ. ಮೊದಲು, ಅವರು ತಮ್ಮ ಆಂತರಿಕ ಜಗಳವನ್ನು ಪರಿಹರಿಸಿಕೊಳ್ಳಬೇಕು' ಎಂದು ತಿಳಿಸಿದರು.
ಇಂದು ಮುಂಜಾನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗುಡಲೂರಿಗೆ ಪ್ರಯಾಣಿಸುತ್ತಿದ್ದರು ಮತ್ತು ದಾರಿಯಲ್ಲಿ ಅವರನ್ನು ಭೇಟಿಯಾದೆವು. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ಗೊಂದಲ ಉಂಟಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪಕ್ಷದೊಳಗೆ ಅಂತಹ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ಊಹಾಪೋಹ 'ಸಂಪೂರ್ಣವಾಗಿ ಮಾಧ್ಯಮಗಳ ಸೃಷ್ಟಿ' ಎಂದು ಲೇವಡಿ ಮಾಡಿದರು.
ಈ ವಿಷಯದ ಬಗ್ಗೆ ಪಕ್ಷದ ಕೆಲವು ಶಾಸಕರು ಇತ್ತೀಚೆಗೆ ಮಾಡಿದ ಹೇಳಿಕೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಅವರಿಗೆ ಪರಿಸ್ಥಿತಿಯ ಸಂಪೂರ್ಣ ಅರಿವು ಇಲ್ಲ. ಈ ವಿಷಯದ ಬಗ್ಗೆ ಮಾತನಾಡಲು ತಮಗೆ ಅಥವಾ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಾತ್ರ ಅಧಿಕಾರವಿದೆ. ಮಾಧ್ಯಮಗಳು ಶಾಸಕರಿಗಿಂತ ಹೆಚ್ಚಾಗಿ ಈ ವಿಷಯವನ್ನು ಚರ್ಚಿಸುತ್ತಿವೆ ಎಂದು ಹೇಳಿದರು.