ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇದು ಈವರೆಗೆ ಸಾಧ್ಯವಾಗಿಲ್ಲ.
ಜನವರಿ 22 ರಿಂದ ಪ್ರಾರಂಭವಾಗುವ ಏಳು ದಿನಗಳ ವಿಶೇಷ ಶಾಸಕಾಂಗ ಅಧಿವೇಶನ ಮತ್ತು ಮಾರ್ಚ್‌ನಲ್ಲಿ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ, ಸಿದ್ದರಾಮಯ್ಯ ಮತ್ತು ಡಿಕೆಶಿ ತಂಡ ಹೈಕಮಾಂಡ್‌ನ ನಿರ್ಧಾರಕ್ಕಾಗಿ ಕುತೂಹಲದಿಂದ ಕಾಯುತ್ತಿವೆ. ಜನವರಿ 18 ರಂದು ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸಲು ದಾವೋಸ್‌ಗೆ ಭೇಟಿ ನೀಡುವುದನ್ನು ರದ್ದುಗೊಳಿಸಿದ ಶಿವಕುಮಾರ್, ರಾಷ್ಟ್ರ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ.
ಉಪಮುಖ್ಯಮಂತ್ರಿ ಅವರು ರಾಜಕೀಯ ಮಾಡಲು ಅಲ್ಲಿದ್ದಾರೆ ಎಂದು ಒಪ್ಪಿಕೊಂಡರು, ಆದರೆ ಭಾನುವಾರ ಅವರು ಯಾವ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು. ನಾವು ರಾಜಕಾರಣಿಗಳು, ಮತ್ತು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಕೆಲಸ. ಅಗತ್ಯಕ್ಕೆ ತಕ್ಕಂದೆ ವಿವಿಧ ನಾಯಕರೊಂದಿಗೆ (ಹೈಕಮಾಂಡ್ ನಾಯಕರು) ಸಭೆಗಳನ್ನು ನಾವು ನಾವು ನಡೆಸುತ್ತೇವೆ ನೀವು (ಮಾಧ್ಯಮ) ಇದನ್ನು ಏಕೆ ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದೀರಿ? ನಾನು ಸರ್ಕಾರಿ ಕೆಲಸ, ಪಕ್ಷದ ಕೆಲಸ ಮತ್ತು ರಾಜಕೀಯ ಕೆಲಸಕ್ಕಾಗಿ ಇಲ್ಲಿದ್ದೇನೆ ಎಂದರು,
ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ, ಶಿವಕುಮಾರ್ ಅವರನ್ನು ಅಸ್ಸಾಂಗೆ ಮತ್ತು ಕೇರಳಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಇದು ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಲು ಇಬ್ಬರಿಗೂ ಅವಕಾಶ ನೀಡಿದೆ ಮತ್ತು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಪಾಳಯದ ಸದಸ್ಯರೆಂದು ಪರಿಗಣಿಸಲಾದ ಜಾರ್ಜ್, ರಾಹುಲ್ ಗಾಂಧಿ ಅವರನ್ನು ಭೇಟಿಯಾದರು, ಆದರೆ ಸೋನಿಯಾ ಗಾಂಧಿ ಅವರು ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅವರು ಭಾನುವಾರ ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರನ್ನು ಭೇಟಿ ಮಾಡಿದ್ದಾರೆ.
"ಮಾಜಿ ರಕ್ಷಣಾ ಸಚಿವ, ಸಿಡಬ್ಲ್ಯೂಸಿ ಸದಸ್ಯ ಮತ್ತು ಗೌರವಾನ್ವಿತ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ. ಆಂಟನಿ ಅವರನ್ನು ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ,. ಇದೊಂದು ಸೌಜನ್ಯಯುತ ಭೇಟಿಯಾಗಿದೆ. ಅವರ ಮಾರ್ಗದರ್ಶನ ಪಡೆದಿದ್ದೇನೆ. ಅವರ ವಿಶ್ವಾಸಕ್ಕೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ, ಅಧಿಕಾರ ಹಂಚಿಕೆಯ ಬಗ್ಗೆ ಇರುವ ಗೊಂದಲವು ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಹೈಕಮಾಂಡ್ ಶೀಘ್ರದಲ್ಲೇ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.