ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ online desk
ರಾಜಕೀಯ

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನಿರಾಕರಿಸಿರುವ ಸಿಎಂಗೆ ಅಹಿಂದ ರ‍್ಯಾಲಿ ನಡೆಸುವ ನೈತಿಕ ಹಕ್ಕಿಲ್ಲ: HDK

ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ರಾಜ್ಯದ 5 ಕಡೆ ಅಹಿಂದ ಸಮಾವೇಶವನ್ನು ನಡೆಸಿ ಅಹಿಂದ ಚಾಂಪಿಯನ್ ಆಗಲು ಹೊರಟಿರುವ ಸಿದ್ದರಾಮಯ್ಯ, ಅಹಿಂದ ಸಮುದಾಯದ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ.

ಹಾಸನ: ಹಿಂದುಳಿದ ವರ್ಗಗಳಿಗೆ ಸೇರಿದ 1.64 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ರಾಜ್ಯ ಸರ್ಕಾರ ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಹಿಂದ ರ‍್ಯಾಲಿ ನಡೆಸಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಬುಧವಾರ ಕಿಡಿಕಾರಿದ್ದಾರೆ.

ಹಾಸನದಲ್ಲಿ ಜ.24ರಂದು ನಡೆಯಲಿರುವ ಜೆಡಿಎಸ್‌ನ ಜನತಾ ಸಮಾವೇಶದ ಸಿದ್ಧತೆಗಳನ್ನು ಪರಿಶೀಲಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ರಾಜ್ಯದ 5 ಕಡೆ ಅಹಿಂದ ಸಮಾವೇಶವನ್ನು ನಡೆಸಿ ಅಹಿಂದ ಚಾಂಪಿಯನ್ ಆಗಲು ಹೊರಟಿರುವ ಸಿದ್ದರಾಮಯ್ಯ, ಅಹಿಂದ ಸಮುದಾಯದ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದರು.

ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯದ 1.60 ಲಕ್ಷ ವಿದ್ಯಾರ್ಥಿಗಳಿಗೆ ಕಳೆದ ಮಕ್ಕಳಿಗೆ 3 ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡಿಲ್ಲ. ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಇದೇ ವೇಳೆ ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಇದು ಈ ಸರ್ಕಾರದ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದ ಶಾಸಕರು ಹಲವಾರು ಅವಮಾನಗಳನ್ನು ಎದುರಿಸುತ್ತಿದ್ದಾರೆ. ಶಾಸಕರಿಗೆ ಬೆದರಿಕೆ ಹಾಕಲಾಗುತ್ತಿರುವುದರಿಂದ, ಅಧಿಕಾರಿಗಳು ಉದ್ಧಟತನದಿಂದ ವರ್ತಿಸುತ್ತಿರುವುದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ.

ಅಧಿಕಾರಿಗಳ ನಡುವಳಿಕೆ, ಭ್ರಷ್ಟಾಚಾರದ ಬಗ್ಗೆ ಯಾವುದೇ ರೀತಿ ಚರ್ಚೆ ಮಾಡಲು ಆಗದಂತಹ ಅಸಹ್ಯ ವಾತಾವರಣ ನಿರ್ಮಾಣ ಮಾಡಿದ್ದಾರೆ. ಸರ್ಕಾರದ ವರ್ಗಾವಣೆ ನೀತಿಯಿಂದ ಶಿಸ್ತನ್ನು ಕಾಪಾಡಲು ಆಗುತ್ತಿಲ್ಲ ಎಂದು ಪ್ರಾಮಾಣಿಕ ಅಧಿಕಾರಿಗಳೇ ಹೇಳಿದ್ದಾರೆ. 80 ಕ್ರಿಮಿನಲ್‌ ಪ್ರಕರಣಗಳು ಪೊಲೀಸ್ ಅಧಿಕಾರಿಗಳ ಮೇಲಿದೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಅಂಥ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜನೆ ಮಾಡಿದರೆ, ಅಂಥವರಿಂದ ಯಾವ ರೀತಿಯ ಕೆಲಸ ಆಗಲಿದೆ ಎಂಬುದು ಎಲ್ಲರಿಗೂ ಅರ್ಥವಾಗುವಂಥದ್ದು ಎಂದು ಲೇವಡಿ ಮಾಡಿದರು.

ಡಿಜಿಪಿ ರಾಮಚಂದ್ರರಾವ್ ಪ್ರಕರಣ ಕುರಿತು ಮಾತನಾಡಿ, ರಾಮಚಂದ್ರರಾವ್ ಅನೈತಿಕ ಚಟುವಟಿಕೆಯ ವಿಷಯ ಗೊತ್ತಾದ ತಕ್ಷಣವೇ ಸರ್ಕಾರ ಅಮಾನತು ಮಾಡಬೇಕಿತ್ತು. ಆ ಅಧಿಕಾರಿಯ ಅಕ್ರಮಗಳ ಬಗ್ಗೆ ನಾನು 2015-16ರಲ್ಲೇ ಪ್ರಸ್ತಾಪಿಸಿದ್ದೆ. ಆತ ಮೈಸೂರಿನಲ್ಲಿ ಐಜಿಪಿ ಆಗಿದ್ದಾಗ ಚಿನ್ನದ ವ್ಯಾಪಾರಿಯಿಂದ 3 ಕೋಟಿ ರೂ. ಕಸಿದುಕೊಂಡು ಸಿಕ್ಕಿಬಿದ್ದಿದ್ದ. ಆಗಲೂ ಸಿದ್ದರಾಮಯ್ಯ ಸರ್ಕಾರವೇ ಪ್ರಕರಣವನ್ನು ಮುಚ್ಚಿ ಹಾಕಿತ್ತು ಎಂದು ಆರೋಪಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ

ಇದೇ ವೇಳೆ ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳನ್ನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಎದುರಿಸಲು ಜೆಡಿಎಸ್ ನಿರ್ಧರಿಸಿದೆ ಎಂದು ಕುಮಾರಸ್ವಾಮಿಯವರು ಹೇಳಿದರು.

ಜೆಡಿಎಸ್ ಮತ್ತು ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಾಧಕ-ಬಾಧಕಗಳನ್ನು ಚರ್ಚಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಗೊಂದಲ ಆಗಬಾರದು ಎಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಯಲ್ಲಿ ಮೈತ್ರಿ ಬಗ್ಗೆ ಎಚ್‌.ಡಿ.ದೇವೇಗೌಡರು ಮಾತನಾಡಿದ್ದಾರೆ. ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಾಧ್ಯವಾದ ಮಟ್ಟಿಗೆ ಮೈತ್ರಿ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಉಭಯ ಪಕ್ಷಗಳ ನಾಯಕರು ಕುಳಿತು ಚರ್ಚಿಸುತ್ತೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ ನೇಮಕಾತಿ ವಯೋಮಿತಿ 5 ವರ್ಷ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

ಐಷಾರಾಮಿ ರಿಯಲ್ ಎಸ್ಟೇಟ್ ಮೂಲಕ ಅಮೆರಿಕದಿಂದ 'ಹೊಸ ಗಾಜಾ' ಕಟ್ಟುವ ಭರವಸೆ!

ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತದಿಂದ ಮುರಳಿ ಕೃಷ್ಣ ಸಾವು!

1997ರ ಮಂಗಳೂರು ಡಬಲ್ ಮರ್ಡರ್ ಪ್ರಕರಣ: 29 ವರ್ಷಗಳ ಬಳಿಕ ಕುಖ್ಯಾತ 'ದಂಡುಪಾಳ್ಯ ಗ್ಯಾಂಗ್' ಸದಸ್ಯನ ಬಂಧನ!

ಟ್ರಂಪ್ ರ 'ಶಾಂತಿ ಮಂಡಳಿ' ಸೇರಲು ಭಾರತ ನಕಾರ; ಪಾಕಿಸ್ತಾನ ಸಹಿ!

SCROLL FOR NEXT