ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಟೀಕೆ ಮಾಡುವ ಅಂಶಗಳನ್ನು ಸೇರಿಸದೆ, ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಕಾರಾತ್ಮಕ ಒಕ್ಕೂಟ ವ್ಯವಸ್ಥೆಯಡಿ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ಅವಕಾಶ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬುಧವಾರ ಒತ್ತಾಯಿಸಿದ್ದಾರೆ.
ರಾಜ್ಯಪಾಲರು ಭಾಷಣ ಮಾಡಲು ಎಲ್ಲೂ ವಿರೋಧಿಸಿಲ್ಲ. ರಾಜ್ಯ ಸರ್ಕಾರ ಸುಳ್ಳು ಹಾಗೂ ತಪ್ಪು ಮಾಹಿತಿ ಹರಡುವುದಕ್ಕೆ ಮತ್ತು ಜನಸಾಮಾನ್ಯರನ್ನು ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದನ್ನು ಮಾತ್ರ ವಿರೋಧಿಸಿದ್ದಾರೆಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ನಿರಂತರವಾಗಿ ಕೇಂದ್ರ ಸರ್ಕಾರದ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಈ ರೀತಿಯ ಅಪಪ್ರಚಾರಕ್ಕೆ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನೂ ಬಳಸಿಕೊಳ್ಳುತ್ತಿರುವುದು ದುರಾದೃಷ್ಟಕರ ಮತ್ತು ಇದು ಸಂವಿಧಾನ ವಿರೋಧಿ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ, ಸಾರ್ವಜನಿಕ ಅಭಿವೃದ್ಧಿಗಿಂತ ದ್ವೇಷದ ರಾಜಕೀಯವು ಮುಖ್ಯವೆಂದು ತೋರುತ್ತಿದೆ. ಕನಿಷ್ಠ ರಾಜ್ಯಪಾಲರ ನಿರ್ಧಾರದ ನಂತರವಾದರೂಕಾಂಗ್ರೆಸ್ ಸರ್ಕಾರ ತನ್ನ ಹಾದಿಯನ್ನು ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಒಕ್ಕೂಟ ವ್ಯವಸ್ಥೆಯನ್ನು ಬಲವಾಗಿ ಪ್ರತಿಪಾದಿಸುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್, ಕರ್ನಾಟಕದಲ್ಲಿ ಶಾಸಕಾಂಗ ಸಭೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸಂವಿಧಾನ ಮತ್ತು ಒಕ್ಕೂಟ ರಚನೆಯನ್ನು ಎತ್ತಿಹಿಡಿಯುವುದಾಗಿ ಹೇಳಿಕೊಳ್ಳುತ್ತಲೇ, ಸರ್ಕಾರವು ಕೇಂದ್ರದ ವಿರುದ್ಧ ನಿರಂತರವಾಗಿ ವಿಷ ಕಾರುತ್ತಿದೆ ಮತ್ತು ರಾಜ್ಯದ ಜನರಿಗೆ ದ್ರೋಹ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲರು ಯಾವುದೇ ಪಕ್ಷದ ಸದಸ್ಯರಲ್ಲ: ಮಹದೇವಪ್ಪ
ರಾಜ್ಯಪಾಲರು ಯಾವುದೇ ಪಕ್ಷದ ಸದಸ್ಯರಲ್ಲ. ಅವರು ರಾಜ್ಯದ ನಾಮಮಾತ್ರ ಕಾರ್ಯಾಂಗದ ಮುಖ್ಯಸ್ಥರು ಮತ್ತು ರಾಜ್ಯದ ಜನರ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರ ಬರೆದುಕೊಟ್ಟ ಭಾಷಣ ಮಾಡುವುದು ರಾಜ್ಯಪಾಲರ ಸಂವಿಧಾನಬದ್ಧವಾದ ಜವಾಬ್ದಾರಿ ಆಗಿದೆಯೇ ಹೊರತು, ಅದೇನು ಸರ್ಕಾರಕ್ಕೆ ಮಾಡುವ ಉಪಕಾರವಲ್ಲ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಅವರು ಹೇಳಿದ್ದಾರೆ.
ವಿಧಾನಮಂಡಲದ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣವನ್ನು 'ರಾಜ್ಯ ಸಚಿವ ಸಂಪುಟ' ಒದಗಿಸುತ್ತದೆ. ಆ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ದ ದನಿ ಎತ್ತಲಾಗಿದೆ ಎಂಬ ಕಾರಣಕ್ಕಾಗಿ ರಾಜ್ಯಪಾಲರು ಆ ಭಾಷಣವನ್ನು ನಿರಾಕರಿಸುವಂತಿಲ್ಲ.ಕೇಂದ್ರದ ಜನವಿರೋಧಿ ಯೋಜನೆಗಳನ್ನು ಅಧಿವೇಶನದಲ್ಲಿ ಚರ್ಚಿಸುವುದು ಒಕ್ಕೂಟ ವ್ಯವಸ್ಥೆಯ ಭಾಗವಾಗಿ ಅದು ರಾಜ್ಯ ಸರ್ಕಾರಗಳ ಹಕ್ಕು ಮತ್ತು ಜವಾಬ್ದಾರಿ ಆಗಿದೆ. ಬಹುಕಾಲದಿಂದಲೂ ಇದು ಅಸ್ತಿತ್ವದಲ್ಲಿರುವ ವಿದ್ಯಮಾನ ಆಗಿದೆ.
ರಾಜ್ಯಪಾಲರು ಯಾವುದೇ ಪಕ್ಷದ ಸದಸ್ಯರಾಗಿ ವರ್ತಿಸದೇ ತಮ್ಮ ರಾಜ್ಯಪಾಲರ ಜವಾಬ್ದಾರಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವುದು ಜನ ಸಾಮಾನ್ಯರ ಬದುಕಿನ ದೃಷ್ಟಿಯಿಂದ ಹೆಚ್ಚು ಉತ್ತಮ ಎನಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.