ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ವಿರುದ್ಧ ಕಿಡಿಕಾರಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಜಾತ್ಯಾತೀತ ಜನತಾ ದಳ (JDS) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಹೌದು.. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ. ರಾಜ್ಯ ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣ ಓದದೇ ಸಂವಿಧಾನದ ವಿಧಿಯನ್ನ ಉಲ್ಲಂಘನೆ ಮಾಡಿದ್ದಾರೆ ಎಂದು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
'ಯಾವುದೇ ಸರ್ಕಾರ ಬಂದಾಗ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯ. ಆರ್ಟಿಕಲ್ 176(1), 163 ರ ಉಲ್ಲಂಘನೆ ಬಹಳ ಸ್ಪಷ್ಟವಾಗಿದೆ.
ಈ ವಿಧಿಗಳ ಅನ್ವಯ ರಾಜ್ಯಪಾಲರು ತಾವು ತಯಾರು ಮಾಡಿದ ಭಾಷಣ ಓದುವಂತಿಲ್ಲ. ರಾಜ್ಯ ಸರ್ಕಾದ ಸಂಪುಟ ಸಿದ್ಧಪಡಿಸಿದ ಭಾಷಣವನ್ನ ಓದಲೇಬೇಕು' ಎಂದು ಹೇಳಿದ್ದರು.
ಜೆಡಿಎಸ್ ಕಿಡಿ
ಇನ್ನು ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಜಾತ್ಯಾತೀತ ಜನತಾ ದಳ (JDS) ತೀವ್ರ ಟೀಕಿಸಿದ್ದು, 'ಎರಡು ನಾಲಿಗೆಯ ಸಿದ್ದರಾಮಯ್ಯನ ಗೋಸುಂಬೆ ನಾಟಕವನ್ನು ರಾಜ್ಯದ ಜನರು ನೋಡುತ್ತಿದ್ದಾರೆ' ಎಂದು ಅವರದ್ದೇ ಹಳೆಯ ವಿಡಿಯೋವನ್ನು ಅಪ್ಲೋಡ್ ಮಾಡಿದೆ.
ಹಳೆಯ ವಿಡಿಯೋದಲ್ಲಿ ಇದೇ ಸಿದ್ದರಾಮಯ್ಯ ಅವರು, ಒಂದು ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದನ್ನು ಮೇಲ್ವಿಚಾರಣೆ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ. ಒಂದು ವೇಳೆ ಆ ಸರ್ಕಾರ ತನ್ನ ಜವಾಬ್ದಾರಿಯಿಂದ ವಿಮುಖರಾಗಿದ್ದರೆ ಅದಕ್ಕೆ ಎಚ್ಚರಿಕೆ ನೀಡುವ, ಬುದ್ದಿ ಹೇಳುವ ಮತ್ತು ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ.
ಇಂತಹ ಸಂದರ್ಭಗಳಲ್ಲಿ ರಾಜ್ಯಪಾಲರು ಅಧಿಕಾರ ಚಲಾಯಿಸಿದಾಗ ರಾಜಕೀಯ ಪ್ರೇರಿತ, ದುರುದ್ದೇಶಪೂರಿತ, ಪ್ರೀ ಪ್ಲಾನ್ಡ್, ವಿಪಕ್ಷಗಳು ಮಾಡಿಸುತ್ತಿವೆ ಎಂದು ಹೇಳಿದರೆ ಜನ ಅವುಗಳನ್ನು ನಂಬಲ್ಲ.. ಎಂದು ಹೇಳಿರುವ ವಿಡಿಯೋವನ್ನು ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಅಂದೇನಾಗಿತ್ತು?
ಹೊಸ ವರ್ಷದ ಮೊದಲ ಅಧಿವೇಶನದ ಮೊದಲ ದಿನ ವಿಧಾನಸಭೆಯಲ್ಲಿ ಭಾರೀ ಹೈಡ್ರಾಮ ನಡೆಯಿತು. ರಾಜ್ಯಪಾಲ ಗೆಹ್ಲೋಟ್ ಅಧಿವೇಶನ ಆರಂಭಿಸಿ ಆರಂಭಿಕ ಸಾಲನ್ನು ಹೇಳಿ ಸದನದಿಂದ ಹೊರ ನಡೆದರು. ವಿಪಕ್ಷಗಳ ನಡುವೆ ಭಾರೀ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು.