ಬೆಂಗಳೂರು: ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಅವಮಾನಿಸಿದ್ದು, ಅವರನ್ನು ಅಮಾನತುಗೊಳಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದ ಪರಿಣಾಮ ಶುಕ್ರವಾರ ವಿಧಾನ ಪರಿಷತ್ತು ರಣಾಂಗಣವಾಗಿ ಮಾರ್ಪಟ್ಟಿತು. ಪರಿಣಾಮ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ಮೂರು ಬಾರಿ ಮುಂದೂಡಿದರು.
ಎರಡು ಬಾರಿ ಮುಂದೂಡಲ್ಪಟ್ಟ ನಂತರ, ವಿರೋಧ ಪಕ್ಷ ಬಿಜೆಪಿ ದೂರು ಸಲ್ಲಿಸಿದ ಬಳಿಕ ಹರಿಪ್ರಸಾದ್ ಅವರ ನಡವಳಿಕೆಯನ್ನು ಶಿಸ್ತು ಸಮಿತಿಗೆ ಉಲ್ಲೇಖಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿ ಆದೇಶಿಸಿದರು.
ರಾಜ್ಯಪಾಲರು ರಾಷ್ಟ್ರಗೀತೆ ಮುಗಿಯುವವರೆಗೆ ಕಾಯದೆ ಸದನದಿಂದ ಹೊರನಡೆಯುವ ಮೂಲಕ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪದ ಕುರಿತು ಚರ್ಚೆ ನಡೆಸಬೇಕು ಎಂಬ ಬಿಕೆ ಹರಿಪ್ರಸಾದ್ ಅವರ ಬೇಡಿಕೆಯನ್ನು ಹೊರಟ್ಟಿ ತಿರಸ್ಕರಿಸಿದರು.
ಇಂದು ದಿನದ ಕಲಾಪ ಪ್ರಾರಂಭವಾಗುತ್ತಿದ್ದಂತೆ ಬಿಜೆಪಿ ಎಂಎಲ್‌ಸಿಗಳು ರಾಜ್ಯಪಾಲರ ವಿರುದ್ಧ "ಅಶಿಸ್ತಿನ ವರ್ತನೆ" ತೋರಿದ ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
"ನಾವು ಗೂಂಡಾಗಿರಿಯನ್ನು ಸಹಿಸುವುದಿಲ್ಲ. ಅವರು ರಾಜ್ಯಪಾಲರನ್ನು ಅವಮಾನಿಸಿದ್ದಾರೆ. ಹರಿಪ್ರಸಾದ್ ಅವರನ್ನು ಅಮಾನತುಗೊಳಿಸಿ" ಎಂದು ಬಿಜೆಪಿ ಎಂಎಲ್‌ಸಿಗಳು ಕೋರಸ್‌ನಲ್ಲಿ ಕೂಗಿದರು.
ಗೂಂಡಾ ಶಾಸಕ ಹರಿಪ್ರಸಾದ್ ಅಮಾನತು ಆಗಲೇಬೇಕು. ರೌಡಿಯಂತೆ ವರ್ತಿಸಿರುವ ಸದಸ್ಯನನ್ನು ಸದನದಿಂದ ಹೊರಗೆ ಹಾಕಿ. ಈ ತಕ್ಷಣವೇ ಅವರನ್ನು ಮಾರ್ಷಲ್‌ಗಳ ಮೂಲಕ ಹೊರಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರನ್ನು ಕರೆಸಿ ದುರುದ್ದೇಶಪೂರ್ವಕವಾಗಿ ಅಪಮಾನ ಮಾಡಲಾಗಿದೆ. ತಾವೊಬ್ಬ ಶಾಸಕರು ಎಂಬುದನ್ನು ಮರೆತು ಗೂಂಡಾ ವರ್ತನೆ ತೋರಿರುವ ಹರಿಪ್ರಸಾದ್ ಅವರಿಗೆ ಸದನದಲ್ಲಿ ಕೂರಲು ಅರ್ಹತೆ ಇಲ್ಲ ಎಂದು ಪ್ರತಿಪಕ್ಷದ ಸದಸ್ಯರು ವಾಗ್ದಾಳಿ ನಡೆಸಿದರು.
ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯರು, ಮೊದಲು ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು. ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಇದಕ್ಕೆ ಬಿಜೆಪಿಯೇ ಕಾರಣ ಎಂದು ದೂರಿದರು.
ಕ್ರಿಯಾಲೋಪ ಪ್ರಸ್ತಾಪಿಸಿದ ಹರಿಪ್ರಸಾದ್, ರಾಜ್ಯಪಾಲರು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರಿಂದ ರಾಷ್ಟ್ರಗೀತೆಗೆ ಅವಮಾನವಾಗಿದೆ ಎಂದು ಹೇಳುತ್ತಿದ್ದಂತೆ ಸದನದಲ್ಲಿ ಭಾರೀ ಕೋಲಾಹಲ ಉಂಟಾಗಿತ್ತು. ಆರ್‌ಎಸ್‌ಎಸ್‌ನವರು ಎಂದಿಗೂ ರಾಷ್ಟ್ರಗೀತೆಗೆ ಗೌರವ ಕೊಟ್ಟಿಲ್ಲ. ಬಿಜೆಪಿ ಅತ್ಯಾಚಾರಿಗಳ ಪಕ್ಷ, ಬಲಾತ್ಕಾರಿಗಳ ಪಕ್ಷ, ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ತಂದವರು ನಮ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಹೀಗೆ ಎರಡೂ ಕಡೆ ಗಲಾಟೆ ಉಂಟಾಗಿದ್ದರಿಂದ ಸಭಾಪತಿ ಸದನವನ್ನು ಮುಂದೂಡಿದರು.
ಈ ವೇಳೆ ಗದ್ದಲ ತೀವ್ರಗೊಂಡಾಗ ತಾಳ್ಮೆ ಕಳೆದುಕೊಂಡು ಸಭಾಪತಿಗಳು ಪೀಠದಿಂದ ಎದ್ದು ನಿಂತು ನಿಮಗೆ ಮಾನ-ಮರ್ಯಾದೆ ಇಲ್ಲವೇ? ಸಹನೆಗೂ ಒಂದು ಇತಿಮಿತಿ ಇದೆ. ಇದೇ ರೀತಿ ನಡೆದುಕೊಂಡರೆ ಸದನದಿಂದ ಹೊರ ಹಾಕುತ್ತೇನೆ ಎಂದು ಎಚ್ಚರಿಸಿದರು.
ಗದ್ದಲ ತಾರಕಕ್ಕೇರುತ್ತಿದ್ದಂತೆ, ಹೊರಟ್ಟಿ ಅವರು ಕಲಾಪವನ್ನು ಪುನರಾರಂಭಿಸಲು ಮೂರು ಬಾರಿ ಪ್ರಯತ್ನಿಸಿದರು ಮತ್ತು ಮೂರು ಸಂದರ್ಭಗಳಲ್ಲಿ, ಅವರು ಸದನವನ್ನು ಮುಂದೂಡಬೇಕಾಯಿತು.