ಕೆ.ಆರ್.ಪೇಟೆ: ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ನಾಲ್ಕು ವರ್ಷಗಳ ಬಳಿಕ ತಮ್ಮ ವಯಸ್ಸು ಹಾಗೂ ಆರೋಗ್ಯದ ಕಾರಣದಿಂದ ಹಿಂದಿನಂತೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ರಾಜಕೀಯ ಕ್ಷೇತ್ರ ಇಂದು ಕಲುಷಿತಗೊಂಡಿರುವುದರಿಂದ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿದ್ದು, ಜನರ ಕಷ್ಟ, ಸುಖಗಳಿಗೆ ಧ್ವನಿಯಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.
ಕೆ.ಆರ್.ಪೇಟೆಯಲ್ಲಿ ಮಾಜಿ ಸ್ಪೀಕರ್ ದಿ.ಕೃಷ್ಣರ 86ನೇ ಜನ್ಮದಿನದ ಅಂಗವಾಗಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ರಾಜಕೀಯವಾಗಿ ಸ್ಪರ್ಧೆ ಮಾಡಿದಾಗ ಕ್ಷೇತ್ರದ ಜನರೇ ನಮಗೆ ದುಡ್ಡುಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ, ಇಂದು ಅಂತಹ ಪರಿಸ್ಥಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವರುಣ ಕ್ಷೇತ್ರದ ಜನರು ಮತ್ತೊಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ತೀರ್ಮಾನಿಸಿದ್ದೇನೆ. ಈಗ ನನಗೆ 79 ವರ್ಷ. ನಮ್ಮ ಸರ್ಕಾರದ ಅವಧಿ ಇನ್ನು ಒಂದೂವರೆ ವರ್ಷ. ಆಗ ನನಗೆ 81-82 ವರ್ಷವಾಗಿರುತ್ತದೆ. ಆಗ ಆರೋಗ್ಯವೂ ಇರುವುದಿಲ್ಲ. ಹಿಂದಿನಂತೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಎಷ್ಟು ಸಾಕು?" ಎಂದು ಹೇಳಿದರು.
"2028ರ ವೇಳೆಗೆ ನನಗೆ 82 ವರ್ಷವಾಗಿರುತ್ತದೆ. ಆಗ ರಾಜಕೀಯ ಜೀವನಕ್ಕೆ 50 ವರ್ಷಗಳು ಪೂರ್ಣಗೊಳ್ಳುತ್ತವೆ. 1978ರಲ್ಲಿ ನಾನು ತಾಲೂಕು ಮಂಡಳಿ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ್ದೆ," ಎಂದರು.
ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಾವು ಜನರಿಗೆ ದುಡ್ಡುಕೊಡಬೇಕಾದ ಕಾಲ ಬಂದಿದೆ. ಇಂದು ರಾಜಕಾರಣ ಸಾಕಷ್ಟು ಕಲುಷಿತವಾಗಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲ್ಲವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗಳಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದರು.
ದಿ.ಕೃಷ್ಣರನ್ನು ಕ್ಷೇತ್ರದ ಜನ ಬಯಸುತ್ತಿದ್ದರು. ಆದರೆ, ಅವರು ಕಲುಷಿತ ರಾಜಕೀಯ ವ್ಯವಸ್ಥೆಯಿಂದ ನಿವೃತ್ತಿ ಘೋಷಿಸಿ ಸಕ್ರಿಯ ರಾಜಕಾರಣದಿಂದ ದೂರ ಉಳಿದರು. ಜನ ಬಯಸುತ್ತಿರುವಾಗಲೇ ರಾಜಕೀಯ ನಿವೃತ್ತಿ ಘೋಷಿಸಿದ ಕೃಷ್ಣ ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಬಿಟ್ಟು ಹೋಗಿರುವ ರಾಜಕೀಯ ಆದರ್ಶಗಳು ನಮ್ಮ ಮುಂದಿವೆ. ಕೃಷ್ಣರಂತೆ ಬದುಕಿನ ಆದರ್ಶಗಳನ್ನು ಬಿಟ್ಟು ಹೋಗಿರುವವರ ನೆನಪಿನ ಕಾರ್ಯಕ್ರಮಗಳು ರಾಜ್ಯದೆಲ್ಲೆಡೆ ನಡೆಯಬೇಕು ಎಂದು ಆಶಿಸಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಗೆಲುವು ಸಾಧಿಸಿದ ಸಿದ್ದರಾಮಯ್ಯ, ಒಂಬತ್ತನೇ ಬಾರಿ ವಿಧಾನಸಭೆಗೆ ಪ್ರವೇಶಿಸಿದ್ದರು.
2018ರಲ್ಲಿ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದರೂ, ಬಾದಾಮಿ ಕ್ಷೇತ್ರದಿಂದ ಗೆದ್ದು ಬಳಿಕ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು.
1983ರಲ್ಲಿ ಲೋಕದಳ ಪಕ್ಷದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದ ಸಿದ್ದರಾಮಯ್ಯ, ಆ ಕ್ಷೇತ್ರದಿಂದ ಐದು ಬಾರಿ ಗೆದ್ದು ಮೂರು ಬಾರಿ ಸೋಲು ಕಂಡಿದ್ದಾರೆ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ವರುಣ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಅಲ್ಲಿಂದ ಸ್ಪರ್ಧಿಸಿ ಗೆದ್ದಿದ್ದರು. 2018ರಲ್ಲಿ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ವರುಣ ಕ್ಷೇತ್ರ ಬಿಟ್ಟುಕೊಟ್ಟು ಮತ್ತೆ ಚಾಮುಂಡೇಶ್ವರಿಗೆ ಮರಳಿದ್ದರು. 2023ರಲ್ಲಿ ಯತೀಂದ್ರ ಅವರು ಕ್ಷೇತ್ರವನ್ನು ತಂದೆಗೆ ಬಿಟ್ಟುಕೊಟ್ಟಿದ್ದರು.
2018ರ ವಿಧಾನಸಭೆ ಚುನಾವಣೆಯ ಮುನ್ನವೂ ಅದು ತಮ್ಮ "ಕೊನೆಯ ಚುನಾವಣೆ ಆಗುವ ಸಾಧ್ಯತೆ ಇದೆ" ಎಂದು ಸಿದ್ದರಾಮಯ್ಯ ಹೇಳಿದ್ದರು. ಅದಕ್ಕೂ ಮುನ್ನ 2013ರ ಚುನಾವಣೆಯ ಸಂದರ್ಭದಲ್ಲಿಯೂ ಇದೇ ಮಾತು ಹೇಳಿದ್ದರೂ, ನಂತರ ಮುಖ್ಯಮಂತ್ರಿಯಾಗಿದ್ದರು.