ಬೆಂಗಳೂರು: ಕಣಕಣದಲ್ಲೂ ಸಮಾಜಘಾತುಕತನವನ್ನು ಮೈಗೂಡಿಸಿಕೊಂಡಿರುವ ಬಿಜೆಪಿಗರಿಗೆ ಕೇಸ್ ಹಾಕದೆ ಮುದ್ದು ಮಾಡಿ, ಲಾಲಿ ಹಾಡುತ್ತಾ ಮಲಗಿಸಬೇಕೆ?ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಭರತ್ ಶೆಟ್ಟಿಯವರ ವಿಡಿಯೋವೊಂದನ್ನು ಹಂಚಿಕೊಂಡು ಈ ಪೋಸ್ಟ್ ಮಾಡಿರುವ ಸಚಿವರು, ಸಮಾಜದಲ್ಲಿ ದ್ವೇಷದ ವಿಷ ತುಂಬಲು ಪ್ರಯತ್ನಿಸುವ ಯಾರೇ ಆದರೂ ಕಾನೂನು ಕ್ರಮಕ್ಕೆ ಒಳಪಡಲೇಬೇಕು ಎಂದಿದ್ದಾರೆ.
ಕಾನೂನು ಪಾಲನೆ ಮಾಡುವ ಪೊಲೀಸರ ಬಗ್ಗೆ ಅತ್ಯಂತ ತುಚ್ಛವಾಗಿ ಮಾತನಾಡಿದ ಭರತ್ ಶೆಟ್ಟಿ ಬಿಜೆಪಿಯ "ಸುಸಂಸ್ಕೃತ" ಪರಂಪರೆಯ ರಾಯಭಾರಿಯಾಗಿ ಮಾತನಾಡಿದ್ದಾರೆ! ಸಿ.ಟಿ ರವಿ, ಯಶ್ ಪಾಲ್ ಸುವರ್ಣ ಬಿಜೆಪಿ ಸಂಸ್ಕೃತಿಯ ರಾಯಭಾರಿ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವಾಗಲೇ ಭರತ್ ಶೆಟ್ಟಿಯವರೂ ನಾನೇನೂ ಕಮ್ಮಿ ಇಲ್ಲ ಎಂದು ಅಖಾಡಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಾಸಕ, ಸಂಸದರಂತಹ ಎಷ್ಟೇ ಪ್ರಭಾವಿ ಸ್ಥಾನದಲ್ಲಿದ್ದರೂ ಕಾನೂನು ಪಾಲನೆಯ ಕರ್ತವ್ಯ ಮಾಡಿದ ಪೊಲೀಸರನ್ನು ಜನತೆ ಶ್ಲಾಘಿಸುತ್ತಿದ್ದಾರೆ, ನಿಂದನೆಗೆ ಇಳಿದಿರುವ ಬಿಜೆಪಿಗರಿಗೆ ತಿಳಿದಿರಲಿ,ಪೊಲೀಸರು ಖಾಕಿ ಹಾಕಿಕೊಂಡು ಕಾನೂನು ಪಾಲನೆ ಮಾಡುತ್ತಿದ್ದಾರೆಯೇ ಹೊರತು ಬಿಜೆಪಿಗರಂತೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜಘಾತುಕ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಗರು ತಾವು ಸಂವಿಧಾನ, ಕಾನೂನು, ನಿಯಮಗಳಿಗೆ ಅತೀತರು ಎಂದು ಭಾವಿಸಿಕೊಂಡಿದ್ದಾರೆ, ಈ ಭ್ರಮೆಯಿಂದ ಹೊರಬಂದು ಸಭ್ಯರಾಗದೇ ಇದ್ದಲ್ಲಿ ಕಾನೂನು ತನ್ನ ಕೆಲಸವನ್ನು ಮಾಡುತ್ತದೆ, ಇದಕ್ಕೆ ಯಾರೂ ಹೊರತಲ್ಲ ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ನಾಯಕರಾಗಲಿ, ಕಾರ್ಯಕರ್ತರೇ ಆಗಿರಲಿ, ಕಾನೂನು ಕ್ರಮ ಜರುಗಿಸಬಾರದು ಎಂದರೆ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನೊಳಗೆ ತಮ್ಮ ಮಾತು ಮತ್ತು ಕೃತಿಗಳನ್ನು ನಿರ್ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಕರ್ನಾಟಕದ ಪೊಲೀಸರನ್ನು ನಾಯಿಗೆ ಹೋಲಿಸುವ ಮಾತುಗಳು ಅವರ ದುರಹಂಕಾರದ ಪರಮಾವಧಿಯನ್ನು ಸೂಚಿಸುತ್ತದೆ.ನಮ್ಮ ಅಧಿಕಾರಿಗಳ ನೈತಿಕ ಸ್ಥೈರ್ಯ ಕಸಿಯುವ ಯಾವುದೇ ಪ್ರಯತ್ನಗಳನ್ನೂ ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.