ಸಿದ್ದರಾಮಯ್ಯ  
ರಾಜಕೀಯ

ಆ.13ರಿಂದ ವಿಧಾನ ಮಂಡಲ ಅಧಿವೇಶನ: ಸದನದಲ್ಲಿ ಮಾಜಿ CM ಸಿದ್ದರಾಮಯ್ಯನವರ ಆಸನ ಎಲ್ಲಿ?

ಸಿದ್ದರಾಮಯ್ಯ ಅವರು ಸದನದ ಮುಂಚೂಣಿ ಸಾಲಿನಲ್ಲಿ ಪ್ರಭಾವ ಬೀರಿದ ನಾಯಕ. ಈಗ ವಯಸ್ಸು ಮತ್ತು ಸಕ್ರಿಯ ರಾಜಕೀಯದಿಂದ ನಿವೃತ್ತಿ ಹಂತದಲ್ಲಿರುವ ಅವರು ಸಚಿವರ ಸಾಲಿನ ಮೂರನೇ ಸಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆಯೇ ಅಥವಾ ಮಾಜಿ ಸಿಎಂ ಯಡಿಯೂರಪ್ಪ ಅವರಂತೆ ಕೊನೆಯ ಬೆಂಚ್‌ಗೆ ತೆರಳಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ಬೆಂಗಳೂರು: ಆಗಸ್ಟ್ 13ರಿಂದ ಆರಂಭವಾಗಲಿರುವ ಎರಡು ವಾರಗಳ ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್ ನಾಯಕರನ್ನು ಕಾಡುತ್ತಿರುವ ಒಂದು ಪ್ರಶ್ನೆ ಎಂದರೆ — ಸಿದ್ದರಾಮಯ್ಯ ಅವರು ಸದನದಲ್ಲಿ ಎಲ್ಲ ಕುಳಿತುಕೊಳ್ಳಲಿದ್ದಾರೆ?

78 ವರ್ಷದ ಸಿದ್ದರಾಮಯ್ಯ ಅವರು ಸದನದ ಮುಂಚೂಣಿ ಸಾಲಿನಲ್ಲಿ ಪ್ರಭಾವ ಬೀರಿದ ನಾಯಕ. ಆದರೆ ಈಗ ವಯಸ್ಸು ಮತ್ತು ಸಕ್ರಿಯ ರಾಜಕೀಯದಿಂದ ನಿವೃತ್ತಿಯ ಹಂತದಲ್ಲಿರುವ ಅವರು ಸಚಿವರ ಸಾಲಿನ ಹಿಂದೆ ಮೂರನೇ ಸಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆಯೇ ಅಥವಾ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಂತೆ ಕೊನೆಯ ಬೆಂಚ್‌ಗೆ ತೆರಳಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ವಿಧಾನಮಂಡಲದ ಮೂಲಗಳ ಪ್ರಕಾರ, ಹಿರಿಯ ನಾಯಕರು ತಾವು ಬಯಸುವ ಆಸನದ ಕುರಿತು ಅಧಿಕೃತವಾಗಿ ಪತ್ರ ಬರೆದರೆ, ತಕ್ಷಣವೇ ಅದಕ್ಕೆ ಅನುಗುಣವಾಗಿ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವವರ ಪ್ರಕಾರ, ಅವರ ನಿರ್ಧಾರದಲ್ಲಿ ಪ್ರಮುಖ ಅಂಶ ಆರಾಮದಾಯಕ ಆಸನವಾಗಿರಲಿದೆ. ಅವರಿಗೆ ಆಸನದ ಸ್ಥಾನಮಾನಕ್ಕಿಂತಲೂ ಸುಲಭವಾಗಿ ಎದ್ದು-ಕುಳಿತುಕೊಳ್ಳಲು ಅನುಕೂಲವಾಗುವ ಸ್ಥಳವೇ ಮುಖ್ಯ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಮುಂಚೂಣಿ ನಾಯಕರಾಗಿದ್ದರು. ಗೋಲುಗಳ ಸುರಿಮಳೆಗೈದು ತಂಡಕ್ಕೆ ಗೆಲುವು ತಂದುಕೊಡುವ ಆಟಗಾರನಂತೆ, ಪಕ್ಷವನ್ನು ಅಧಿಕಾರಕ್ಕೆ ತಂದು ಅದರ ಆಶಾಕಿರಣವಾಗಿದ್ದರು. ಈಗ ಅವರು ಹಿಂಬದಿ ಬೆಂಚ್‌ನಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದರೂ, ಸರ್ಕಾರವನ್ನು ಸದನದಲ್ಲಿ ಸಂಕಷ್ಟದಿಂದ ಪಾರು ಮಾಡುವ ಹೊಣೆಗಾರಿಕೆ ಇನ್ನೂ ಅವರ ಮೇಲಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರದ ಚುಕ್ಕಾಣಿ ಹಿಡಿದು ಕೇವಲ ಎರಡು ತಿಂಗಳಾಗಿದ್ದು, ಕಾಂಗ್ರೆಸ್ ಸರ್ಕಾರ ಎದುರಿಸುತ್ತಿರುವ ಮೊದಲ ಮಹತ್ವದ ರಾಜಕೀಯ ಪರೀಕ್ಷೆ ಇದಾಗಿದೆ. ಬಿಜೆಪಿ–ಜೆಡಿಎಸ್ ಮೈತ್ರಿ ಆಕ್ರಮಣಕಾರಿ ತಂತ್ರದೊಂದಿಗೆ ಸರ್ಕಾರವನ್ನು ಎದುರಿಸಲು ಸಜ್ಜಾಗಿದೆ. ಇನ್ನೊಂದೆಡೆ, ಇತ್ತೀಚೆಗೆ ವಿಸ್ತರಿಸಲಾದ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾದ ಹಲವರು ಇನ್ನೂ ತಮ್ಮ ಜವಾಬ್ದಾರಿಗಳಿಗೆ ಹೊಂದಿಕೊಳ್ಳುತ್ತಿರುವುದು ಸರ್ಕಾರದ ಆತಂಕವನ್ನು ಹೆಚ್ಚಿಸಿದೆ.

ರಾಜಕೀಯ ವಿಶ್ಲೇಷಕ ಬಿ.ಎಸ್. ಮೂರ್ತಿ, ಸದನದಲ್ಲಿ ಹೋರಾಟಗಾರನಾಗಿರುವ ಸಿದ್ದರಾಮಯ್ಯ ಅವರು ಹಿಂಬದಿ ಬೆಂಚ್‌ನಿಂದಲೇ ಆಗಾಗ್ಗೆ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಹೇಳುತ್ತಾರೆ.

ಕರ್ನಾಟಕ ಲೋಕಸೇವಾ ಆಯೋಗ (KPSC) ವಿವಾದ, ಬಿಡದಿ ಭೂಮಿ ಪ್ರಕರಣ, ಬರ ಪರಿಸ್ಥಿತಿ ಹಾಗೂ ಆಡಳಿತ ವೈಫಲ್ಯಗಳು ಅಧಿವೇಶನದ ಪ್ರಮುಖ ಚರ್ಚಾ ವಿಷಯಗಳಾಗುವ ಸಾಧ್ಯತೆಯಿದೆ. ಅನುಭವವಿಲ್ಲದ ಸಚಿವರನ್ನು ಗುರಿಯಾಗಿಸಿಕೊಂಡು ಮುಖ್ಯಮಂತ್ರಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ತಂತ್ರ ರೂಪಿಸುತ್ತಿದೆ. ತಯಾರಿಗೆ ಕಡಿಮೆ ಸಮಯ ದೊರೆತಿರುವ ಹಿನ್ನೆಲೆಯಲ್ಲಿ ಹೊಸ ಸಚಿವರು ತೀವ್ರ ಪರಿಶೀಲನೆಗೆ ಒಳಗಾಗಲಿದ್ದು, ಯಾವುದೇ ಎಡವಟ್ಟು ಕಾಂಗ್ರೆಸ್‌ಗೆ 2028ರ ವಿಧಾನಸಭೆ ಚುನಾವಣೆಯ ಸಿದ್ಧತೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ದೀರ್ಘಾವಧಿಯ ಅನುಕೂಲಕರ ರಾಜಕೀಯ ಕಥನವನ್ನು ಕಟ್ಟಲು ಸರ್ಕಾರ ಸಾಕಷ್ಟು ಪ್ರಯತ್ನಿಸುತ್ತಿದ್ದರೂ, ಈ ಅಧಿವೇಶನವನ್ನು ಯಶಸ್ವಿಯಾಗಿ ನಿಭಾಯಿಸಬಹುದೇ ಎಂಬ ಪ್ರಶ್ನೆ ಎದುರಾಗಿದೆ. ಬಿಜೆಪಿ–ಜೆಡಿಎಸ್‌ಗೆ ಕಾಂಗ್ರೆಸ್ ಸರ್ಕಾರವನ್ನು ದಿಕ್ಕುತೋಚದ ಸರ್ಕಾರವೆಂದು ಬಿಂಬಿಸಲು ಇದು ಉತ್ತಮ ಅವಕಾಶವಾಗಿದ್ದರೆ, ಕಾಂಗ್ರೆಸ್‌ಗೆ ಇದು ಸಮನ್ವಯ, ಸದನ ನಿರ್ವಹಣೆ ಮತ್ತು ನಾಯಕತ್ವದ ನೈಜ ಪರೀಕ್ಷೆಯಾಗಲಿದೆ. ಹೀಗಾಗಿ ಎಲ್ಲರ ದೃಷ್ಟಿಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಿರಲಿದೆ.

ಈ ಅಧಿವೇಶನ ಹೇಗೆ ಸಾಗುತ್ತದೆ ಮತ್ತು ಸಿದ್ದರಾಮಯ್ಯ ಅವರು ಸದನದಲ್ಲಿ ಯಾವ ಆಸನದಲ್ಲಿ ಕುಳಿತುಕೊಳ್ಳುತ್ತಾರೆ ಎಂಬುದು ಕರ್ನಾಟಕದ ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸುವ ಪ್ರಮುಖ ಅಂಶವಾಗಬಹುದು. ಸಿದ್ದರಾಮಯ್ಯ ಅವರು 2009ರ ಜೂನ್‌ನಲ್ಲಿ ಪ್ರತಿಪಕ್ಷ ನಾಯಕರಾಗಿ ನೇಮಕಗೊಂಡಿದ್ದರು. ಅದಕ್ಕೂ ಮುನ್ನ ಅವರು ಸಾಮಾನ್ಯ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. 14 ತಿಂಗಳ ಮೈತ್ರಿ ಸರ್ಕಾರದ ಅವಧಿಯಲ್ಲಿಯೂ ಅವರು ಎದುರು ಸಾಲಿನ ಬೆಂಚ್‌ನಲ್ಲಿ ಕುಳಿತುಕೊಳ್ಳಲಿಲ್ಲ, ಆ ವೇಳೆ ಅವರು ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್: ಸೋಮವಾರ ಸಂಜೆ ಪ್ರಮಾಣವಚನ ಸಾಧ್ಯತೆ, 18 ಸಚಿವರ ಸೇರ್ಪಡೆ ನಿರೀಕ್ಷೆ..!

ಅಂತ್ಯದತ್ತ ಸಾಗಿದ ಇಸ್ರೇಲ್-ಹಮಾಸ್ ಯುದ್ಧ: 14 ದಿನಗಳಲ್ಲಿ ಶಸ್ತ್ರಾಸ್ತ್ರ ಹಸ್ತಾಂತರಕ್ಕೆ ಹಮಾಸ್ ಒಪ್ಪಿಗೆ, ಶಾಂತಿ ಒಪ್ಪಂದ ಘೋಷಿಸಿದ ಟ್ರಂಪ್..!

ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದೇವೆಂದು ಬೀಗುವವರು, ನೆಹರೂ ಕುಟುಂಬದ ಕುಡಿಯ ಎದುರು ಕೈ ಕಟ್ಟಿ ನಿಂತಿದ್ದಾರೆ..!

ಕಾವೇರಿ ವಿವಾದ: 'ಕರ್ನಾಟಕ ಬಂದ್' ಬಗ್ಗೆ ಚರ್ಚಿಸಲು ನಾಳೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ಸಭೆ!

ಜಂತರ್ ಮಂತರ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ: ನೋಯ್ಡಾದ ಮಹಿಳೆ ವಿರುದ್ಧ FIR ದಾಖಲು!