ಇಂಡಿ ತಾಲೂಕು (ಸಂಗ್ರಹ ಚಿತ್ರ) 
ರಾಜಕೀಯ

ಅವಕಾಶ ವಂಚಿತ ಇಂಡಿ; ಡಿಕೆಶಿ ಸರ್ಕಾರದಲ್ಲಿ ಸ್ಥಾನ ಸಿಗುವ ನಿರೀಕ್ಷೆ, ಯಾರೆಲ್ಲಾ ಇದ್ದಾರೆ ಸಚಿವ ಸ್ಥಾನದ ರೇಸ್ ನಲ್ಲಿ?

ಕ್ಷೇತ್ರದ ಇತಿಹಾಸದಲ್ಲಿ ಇದುವರೆಗೆ 15 ವಿಧಾನಸಭಾ ಚುನಾವಣೆ ನಡೆದಿದ್ದು, ಮಲ್ಲಪ್ಪ ಕರಬಸಪ್ಪ ಶಹಾಪುರ, ಆರ್.ಆರ್.ಕಲ್ಲೂರ, ರವಿಕಾಂತ ಪಾಟೀಲ ಹಾಗೂ ಯಶವಂತರಾಯಗೌಡ ಪಾಟೀಲ ಅವರು ತಲಾ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ವಿಜಯಪುರ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ನೂತನ ಸಚಿವ ಸಂಪುಟ ಹಾಗೂ ಸಂಪುಟ ಪುನರ್‌ರಚನೆ ಕುರಿತ ಊಹಾಪೋಹಗಳು ಜೋರಾಗುತ್ತಿರುವ ಬೆನ್ನಲ್ಲೇ, ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಜನರಲ್ಲಿ ಮತ್ತೊಮ್ಮೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಮೂಡಿದೆ.

ಹಲವು ದಶಕಗಳಿಂದ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲದೆ ಉಳಿದಿರುವ ಕ್ಷೇತ್ರಕ್ಕೆ ಈ ಬಾರಿ ಅವಕಾಶ ಸಿಗಬಹುದು ಎಂಬ ಆಶಾಭಾವನೆ ವ್ಯಕ್ತವಾಗಿದೆ. ಅವಿಭಜಿತ ವಿಜಯಪುರ (ಹಿಂದಿನ ಬಿಜಾಪುರ) ಜಿಲ್ಲೆ ರಚನೆಯಾದ ಬಳಿಕ ಅನೇಕ ಪ್ರಭಾವಿ ಶಾಸಕರನ್ನು ನೀಡಿದ್ದರೂ, ಜಿಲ್ಲೆಯಲ್ಲಿ ಇದುವರೆಗೆ ರಾಜ್ಯ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಪಡೆಯದ ಏಕೈಕ ತಾಲ್ಲೂಕು ಇಂಡಿಯಾಗಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಜಿಲ್ಲೆಯ ಇತರೆ ತಾಲ್ಲೂಕುಗಳ ಶಾಸಕರು ವಿವಿಧ ಸರ್ಕಾರಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರೆ, ಇಂಡಿ ಕ್ಷೇತ್ರ ಮಾತ್ರ ನಿರಂತರವಾಗಿ ಸಚಿವ ಸ್ಥಾನದಿಂದ ವಂಚಿತವಾಗಿದೆ. ಐದು ಪ್ರಮುಖ ತಾಲ್ಲೂಕುಗಳನ್ನು ಒಳಗೊಂಡಿದ್ದ ವಿಜಯಪುರ ಜಿಲ್ಲೆ ರಚನೆಯಾದ ನಂತರ, ವಿಜಯಪುರ, ಸಿಂದಗಿ, ಬಸವನ ಬಾಗೇವಾಡಿ ಹಾಗೂ ಮುದ್ದೇಬಿಹಾಳ ಪ್ರದೇಶಗಳ ನಾಯಕರು ವಿವಿಧ ಅವಧಿಗಳಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಈ ಭಾಗದ ಪ್ರಭಾವಿ ನಾಯಕರಾದ ರಮೇಶ ಜಿಗಜಿಣಗಿ, ಎಂ.ಸಿ. ಮನಗೂಳಿ, ಆರ್.ಬಿ.ಚೌಧರಿ, ಎಂ.ಎಲ್. ಉಸ್ತಾದ್, ಬಿ.ಎಂ. ಪಾಟೀಲ, ಎಂ.ಬಿ. ಪಾಟೀಲ, ಬಿ.ಎಸ್. ಪಾಟೀಲ ಸಾಸನೂರ, ಬಿ.ಎಸ್. ಪಾಟೀಲ ಮನಗೂಳಿ, ಶಿವಾನಂದ ಪಾಟೀಲ, ಜೆ.ಎಸ್. ದೇಶಮುಖ, ಶಿವಪುತ್ರಪ್ಪ ದೇಸಾಯಿ ಹಾಗೂ ಸಿ.ಎಸ್.ನಾಡಗೌಡ ಅವರು ವಿವಿಧ ಅವಧಿಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಆದಾಗ್ಯೂ ಇಂಡಿ ಕ್ಷೇತ್ರ ಮಾತ್ರ ಅಪವಾದವಾಗಿ ಉಳಿದಿದೆ. ಇಂಡಿ ಕ್ಷೇತ್ರವು ಹಲವು ಪ್ರಭಾವಿ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದೆ. ಕ್ಷೇತ್ರದ ಇತಿಹಾಸದಲ್ಲಿ ಇದುವರೆಗೆ 15 ವಿಧಾನಸಭಾ ಚುನಾವಣೆಗಳು ನಡೆದಿದ್ದು, ಮಲ್ಲಪ್ಪ ಕರಬಸಪ್ಪ ಶಹಾಪುರ, ಆರ್.ಆರ್.ಕಲ್ಲೂರ, ರವಿಕಾಂತ ಪಾಟೀಲ ಹಾಗೂ ಯಶವಂತರಾಯಗೌಡ ಪಾಟೀಲ ಅವರು ತಲಾ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಇದಲ್ಲದೆ, ಗವಿಸಿದ್ದಪ್ಪಗೌಡ ಪಾಟೀಲ, ಎನ್.ಎಸ್. ಖೇಡ್ ಹಾಗೂ ಡಾ.ಸಾರ್ವಭೌಮ ಬಗಲಿ ಕೂಡ ಇಂಡಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಆದರೆ ಇವರಲ್ಲಿ ಯಾರಿಗೂ ಇಂಡಿ ಕ್ಷೇತ್ರದ ಶಾಸಕರಾಗಿದ್ದಾಗ ಸಚಿವ ಸ್ಥಾನ ದೊರೆಯಲಿಲ್ಲ. ಈಗ ಕ್ಷೇತ್ರದ ರಾಜಕೀಯ ಚರ್ಚೆಗಳು ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲರತ್ತ ಕೇಂದ್ರೀಕೃತವಾಗಿವೆ. ಹೊಸ ಸಚಿವ ಸಂಪುಟದಲ್ಲಿ ಅವರಿಗೆ ಅವಕಾಶ ದೊರೆತು, ಇಂಡಿ ಕ್ಷೇತ್ರದ ಹಲವು ದಶಕಗಳ ನಿರೀಕ್ಷೆಗೆ ತೆರೆ ಬೀಳುತ್ತದೆಯೇ ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ.

ತಾಲ್ಲೂಕಿನ ಹಿರಿಯ ನಾಗರಿಕರು ಹಾಗೂ ರಾಜಕೀಯ ಕಾರ್ಯಕರ್ತರ ಅಭಿಪ್ರಾಯದಂತೆ, ಇದುವರೆಗೆ ರಾಜ್ಯದ ಎಲ್ಲ ಮುಖ್ಯಮಂತ್ರಿಗಳ ನೇತೃತ್ವದ ಸರ್ಕಾರಗಳು ವಿಜಯಪುರ ಜಿಲ್ಲೆಯ ಇತರೆ ಭಾಗಗಳಿಗೆ ಸಚಿವ ಸ್ಥಾನ ನೀಡಿದ್ದರೂ, ಇಂಡಿ ಕ್ಷೇತ್ರ ಮಾತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಬೆಂಗಳೂರಿನಲ್ಲಿ ಸಚಿವ ಸಂಪುಟ ಪುನರ್‌ರಚನೆ ಕುರಿತ ಚರ್ಚೆಗಳು ವೇಗ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಇಂಡಿ ಕ್ಷೇತ್ರದ ಜನರಲ್ಲಿ ಮತ್ತೆ ನಿರೀಕ್ಷೆಗಳು ಚಿಗುರೊಡೆದಿವೆ. ಹಲವು ದಶಕಗಳ ರಾಜಕೀಯ ನಿರ್ಲಕ್ಷ್ಯದ ಬಳಿಕ ತಮ್ಮ ಕ್ಷೇತ್ರಕ್ಕೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆಯಬೇಕು ಎಂಬುದು ಜನರ ಒತ್ತಾಯವಾಗಿದ್ದು, ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ಇಂಡಿಯ ದೀರ್ಘ ನಿರೀಕ್ಷೆಗೆ ಅಂತ್ಯ ಹಾಡಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿ.ಕೆ. ಶಿವಕುಮಾರ್ ಜೊತೆ ಪ್ರಮಾಣವಚನ ಸ್ವೀಕರಿಸಲಿರುವ 10-12 ಸಚಿವರ ಪಟ್ಟಿ ಇಂದು ಪ್ರಕಟ ಸಾಧ್ಯತೆ

ಬೆನ್ನಿಗೆ ಚೂರಿ ಹಾಕುವ ಕೆಲಸ, ಬಿಜೆಪಿಗೆ ಸಹಾಯ ಮಾಡಲು ಹೀಗೆ ಮಾಡಿದ್ದಾರೆ: ಜಮೀರ್ ವಿರುದ್ಧ SS ಮಲ್ಲಿಕಾರ್ಜುನ್ ಆಕ್ರೋಶ

ಟ್ರಂಪ್ ಒತ್ತಡಕ್ಕೆ ಮಣಿದ ನೆತನ್ಯಾಹು; ಲೆಬನಾನ್ ಮೇಲಿನ ದಾಳಿಗೆ ಬ್ರೇಕ್, ಸಂಘರ್ಷ ನಿಲ್ಲಿಸಲು ಇಸ್ರೇಲ್-ಹಿಜ್ಬುಲ್ಲಾ ಸಮ್ಮತಿ..!

ಲೆಬನಾನ್ ಮೇಲೆ ದಾಳಿ: ಅಮೆರಿಕ-ಇಸ್ರೇಲ್ ನಡುವೆ ಭಿನ್ನಾಭಿಪ್ರಾಯ ಸ್ಫೋಟ, 'ನಾನಿಲ್ಲದಿದ್ದರೆ ಜೈಲಿನಲ್ಲಿರುತ್ತಿದ್ದೆ'; ನೆತನ್ಯಾಹು ವಿರುದ್ಧ ಗುಡುಗಿದ ಟ್ರಂಪ್

RCB ವಿಕ್ಟರಿ ಶ್ಲಾಘಿಸಿದ ಆಸ್ಟ್ರೇಲಿಯಾ ಉಪ ಪ್ರಧಾನಿ; Virat kohli ಪ್ರದರ್ಶನಕ್ಕೆ Richard Marles ಫುಲ್ ಫಿದಾ, ಹೇಜಲ್ವುಡ್, ಟಿಮ್ ಡೇವಿಡ್ ಗೂ ಮೆಚ್ಚುಗೆ!

SCROLL FOR NEXT