ಬೆಂಗಳೂರು: ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್(ಡಿಕೆ ಶಿವಕುಮಾರ್) ಅವರು ಬುಧವಾರ ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ಸಂಜೆ ಲೋಕಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ ಉಪ ಮುಖ್ಯಮಂತ್ರಿಯಾಗಿ ಜಿ. ಪರಮೇಶ್ವರ ಹಾಗೂ 12 ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಡಿಕೆ ಶಿವಕುಮಾರ್ ನೇತೃತ್ವದ ಮೊದಲ ಹಂತದ ಸಂಪುಟದಲ್ಲಿ ಅಹಿಂದಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಪ್ರಬಲ ಸಮುದಾಯಗಳಿಗೂ ಹೆಚ್ಚು ಪ್ರಾತಿನಿಧ್ಯ ನೀಡಲಾಗಿದೆ.
ಇಲ್ಲಿದೆ ಸಂಕ್ಷಿಪ್ತ ವಿವರ
ಪರಮೇಶ್ವರ, ಉಪ ಮುಖ್ಯಮಂತ್ರಿ
ದಲಿತ ವರ್ಗದ ಕೋಟಾದಡಿ ಡಾ. ಜಿ. ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಪರಮೇಶ್ವರು ಅವರು ಕಾಂಗ್ರೆಸ್‌ನ ವಿಶ್ವಾಸಾರ್ಹ ಸಂಘಟನಾ ವ್ಯಕ್ತಿಯಾಗಿದ್ದು, ಕರ್ನಾಟಕದ ಪ್ರಮುಖ ದಲಿತ ನಾಯಕರದಲ್ಲಿ ಒಬ್ಬರಾಗಿದ್ದಾರೆ. ಪರಮೇಶ್ವರ ಅವರು 8 ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಹೀಗಾಗಿ ಅವರು ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದರು. ಇದೀಗ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ.
74 ವರ್ಷದ ಪರಮೇಶ್ವರ ಅವರು ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ ಅವರು ಆರು ಬಾರಿ ಶಾಸಕರಾಗಿದ್ದು, ಅವರು ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ವಾಲ್ಮೀಕಿ ಬುಡಕಟ್ಟು ಸಮುದಾಯದಿಂದ ಬಂದಿರುವ 64 ವರ್ಷದ ಜಾರಕಿಹೊಳಿ, ಸಕ್ಕರೆ ಕಾರ್ಖಾನೆ ಹೊಂದಿರುವ ಉದ್ಯಮ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯ ಯಮಕನಮರಡಿಯನ್ನು ಪ್ರತಿನಿಧಿಸುತ್ತಾರೆ.
ಪ್ರಿಯಾಂಕ್ ಖರ್ಗೆ
47 ವರ್ಷದ ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ಹಿರಿಯ ನಾಯಕ, ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ. ದಲಿತ ನಾಯಕ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆಯನ್ನು ಹೊಂದಿದ್ದರು.
ಚಿತ್ತಾಪುರ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧದ ತಮ್ಮ ಉಗ್ರ ನಿಲುವಿಗೆ ಹೆಸರುವಾಸಿಯಾಗಿದ್ದಾರೆ.
ಎಂ ಬಿ ಪಾಟೀಲ್
61 ವರ್ಷ ಪ್ರಮುಖ ಲಿಂಗಾಯತ ನಾಯಕ ಎಂ ಬಿ ಪಾಟೀಲ್ ಅವರು ವಿಶ್ವ ಲಿಂಗಾಯತ ಮಹಾಸಭಾದ ಕಾರ್ಯಾಧ್ಯಕ್ಷರಾಗಿದ್ದಾರೆ. ಅವರು ವಿಜಯಪುರದ ಪ್ರಸಿದ್ಧ ಶಿಕ್ಷಣ ತಜ್ಞ, ರಾಜಕಾರಣಿ ಬಿ ಎಂ ಪಾಟೀಲ್ ಅವರ ಹಿರಿಯ ಮಗ.
ಬಬಲೇಶ್ವರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಪಾಟೀಲ್, ಪಿ ಜಿ ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಯು ಟಿ ಖಾದರ್
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವಿಧಾನಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ 56 ವರ್ಷದ ಯುಟಿ ಖಾದರ್ ಅವರು ಕರಾವಳಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಪ್ರಬಲ ಅಲ್ಪಸಂಖ್ಯಾತ ಮುಖವಾಗಿದ್ದಾರೆ. ಅವರು ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು, ನಗರಾಭಿವೃದ್ಧಿ ಮತ್ತು ವಸತಿ ಸೇರಿದಂತೆ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ.
ಖಾದರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ಕೃಷ್ಣ ಬೈರೇಗೌಡ
53 ವರ್ಷದ ಕೃಷ್ಣ ಬೈರೇಗೌಡ ಅವರು ಒಕ್ಕಲಿಗ ಪ್ರಭಾವಿ ನಾಯಕರಾಗಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಕೃಷ್ಣ ಬೈರೇಗೌಡ ಅವರು ವಾಷಿಂಗ್ಟನ್ ಡಿಸಿಯ ಅಮೆರಿಕನ್ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಎಂಎ ಪದವಿ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಬಿಬಿಎಂ ಪದವಿ ಪಡೆದಿದ್ದಾರೆ. ಅವರ ತಂದೆ ಸಿ ಬೈರೇಗೌಡರು ಕರ್ನಾಟಕ ವಿಧಾನಸಭೆಯ ಉಪಸಭಾಪತಿ ಮತ್ತು ಕೃಷಿ ಸಚಿವರಾಗಿದ್ದರು.
ಕೃಷ್ಣ ಬೈರೇಗೌಡರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ಕೆ ಎಚ್ ಮುನಿಯಪ್ಪ
ಕೆ ಎಚ್ ಮುನಿಯಪ್ಪ ಅವರು ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿದವರು ಮತ್ತು ಸಿದ್ದರಾಮಯ್ಯ ಸರ್ಕಾರದಲ್ಲಿ ನಾಗರಿಕ ಸರಬರಾಜು ಹಾಗೂ ಸಾರ್ವಜನಿಕ ವಿತರಣಾ ಸಚಿವರಾಗಿದ್ದರು.
78 ವರ್ಷದ ಮುನಿಯಪ್ಪ ಅವರು ಕೋಲಾರದಿಂದ ಏಳು ಬಾರಿ ಸಂಸದರಾಗಿದ್ದರು ಮತ್ತು 2023 ರಲ್ಲಿ ರಾಜ್ಯ ರಾಜಕೀಯಕ್ಕೆ ಮರಳಿದರು. ಅವರ ಪುತ್ರಿ ರೂಪಕಲಾ ಕಾಂಗ್ರೆಸ್ ಶಾಸಕಿಯಾಗಿದ್ದು, ದೇವನಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ರಾಮಲಿಂಗಾ ರೆಡ್ಡಿ
72 ವರ್ಷದ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರಿನ ಬಿಟಿಎಂ ಲೇಔಟ್‌ನ ಶಾಸಕರಾಗಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲಿ ಸಾರಿಗೆ ಮತ್ತು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಖಾತೆ ಹೊಂದಿದ್ದರು. ಅವರು ಹಿಂದೆ ಗೃಹ ಖಾತೆಯನ್ನು ಹೊಂದಿದ್ದರು.
ಯತೀಂದ್ರ ಸಿದ್ದರಾಮಯ್ಯ
ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಕುರುಬ ಸಮುದಾಯಕ್ಕೆ ಸೇರಿದ್ದು, ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಎಂಎಲ್‌ಸಿ ಯತೀಂದ್ರ ಅವರು ಈ ಹಿಂದೆ ಅವರು ವರುಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
ಕೆ.ಜೆ. ಜಾರ್ಜ್
ಕೆ.ಜೆ. ಜಾರ್ಜ್ ಅವರು ಬೆಂಗಳೂರಿನಲ್ಲಿ ನೆಲೆಸಿರುವ ಮಲಯಾಳಿ. ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಇಂಧನ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ (2013-2015) ಗೃಹ ಸಚಿವರಾಗಿದ್ದರು. ಅವರು ಬೆಂಗಳೂರು ನಗರದ ಸರ್ವಜ್ಞ ನಗರವನ್ನು ಪ್ರತಿನಿಧಿಸುತ್ತಾರೆ.
ಈಶ್ವರ್ ಖಂಡ್ರೆ
ಲಿಂಗಾಯತ ಸಮುದಾಯದ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಪುತ್ರ 64 ವರ್ಷದ ಈಶ್ವರ್ ಖಂಡ್ರೆ ಅವರು ಭಾಲ್ಕಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಅರಣ್ಯ, ಪರಿಸರ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಶರಣ್ ಪ್ರಕಾಶ್ ಪಾಟೀಲ್
59 ವರ್ಷದ ಹಿರಿಯ ಕಾಂಗ್ರೆಸ್ ನಾಯಕ ಶರಣ್ ಪ್ರಕಾಶ್ ಪಾಟೀಲ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದ ಲಿಂಗಾಯತ ಸಮುದಾಯದ ಪ್ರಮುಖ ರಾಜಕೀಯ ನಾಯಕ. ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಪಾಟೀಲ್ ಅವರು ಸೇಡಂ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ಬೈರತಿ ಸುರೇಶ್
53 ವರ್ಷದ ಬೈರತಿ ಸುರೇಶ್ ಅವರು ಕುರುಬ ಸಮುದಾಯಕ್ಕೆ ಸೇರಿದ್ದು, ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಸುರೇಶ್ ಅವರು ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು. ಅವರು ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.