ಹೆಚ್ ಡಿ ದೇವೇಗೌಡ  
ರಾಜಕೀಯ

'ಮೋದಿ ಅವರೊಂದಿಗೆ ನನ್ನ ಸಂಬಂಧ ರಾಜ್ಯಸಭೆ ಸ್ಥಾನಕ್ಕೆ ಸೀಮಿತ ಅಲ್ಲ, ಅವರ ಮಟ್ಟಕ್ಕೆ ಬೆಳೆದಿರುವ ಮತ್ತೊಬ್ಬ ನಾಯಕ ಇಂದು ಇಲ್ಲ': HD ದೇವೇಗೌಡ; Video

2014ರಿಂದ ನಾನು ಮೋದಿ ಅವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದೇನೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೋಧ್ರಾ ಘಟನೆಯ ವಿಚಾರದಲ್ಲಿ ನಾನು ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮೋದಿ ಅವರನ್ನು ಟೀಕಿಸಿದ್ದೆವು ಎಂದು ನೆನಪಿಸಿಕೊಂಡರು.

ಬೆಂಗಳೂರು: ಜೂನ್ 25ರಂದು ತಮ್ಮ ರಾಜ್ಯಸಭಾ ಅವಧಿ ಪೂರ್ಣಗೊಳ್ಳಲಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧವು ರಾಜ್ಯಸಭೆ ಸ್ಥಾನಕ್ಕೆ ಸಂಬಂಧಪಟ್ಟದ್ದಲ್ಲ, ಕಳೆದ ಹತ್ತು ವರ್ಷಗಳಲ್ಲಿ ಬೆಳೆದ ವೈಯಕ್ತಿಕ ಬಾಂಧವ್ಯದ ಆಧಾರದ ಮೇಲಿರುವುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮ್ಮ ಮರುನಾಮನಿರ್ದೇಶನಕ್ಕಾಗಿ ತಾವು ಯಾವುದೇ ಮನವಿ ಮಾಡಿಲ್ಲ ಎಂದೂ ತಿಳಿಸಿದ್ದಾರೆ.

2014ರಿಂದ ನಾನು ಮೋದಿ ಅವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದೇನೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೋಧ್ರಾ ಘಟನೆಯ ವಿಚಾರದಲ್ಲಿ ನಾನು ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮೋದಿ ಅವರನ್ನು ಟೀಕಿಸಿದ್ದೆವು. ಆದರೆ ಒಂದು ರಾಜ್ಯಸಭೆ ಸ್ಥಾನಕ್ಕಾಗಿ ಪ್ರಧಾನಿಯವರೊಂದಿಗಿನ ನನ್ನ ಸಂಬಂಧ ಕೊನೆಗೊಳ್ಳುವುದಿಲ್ಲ ಎಂದು ಆರು ದಶಕಗಳಿಗೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿರುವ ದೇವೇಗೌಡ ಹೇಳಿದ್ದಾರೆ.

ತಾವು ರಾಜ್ಯಸಭಾ ಸದಸ್ಯನಾಗಿರುವುದಿಲ್ಲ ಎಂಬ ಕಾರಣಕ್ಕೆ ಇನ್ನು ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ ದೇವೇಗೌಡ, ಒಂದು ರಾಜ್ಯಸಭೆ ಸ್ಥಾನಕ್ಕಾಗಿ ತಮ್ಮ ಮತ್ತು ಮೋದಿ ನಡುವಿನ ಸಂಬಂಧ ಹದಗೆಡುತ್ತದೆ ಎಂದು ಕಾಂಗ್ರೆಸ್ ಭಾವಿಸಿದ್ದರೆ ಅದು ತಪ್ಪು ಕಲ್ಪನೆ, ಎಂದರು.

ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಮೋದಿ ಅವರ ನಾಯಕತ್ವಕ್ಕೆ ಅಪಾರ ಗೌರವವಿದೆ ಎಂದು ಅವರು ಅಭಿಪ್ರಾಯಪಟ್ಟರು.

10 ವರ್ಷಗಳಲ್ಲಿ ನಮ್ಮ ಸಂಬಂಧ ಗಟ್ಟಿಯಾಗಿದೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಅವರೊಂದಿಗಿನ ನನ್ನ ಸಂಬಂಧವು ಕೇವಲ ಒಂದು ರಾಜ್ಯಸಭೆ ಸ್ಥಾನಕ್ಕಾಗಿ ಬೆಳೆದದ್ದಲ್ಲ. ಅದು ನಮ್ಮಿಬ್ಬರ ನಡುವಿನ ವೈಯಕ್ತಿಕ ಬಾಂಧವ್ಯವಾಗಿದೆ. ನಾನು ರಾಜ್ಯಸಭೆಯ ಸದಸ್ಯನಾಗಿರದಿದ್ದರೂ ಆ ಸಂಬಂಧ ಮುಂದುವರಿಯುತ್ತದೆ ಎಂದು ದೇವೇಗೌಡ ಹೇಳಿದರು.

ಈ ದೇಶದಲ್ಲಿ ಯಾವುದೇ ಸಂದರ್ಭ ಬಂದರೂ, ಮೋದಿ ಅಥವಾ ಅವರ ಆಡಳಿತದ ಬಗ್ಗೆ ನನ್ನ ಭಾವನೆಗಳನ್ನು ನಾನು ನಿರ್ಭಯವಾಗಿ ವ್ಯಕ್ತಪಡಿಸಿದ್ದೇನೆ. ಕುಮಾರಸ್ವಾಮಿ ಅವರ ಸರ್ಕಾರ ಇಲ್ಲಿ ಪತನಗೊಂಡಾಗ ಬಿಜೆಪಿಯೊಂದಿಗೆ ಕೈಜೋಡಿಸಬೇಕು ಎಂದು ನಾನು ಹೇಳಿದ್ದೆ. ಇದು ಯಾರಿಗೂ ಗೊತ್ತಿಲ್ಲದ ವಿಷಯವಲ್ಲ ಎಂದರು.

ಎಲ್ಲ ಸಂದರ್ಭಗಳಲ್ಲಿಯೂ ನಾನು ಮೋದಿ ಅವರೊಂದಿಗೆ ನಿಂತಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರು ಮಾಡಿದ ಕೆಲಸಗಳನ್ನು ನಾನು ಬೆಂಬಲಿಸಿದ್ದೇನೆ ಎಂದು ಅವರು ಹೇಳಿದರು.

ಭಾರತವು 145 ಕೋಟಿ ಜನಸಂಖ್ಯೆಯ ವಿಶಾಲ ರಾಷ್ಟ್ರ. ನೇರವಾಗಿ ಹೇಳುವುದಾದರೆ, ಇಂಡಿಯಾ ಮೈತ್ರಿಕೂಟದಲ್ಲಿ ಮೋದಿ ಅವರಿಗೆ ಸಮಾನವಾಗಿ ಸ್ಪರ್ಧಿಸಬಲ್ಲ ಮತ್ತೊಬ್ಬ ನಾಯಕ ನನಗೆ ಕಾಣುತ್ತಿಲ್ಲ ಎಂದು ದೇವೇಗೌಡ ಅಭಿಪ್ರಾಯಪಟ್ಟರು.

ದೇಶದ ಒಟ್ಟಾರೆ ಅಭಿವೃದ್ಧಿಯ ಜೊತೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕೊಂಡೊಯ್ಯುವ ಗುರಿಯನ್ನು ಅವರು ಇಟ್ಟಿದ್ದಾರೆ. ನಮ್ಮ ರಕ್ಷಣಾ ಸಾಮರ್ಥ್ಯವೂ ಬಹಳಷ್ಟು ಹೆಚ್ಚಾಗಿದೆ. ಇಂತಹ ಅನೇಕ ಸಾಧನೆಗಳನ್ನು ಹೇಳಬಹುದು ಎಂದರು.

ಇಂದು ಮೋದಿ ಅವರು ಅಂತಾರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದಾರೆ. ದೇಶದಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಅವರಿಗೆ ವಿಶೇಷ ಸ್ಥಾನವಿದೆ. ಆ ಮಟ್ಟಕ್ಕೆ ಬೆಳೆದಿರುವ ಮತ್ತೊಬ್ಬ ನಾಯಕ ಇಲ್ಲ ಎಂದು ಅವರು ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕಸದಲ್ಲೂ ಕಾಸು': ಕಸ ಸಂಸ್ಕರಣೆ ನೆಪದಲ್ಲಿ ₹39,000 ಕೋಟಿ ಹಗರಣ, ₹10,000 ಕೋಟಿ ಕಿಕ್‌ಬ್ಯಾಕ್‌: ಆರ್‌ ಅಶೋಕ ಗಂಭೀರ ಆರೋಪ

ಹಿಂಸಾ ಪೀಡಿತ PoKಗೆ ಸೈನಿಕರನ್ನು ಹೊತೊಯ್ಯುತ್ತಿದ್ದ Pak ಸೇನಾ ಹೆಲಿಕಾಪ್ಟರ್ ಪತನ; 21 ಸೈನಿಕರು ಸಾವು

ಮೇಜರ್ ಸರ್ಜರಿ: ಹಿರಿಯ ಅಧಿಕಾರಿಗಳ ವರ್ಗ, ಕಟಾರಿಯಾಗೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ ಹೆಚ್ಚುವರಿ ಹೊಣೆ!

ಬೆಂಗಳೂರು ಏರ್​ಪೋರ್ಟ್​​ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯ ಬಂಧನ; 1.37 ಕೋಟಿ ರೂ. ಮೌಲ್ಯದ ಬಂಗಾರ ವಶಕ್ಕೆ!

Operation Grihalakshmi: ರಾಜ್ಯಾದ್ಯಂತ 4.30 ಲಕ್ಷ 'ಗೃಹಲಕ್ಷ್ಮಿ' ಫಲಾನುಭವಿಗಳ ಹೆಸರು ಡಿಲೀಟ್

SCROLL FOR NEXT