ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರಿಗೆ ಎನ್ಡಿಎಯಿಂದ ರಾಜ್ಯಸಭಾ ಟಿಕೆಟ್ ಕೈತಪ್ಪಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಇಂದು ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಹೆಚ್ಡಿ ದೇವೇಗೌಡರು, 'ನನಗೆ ರಾಜ್ಯಸಭಾ ಸದಸ್ಯನಾಗಬೇಕು ಎಂಬ ಯಾವುದೇ ವ್ಯಾಮೋಹವಿಲ್ಲ. ನನ್ನ ರಾಜಕೀಯ ಜೀವನದ ಎಪ್ಪತ್ತು ವರ್ಷಗಳ ಸುದೀರ್ಘ ಪಯಣದಲ್ಲಿ ಅಧಿಕಾರಕ್ಕಿಂತ ಜನಸೇವೆಯೇ ಮುಖ್ಯವಾಗಿತ್ತು' ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇದೇ ಸಂದರ್ಭದಲ್ಲಿ ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ ದೇವೇಗೌಡರು ನಾನು ಸುಮ್ಮನೆ ಕೂರಲ್ಲ, ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ರಾಜ್ಯ ಮತ್ತು ದೇಶದ ವಿಚಾರವನ್ನು ಯಾರ ಹಂಗಿಲ್ಲದೆ ಮಾತಾಡ್ತೇನೆ ಎಂದು ಹೇಳಿದರು.
ಏಳು ದಶಕಗಳ ರಾಜಕೀಯ ಪಯಣ
ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ಸ್ಮರಿಸಿದ ದೇವೇಗೌಡರು, 'ನಾನು ರಾಜಕಾರಣಕ್ಕೆ ಬಂದು ಎಷ್ಟು ವರ್ಷವಾಯಿತು ಎಂದು ಒಮ್ಮೆ ಯೋಚಿಸಿ. 1954-55 ರಿಂದಲೇ ನಾನು ಸಕ್ರಿಯ ರಾಜಕಾರಣದಲ್ಲಿದ್ದೇನೆ. ಅಂದು ಕೇವಲ ಗುತ್ತಿಗೆ ಕೆಲಸ ಮಾಡುತ್ತಿದ್ದ ನಾನು, ಅದರ ಜೊತೆಜೊತೆಗೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ರಾಜಕೀಯಕ್ಕೆ ಬಂದವನು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಜನರ ಮಧ್ಯೆಯೇ ಇದ್ದೇನೆ. ಹಾಗಾಗಿ, ಇಂದು ಒಂದು ಸ್ಥಾನಕ್ಕಾಗಿ ನಾನು ಹಾತೊರೆಯುವ ಅಗತ್ಯವಿಲ್ಲ ಎಂದರು.
ಅಪಮಾನದ ಪ್ರಶ್ನೆಯೇ ಇಲ್ಲ
ರಾಜ್ಯಸಭಾ ಟಿಕೆಟ್ ಕೈತಪ್ಪಿದ್ದಕ್ಕೆ ದೇವೇಗೌಡರಿಗೆ ಅಪಮಾನ ಮಾಡಲಾಗಿದೆ ಎಂಬ ಅವರ ಹಿತೈಷಿಗಳ ಹಾಗೂ ಬೆಂಬಲಿಗರ ಮಾತಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಸ್ನೇಹಿತರು ನನ್ನ ಬಗ್ಗೆ ಕಾಳಜಿಯಿಂದ ಮಾತನಾಡುತ್ತಿದ್ದಾರೆ. ಬಹಳ ಅಪಮಾನವಾಯಿತು ಎಂದು ನೋವು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನನ್ನ ಹೆಸರು ಪರಿಗಣನೆಗೆ ಬರುತ್ತದೆ ಎಂದು ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದು ಬಿಟ್ಟರೆ, ನಾನು ಆ ಬಗ್ಗೆ ಎಲ್ಲಿಯೂ ಬೇಡಿಕೆ ಇಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ಸ್ಪರ್ಧಿಸುವ ಆಸಕ್ತಿ ಇದ್ದಿದ್ದರೆ, ಮೇ 26ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಾಗಿ ದೆಹಲಿಗೆ ಹೋದಾಗ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಈ ವಿಷಯವನ್ನು ಚರ್ಚಿಸುತ್ತಿದ್ದೆ. ಆದರೆ ನಾನು ಯಾರೊಂದಿಗೂ ಈ ಬಗ್ಗೆ ಮಾತುಕತೆ ನಡೆಸಲಿಲ್ಲ. ಕಾರ್ಯಕ್ರಮ ಮುಗಿದ ಬಳಿಕ ಬೆಂಗಳೂರಿಗೆ ಹಿಂದಿರುಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ನನಗೆ ಆಸಕ್ತಿ ಇಲ್ಲ. ಇದು ಪಕ್ಷದೊಳಗೆ ಚರ್ಚೆಯಾದ ವಿಚಾರ. ನಮ್ಮ ಬಳಿ ವಿಧಾನಸಭೆಯಲ್ಲಿ 18 ಸದಸ್ಯರಿದ್ದಾರೆ. ಈ ಸಂಖ್ಯೆಯಿಂದ ನಾವು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಇದಕ್ಕಿಂತ ಹೆಚ್ಚು ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲ ಎಂದು ಹೇಳಿದರು.