ಕರ್ನಾಟಕ ಕಾಂಗ್ರೆಸ್  
ರಾಜಕೀಯ

ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ; ಬೆಂಬಲಿಗರಿಂದ ಭಾರೀ ಪ್ರತಿಭಟನೆ, ಹೈಕಮಾಂಡ್ ಗಮನ ಸೆಳೆಯಲು ಹೊಸ ತಂತ್ರ

ಎಚ್‌.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ರಾಜ್ಯಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ದಿನಗೂಲಿ ಕಾರ್ಮಿಕರಿಂದ ಹಿಡಿದು ವೈದ್ಯರ ತನಕ ಹಲವರು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.

ಗದಗ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗಳು ತೀವ್ರಗೊಳ್ಳುತ್ತಿರುವ ನಡುವೆಯೇ ಗದಗ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಗದಗ ಶಾಸಕ ಎಚ್ ಕೆ ಪಾಟೀಲ್ ಮತ್ತು ರೋಣ ಶಾಸಕ ಜಿ ಎಸ್ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಗಮನ ಸೆಳೆಯಲು ವಿವಿಧ ರೀತಿಯ ಅಭಿಯಾನಗಳನ್ನು ನಡೆಸುತ್ತಿದ್ದಾರೆ.

ಎಚ್‌.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ರಾಜ್ಯಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ದಿನಗೂಲಿ ಕಾರ್ಮಿಕರಿಂದ ಹಿಡಿದು ವೈದ್ಯರ ತನಕ ಹಲವರು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.

ಮತ್ತೊಂದೆಡೆ, ಜಿ.ಎಸ್‌. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುವುದಾಗಿ ರೋಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಹಲವು ಮಠಾಧೀಶರು ಘೋಷಿಸಿದ್ದಾರೆ.

ಶುಕ್ರವಾರ ಜಿ.ಎಸ್‌. ಪಾಟೀಲ್ ಪರ ನಡೆದ ಪ್ರತಿಭಟನೆ ವೇಳೆ ಬೆಂಬಲಿಗನೋರ್ವ ವಿಷ ಸೇವಿಸಲು ಯತ್ನಿಸಿದ್ದಾನೆ ಎನ್ನಲಾಗಿದ್ದು, ಮಧ್ಯಪ್ರವೇಶಿಸಿ ಪೊಲೀಸ್ ಸಿಬ್ಬಂದಿ ಆ ಪ್ರಯತ್ನವನ್ನು ತಡೆದಿದ್ದಾರೆ.

ಸಚಿವ ಸ್ಥಾನಕ್ಕಾಗಿ ಒತ್ತಾಯಿಸುವ ಚಟುವಟಿಕೆ ಕಾಂಗ್ರೆಸ್‌ಗೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿಯಲ್ಲೂ ನರಗುಂದ ಶಾಸಕ ಸಿಸಿ. ಪಾಟೀಲ್ ಅವರನ್ನು ಪ್ರತಿಪಕ್ಷ ನಾಯಕನನ್ನಾಗಿ ನೇಮಿಸುವಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಗದಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾರ್ಮಿಕ ಸಂಘಟನೆಗಳು, ದಿನಗೂಲಿ ಕಾರ್ಮಿಕರು ಹಾಗೂ ಹಲವು ಸಂಘಟನೆಗಳು ತಮ್ಮ ತಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಪ್ರತಿಭಟನೆಗಳು ಮತ್ತು ಮನವಿ ಅಭಿಯಾನಗಳನ್ನು ನಡೆಸುತ್ತಿವೆ.

ಗದಗದ ವೈದ್ಯರೂ ಸಹ ಎಚ್‌.ಕೆ. ಪಾಟೀಲ್ ಅವರ ಆಡಳಿತಾತ್ಮಕ ಅನುಭವ ಹಾಗೂ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ನಾಯಕರಿಗೆ ಮನವಿ ಸಲ್ಲಿಸಿದ್ದಾರೆ.

ಎಚ್‌.ಕೆ. ಪಾಟೀಲ್ ಅವರ ಬೆಂಬಲಿಗರು ಮಾತನಾಡಿ, ಪಾಟೀಲ್ ಅವರು ಕೇವಲ ಸಚಿವ ಸ್ಥಾನಕ್ಕೆ ಮಾತ್ರವಲ್ಲ, ಮುಖ್ಯಮಂತ್ರಿ ಹುದ್ದೆಗೆ ಕೂಡ ಅರ್ಹತೆ ಮತ್ತು ಅನುಭವ ಹೊಂದಿರುವ ನಾಯಕ. ಹಲವು ಮಹತ್ವದ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿರುವ ಅವರು, ಅನೇಕ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಾದಿಸುತ್ತಿದ್ದಾರೆ.

ಇನ್ನೊಂದೆಡೆ, ಜಿ.ಎಸ್‌. ಪಾಟೀಲ್ ಅವರ ಬೆಂಬಲಿಗರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಿದ್ದು, ಅವರ ನಾಯಕತ್ವ, ದೂರದೃಷ್ಟಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಮಾನ್ಯತೆ ಸಿಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಆದರೆ, ಈ ಇಬ್ಬರು ನಾಯಕರ ಆಪ್ತ ವಲಯದ ಮೂಲಗಳ ಪ್ರಕಾರ, ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಮನವಿಗಳು ಅಂತಿಮ ನಿರ್ಧಾರದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಅಂತಿಮ ತೀರ್ಮಾನ ಕಾಂಗ್ರೆಸ್ ಹೈಕಮಾಂಡ್ ಕೈಯಲ್ಲಿದೆ ಎಂದು ತಿಳಿಸಿವೆ.

ಈ ನಡುವೆ ಆಂಧ್ರಪ್ರದೇಶದ ಕೇಂದ್ರ ಬುಡಕಟ್ಟು ವಿಶ್ವವಿದ್ಯಾಲಯದ ಮಾಜಿ ಕುಲಪತಿ ತೇಜಸ್ವಿ ವಿ ಕಟ್ಟಿಮನಿ ಅವರು ಎಚ್‌.ಕೆ. ಪಾಟೀಲ್ ಅವರಿಗೆ ಪ್ರಮುಖ ಸಚಿವ ಸ್ಥಾನ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಚ್‌.ಕೆ. ಪಾಟೀಲ್ ಅವರು ಮಹತ್ವದ ಸಚಿವ ಸ್ಥಾನಕ್ಕೆ ಅರ್ಹರು. ಉತ್ತಮ ಮುಖ್ಯಮಂತ್ರಿಯಾಗುವ ಸಾಮರ್ಥ್ಯವೂ ಅವರಿಗಿದೆ. ಅವರು ಕೇವಲ ಗದಗ ಜಿಲ್ಲೆಯನ್ನಷ್ಟೇ ಅಲ್ಲ, ಉತ್ತರ ಕರ್ನಾಟಕದ ಹಿತಾಸಕ್ತಿಗಳನ್ನೂ ಪ್ರತಿನಿಧಿಸುತ್ತಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಅವರು ಕೊಡುಗೆ ನೀಡಿದ್ದಾರೆ. ವಿವಿಧ ಸಚಿವ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದು, ಅವರ ರಾಜಕೀಯ ಜೀವನದಲ್ಲಿ ಯಾವುದೇ ದೊಡ್ಡ ವಿವಾದಗಳಿಲ್ಲ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ-ಇರಾನ್ ಶಾಂತಿ ಒಪ್ಪಂದ 'ಈಗ ಸಂಪೂರ್ಣ: ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್- ಡೊನಾಲ್ಡ್ ಟ್ರಂಪ್ ಘೋಷಣೆ!

ರಾಜ್ಯದಲ್ಲಿ ಮುಂಗಾರು ಚುರುಕು: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ yellow ಅಲರ್ಟ್, ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

ಜಗತ್ತನ್ನು ಬೆರಗುಗೊಳಿಸಿದ ಮಾನವ ನಿರ್ಮಿತ ಅದ್ಭುತಗಳು: ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಿವು..!

1993ರಲ್ಲಿ 3 ಎಕರೆ ಇದ್ದ ಆಸ್ತಿ 2018ಕ್ಕೆ 1,400 ಕೋಟಿ ಹೇಗಾಯ್ತು?: ರೈತರಿಗೂ ಶ್ರೀಮಂತರಾಗುವ ಮಾರ್ಗ ಹೇಳಿಕೊಡಿ; ಕುಮಾರಸ್ವಾಮಿ

ಕಾಂಗ್ರೆಸ್‌ನಲ್ಲಿ Muslim ಕೋಟಾಕ್ಕೆ ಪೈಪೋಟಿ; ಜಮೀರ್ ಪರ DK brothers ಬ್ಯಾಟಿಂಗ್, ಹೈಕಮಾಂಡ್ ಮೇಲೆ ಒತ್ತಡ..!

SCROLL FOR NEXT