ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತ ಚರ್ಚೆ ತೀವ್ರಗೊಂಡಿದ್ದು, ಗೃಹ ಸಚಿವ ಪ್ರಿಯಾಂಕ್ಖರ್ಗೆ ಅವರ ಇತ್ತೀಚಿನ ಹೇಳಿಕೆಗಳಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಆರ್‌ಎಸ್‌ಎಸ್ ವಿರುದ್ಧದ ಟೀಕೆಗಳ ಮೂಲಕ ಕಾಂಗ್ರೆಸ್ ರಾಜ್ಯದ ಪ್ರಮುಖ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕರು ಪಾರದರ್ಶಕತೆಯ ಬಗ್ಗೆ ಮಾತನಾಡುವ ಮೊದಲು ತಮ್ಮದೇ ಪಕ್ಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಹೇಳಿದ್ದಾರೆ. ವಿಶೇಷವಾಗಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಂತಹ ವಿಷಯಗಳಲ್ಲಿ ಕಾಂಗ್ರೆಸ್ ಸ್ಪಷ್ಟನೆ ನೀಡಿಲ್ಲ ಎಂದು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ವಾತಂತ್ರ್ಯ ಯೋಧರು ಉದಾತ್ತ ಉದ್ದೇಶಕ್ಕಾಗಿ ತಮ್ಮ ಬೆವರ ಹನಿಯ ಹಣವನ್ನು ತೊಡಗಿಸಿ ಕಟ್ಟಿದ ಸುಮಾರು 5000 ಕೋಟಿಯ ಆಸ್ತಿ ಹೊಂದಿದ್ದ ಹೆರಾಲ್ಡ್ ಸಂಸ್ಥೆಯನ್ನು’ಯಂಗ್ ಇಂಡಿಯನ್ ‘ ಹೆಸರಲ್ಲಿ ನುಂಗಿ ನೀರು ಕುಡಿದ ನೆಹರು ಕುಟುಂಬದ ಮಹಾನ್ ಫಲಾನುಭವಿಗಳಾಗಿರುವ ಖರ್ಗೆ ಕುಟುಂಬದ ಪ್ರಿಯಾಂಕ್ ಖರ್ಗೆ ಅವರೇ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪಾರದರ್ಶಕ ನಡೆ-ನುಡಿಯನ್ನು, ರಾಷ್ಟ್ರೀಯ ಬದ್ಧತೆಯನ್ನು ಪಸರಿಸುವಲ್ಲಿ ತೋರಿದ ಸಮರ್ಪಣೆ ಹಾಗೂ ತ್ಯಾಗದ ಪ್ರತೀಕವಾಗಿ ಇಂದು ವಿಶ್ವದ ಅತ್ಯಂತ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳೆಲ್ಲವೂ ನೇರ-ದಿಟ್ಟ- ಪಾರದರ್ಶಕ. ಪ್ರತೀ ಚಟುವಟಿಕೆಗಳೂ ಬಹಿರಂಗದಲ್ಲಿ ಅನಾವರಣ.
ರಾಷ್ಟ್ರ ವಿಧ್ವಂಸಕ ಚಟುವಟಿಕೆಯ ಅನೇಕ ಅಲ್ಪ ಸಂಖ್ಯಾತ ಹೆಸರಿನ ಮತೀಯವಾದಿ ಸಂಘಟನೆಗಳು ಈ ದೇಶದಲ್ಲಿ ತಲೆಯೆತ್ತಿರುವುದು, ಅಕ್ರಮ ವಿದೇಶಿ ದೇಣಿಗೆ ಪಡೆದು ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವ ಮಾಹಿತಿ ಗೃಹ ಇಲಾಖೆ ನಡೆಸುತ್ತಿರುವ ನಿಮ್ಮ ಬಳಿಯೇ ಇದೆ. ಈ ಬಗ್ಗೆ ಪತ್ರ ಬರೆದು ಆ ಸಂಸ್ಥೆಗಳಿಂದ ವಿವರ ಏಕೆ ನೀವು ಕೇಳುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮದರಸಾಗಳಂತೆ ಗುಪ್ತವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಕೇವಲ ಮತಾಂಧತೆಯನ್ನು ಬಿತ್ತಿ ರಾಷ್ಟ್ರೀಯತೆಯನ್ನು ವಿರೋಧಿಸಲು ಪ್ರಚೋದನೆ ನೀಡುವ ಮದರಸದಂಥಾ ಸಂಸ್ಥೆಗಳ ಚಟುವಟಿಕೆಗಳು ನಿಮ್ಮ ಕಣ್ಣಿಗೆ ಬೀಳುವುದಿಲ್ಲ, ಕಿವಿಗೂ ಕೇಳಿಸುವುದಿಲ್ಲ. ಏಕೆಂದರೆ ಅದರ ಮೂಲದಿಂದ ಉತ್ಪತ್ತಿಯಾಗುತಿರುವ ಮತಬ್ಯಾಂಕ್ ಆಧರಿಸಿ ಅಧಿಕಾರ ಅನುಭವಿಸುತ್ತಿರುವ ನಿಮಗೆ ರಾಷ್ಟ್ರ ವಿಧ್ವಂಸಕ ಚಟುವಟಿಕೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಬದ್ಧತೆ-ನೈತಿಕತೆ ಇರಲು ಹೇಗೆ ಸಾಧ್ಯ?
ರಾಷ್ಟ್ರೀಯ ಸ್ವಯಂ ಸಂಘದ ನೋಂದಣಿ ಕುರಿತು ವಿಪರೀತಿ ತಲೆಕೆಡಿಸಿಕೊಂಡಿರುವ ನಿಮ್ಮಂತವರಿಗೆ ಮಾನ್ಯ ಮೋಹನ್ ಭಾಗವತ್ ಜೀ ಏನು ಉತ್ತರ ಕೊಡಬೇಕೋ ಅದನ್ನು ಸರಿಯಾಗಿಯೇ ಕೊಟ್ಟಿದ್ದಾರೆ. ಸದ್ಯ ನಿಮ್ಮ ರಾಜಕೀಯ ಬಂಡವಾಳ ಆರ್‌ಎಸ್‌ಎಸ್ ಅನ್ನು ಬಾಲಿಶವಾಗಿ ಟೀಕಿಸುವುದು, ಆ ಮೂಲಕ ನೆಹರು ಕುಟುಂಬದ ಕುಡಿಗಳನ್ನು ಸಂತೃಪ್ತಿ ಪಡಿಸುವುದು. ಇದರಲ್ಲಿ ನಿಮಗೆ ವಿಕೃತ ಖುಷಿ ಸಿಗುವುದಾದರೆ ಬೈದುಕೊಳ್ಳಿ, ನಿಮ್ಮ ಬಗ್ಗೆ ಮರುಕ ಉಂಟಾಗುತ್ತೆ ಏಕೆಂದರೆ ನೀವು ಆಕಾಶಕ್ಕೆ ಉಗುಳುತ್ತಿದ್ದೀರಿ ಎಂಬ ಸತ್ಯ ನಿಮಗರಿವಿದೆಯೋ ಇಲ್ಲವೋ, ಆದರೆ ಈ ಕಾಯಕದಲ್ಲಿ ನಿಮಗೆ ಸಂತೃಪ್ತಿ ಸಿಗುವುದಾದರೆ ಇದನ್ನು ಮುಂದುವರಿಸಿ. ನಿಮ್ಮ ಪ್ರತಿ ತೆಗಳಿಕೆಯು ಸುದ್ದಿಯಾಗುತ್ತದೆ, ಪ್ರತಿಕ್ರಿಯೆ ಹರಿದು ಬರುತ್ತದೆ ಎಂಬ ಭ್ರಮೆಯ ಪೊರೆ ಅತೀ ಶೀಘ್ರದಲ್ಲಿಯೇ ಕಳಚಿ ಬೀಳಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಗಾಂಧೀಜಿ ಹೆಸರು ಪ್ರಸ್ತಾಪಿಸಿದ ಬಿಜೆಪಿ
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರು ಮಾತನಾಡಿ, 1948ರಲ್ಲಿ ಮಹಾತ್ಮ ಗಾಂಧಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂದು ಸಲಹೆ ನೀಡಿದ್ದರು. “ಗಾಂಧೀಜಿ ಕಾಂಗ್ರೆಸ್ ಹೆಸರನ್ನು ಲೋಕಸೇವಕ ಸಂಘ ಎಂದು ಬದಲಿಸಿ ಮಹಿಳೆಯರು, ದಲಿತರು ಹಾಗೂ ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದರು.
ಈಗ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಗಾಂಧೀಜಿಯವರ ಆಶಯದಂತೆ ಕಾಂಗ್ರೆಸ್ ವಿಸರ್ಜನೆ ಕುರಿತು ನೀವು ಯಾವಾಗ ಪತ್ರ ಬರೆಯುತ್ತೀರಿ?” ಎಂದು ಪ್ರಶ್ನಿಸಿದರು.
ಇದೇ ವೇಳೆ, “ಕಾನೂನು ಎಲ್ಲರಿಗೂ ಒಂದೇ ಎಂದು ಪ್ರಿಯಾಂಕ್ ಖರ್ಗೆ ಆಗಾಗ ಹೇಳುತ್ತಾರೆ. ಹಾಗಿದ್ದರೆ ಅವರು ಈ ವಿಷಯದಲ್ಲಿ ನ್ಯಾಯಾಲಯದ ಮೊರೆ ಏಕೆ ಹೋಗಿಲ್ಲ?” ಎಂದು ಸವಾಲು ಹಾಕಿದರು.
ಪ್ರಿಯಾಂಕ್ ಖರ್ಗೆ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ಹಾವೇರಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
“ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಸೇರಿದಂತೆ ಹಲವು ಗಂಭೀರ ವಿಚಾರಗಳಿವೆ. ಗೃಹ ಸಚಿವರಾಗಿ ಇವುಗಳತ್ತ ಗಮನ ಹರಿಸುವ ಬದಲು, ಆರ್‌ಎಸ್‌ಎಸ್ ಅಸ್ತಿತ್ವದ ಬಗ್ಗೆ ಪ್ರಶ್ನೆ ಎತ್ತುವುದು ಹಾಸ್ಯಾಸ್ಪದವಾಗಿದೆ,” ಎಂದು ಹೇಳಿದ್ದಾರೆ.