ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಬೇಕು ಎಂಬುದಾಗಿ ಪ್ರದೀಪ್ ಎಂಬುವರ ಜತೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿದ್ದಾರೆನ್ನಲಾದ ಆಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಈ ನಡುವೆ ಬಿಜೆಪಿ ಪಕ್ಷದ ಇಬ್ಬರು ಪ್ರಭಾವಿ ನಾಯಕರಾದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನಡುವೆ ವಾಕ್ಸಮರ ತಾರಕಕ್ಕೇರಿದೆ.
ತಮ್ಮ ವಿರುದ್ಧ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಟೀಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಸದಾನಂದಗೌಡರು, ‘ವಿಶ್ವನಾಥ್ ಮುತ್ತಪ್ಪ ರೈ ಕೈಕೆಳಗೆ ಲೂಟಿ ಹೊಡೆಯುತ್ತಿದ್ದ ವ್ಯಕ್ತಿ. ಗೂಂಡಾಗಿರಿ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ನಾನೇನು ಮಾತನಾಡಲಿ. ಹಣ ಹೊಡೆಯೋದು, ಕೊಳ್ಳೆ ಹೊಡೆಯೋದೇ ಅವರ ಕೆಲಸ’ ಎಂದರು. ‘ನಾನು ಒಕ್ಕಲಿಗ ಅಲ್ಲ ಎನ್ನುತ್ತಾರೆ. ಈ ಬಗ್ಗೆ ದಕ್ಷಿಣ ಕನ್ನಡದಲ್ಲಿ ಪ್ರತಿಭಟನೆ ನಡೆದಿದೆ. ಈ ವಿಷಯವನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ’ ಎಂದರು.
ವಿಶ್ವನಾಥ್ ಗೂಂಡಾಗಿರಿ ಮಾಡಿ ಬಂದವರು. ಅವರು ಈ ಹಿಂದೆ ಭೂಗತ ಲೋಕದ ಡಾನ್ ಮುತ್ತಪ್ಪ ರೈ ಕೈಕೆಳಗೆ ಕೆಲಸ ಮಾಡಿದವನು. ನಾನು ಅದೇ ಮುತ್ತಪ್ಪ ರೈ ವಿರುದ್ಧ ಹೋರಾಟ ಮಾಡಿ ಬಂದವನು. ವಿಶ್ವನಾಥ್‌ಗೆ ದುಡ್ಡಿನ ಅಮಲು ಹೆಚ್ಚಾಗಿದೆ ಎಂದು ಡಿವಿಎಸ್ ಗುಡುಗಿದ್ದಾರೆ.
ನನಗೆ ಯಲಹಂಕದ ಕೆಂಪೇಗೌಡ ಜಯಂತಿಗೆ ಹೋಗಬೇಡಿ ಎಂದು ಕರೆ ಮಾಡಲಾಗಿತ್ತು. ವಿಶ್ವನಾಥ್ ನನ್ನನ್ನು ಒಕ್ಕಲಿಗ ಅಲ್ಲ ಎಂದಿದ್ದಾರೆ. ಆದರೆ ನಾನು ಒಕ್ಕಲಿಗ ಅಲ್ಲ ಅನ್ನಲು ಅವರಾರು? ಎಂದು ಪ್ರಶ್ನಿಸಿದ್ದಾರೆ.