ವಿಧಾನಸಭೆಯ ಪ್ರತಿಪಕ್ಷ ಸದಸ್ಯ ಆರ್. ಅಶೋಕ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್. 
ರಾಜಕೀಯ

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ: ಸರ್ಕಾರದ ವಿರುದ್ಧ ಮುಗಿಬಿದ್ದ BJP, ಸಚಿವರ ಉತ್ತರ ಅಸಮರ್ಪಕ ಎಂದು ಸಭಾತ್ಯಾಗ

ಸದಸ್ಯರ ಪ್ರಶ್ನೆ, ಆಕ್ಷೇಪ, ಆರೋಪಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಉತ್ತರ ನೀಡಿದರೂ, ಉತ್ತರ ಸಮರ್ಪಕವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಬೆಳವಣಿಗೆ ನಡೆಯಿತು.

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ, ವೈದ್ಯರ ಅಸಮರ್ಪಕ ವರ್ಗಾವಣೆ, ಖಾಲಿ ಹುದ್ದೆಗಳ ಭರ್ತಿ ಮಾಡದಿರುವುದು ಸೇರಿ ಆರೋಗ್ಯ ಇಲಾಖೆಯಲ್ಲಿನ ದುರಾಡಳಿತ, ಅವ್ಯವಸ್ಥೆಗಳ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡವು.

ಸದಸ್ಯರ ಪ್ರಶ್ನೆ, ಆಕ್ಷೇಪ, ಆರೋಪಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಉತ್ತರ ನೀಡಿದರೂ, ಉತ್ತರ ಸಮರ್ಪಕವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಬೆಳವಣಿಗೆ ನಡೆಯಿತು.

ಪ್ರತಿಪಕ್ಷ ಸದಸ್ಯರ ಮನವಿ ಮೇರೆಲೆ ನಿಯಮ 69ರ ಅಡಿ ಸಾರ್ವಜನಿಕ ಮಹತ್ವದ ವಿಷಯದಡಿ ಆರೋಗ್ಯ ಇಲಾಖೆಯಲ್ಲಿನ ಲೋಪಗಳ ಕುರಿತು ಚರ್ಚೆಗೆ ಸ್ಪೀಕರ್ ಅವಕಾಶ ನೀಡಿದರು.

ಬಳಿಕ ವಿಷಯ ಪ್ರಸ್ತಾಪಿಸಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳ ನಡುವಿನ ಕಿತ್ತಾಟ ಇಲಾಖೆಯಲ್ಲಿನ ಅವ್ಯವಸ್ಥೆ ತೋರಿಸುತ್ತದೆ. ಅಲ್ಲದೆ, ಸಮುದಾಯ ಆರೋಗ್ಯ ಕೇಂದ್ರಗಳ ತಜ್ಞ ವೈದ್ಯರನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಕಳೆದ ಅಧಿವೇಶನದಲ್ಲಿ ಸರ್ಕಾರದ ಪರ ಸಚಿವ ಶಿವಾನಂದ ಪಾಟೀಲ್ ಅವರೇ ಉತ್ತರೀ ನೀಡಿದ್ದರೂ ವರ್ಗಾವಣೆ ಮಾಡಲಾಗುತ್ತಿದೆ.

ಇದನ್ನು ವೈದ್ಯರೇ ಹೇಳುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಸರಬರಾಜಿನಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೋಗಿಗಳಿಗೆ ಹೊರಗೆ ಮಾತ್ರೆ, ಔಷಧ ಖರೀದಿಸಲು ಬರೆದುಕೊಡಲಾಗುತ್ತಿದೆ. ಇಷ್ಟೆಲ್ಲ ಅವ್ಯವಸ್ಥೆಯಿಂದ ರೋಗಿಗಳು ಪರದಾಡುವಂತಾಗಿದೆ. ಇಲಾಖೆ ಬದುಕಿದೆಯಾ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ದನಿಗೂಡಿಸಿ ಬಿಜೆಪಿ ಹಿರಿಯ ಶಾಸಕ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು, ರಾಜ್ಯದ ಆರೋಗ್ಯ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು.

ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಅವರು, “ಔಷಧಗಳು ಖರೀದಿಯಾದರೂ ಆಸ್ಪತ್ರೆಗಳಿಗೆ ತಲುಪುತ್ತಿಲ್ಲ” ಎಂದು ಆರೋಪಿಸಿದರು.

ಇದಕ್ಕೆ ತಿರುಗೇಟು ನೀಡಿದ ಸಚಿವರು, ಅಶ್ವತ್ಥ್ ನಾರಾಯಣ್ ಅವರು ಆರೋಗ್ಯ ಸಚಿವರಾಗಿದ್ದಾಗ ಸಾಧನೆ ಮಾಡಲಿಲ್ಲ. ಈಗ ಸುಧಾರಣೆಗಳನ್ನು ತರುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಟೀಕಿಸಿದರು. ಬಳಿಕ ಆಡಳಿತಾರೂಢ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ನಂತರ ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಇದಕ್ಕೂ ಮೊದಲು ಆರೋಗ್ಯ ಇಲಾಖೆಯು 'ಗೃಹ ಆರೋಗ್ಯ'ದ ಮೂಲಕ 51 ಲಕ್ಷ ಕುಟುಂಬಗಳಿಗೆ ಭೇಟಿ ಮಾಡುವ ಮೂಲಕ ಸೇವೆ ಸಲ್ಲಿಸಿದೆ ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದರು.

28 ಲಕ್ಷಕ್ಕೂ ಹೆಚ್ಚು ಜನರು ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ, ಇದರಲ್ಲಿ ಕ್ಯಾನ್ಸರ್, ಮಧುಮೇಹ, ರೆಟಿನೋಪತಿ, ರಕ್ತಹೀನತೆ, ಅಪೌಷ್ಟಿಕತೆ ಮುಂತಾದ ಕಾಯಿಲೆಗಳನ್ನು ಈ ಮೂಲಕ ಪರಿಹರಿಸಲಾಗುತ್ತಿದೆ. ಪ್ರಧಾನಿ ಮೋದಿ ಉಚಿತ ಕಿಮೊಥೆರಪಿಯನ್ನು ಘೋಷಿಸುವ ಮೊದಲೇ, ನಾವು ಜಿಲ್ಲಾ ಆಸ್ಪತ್ರೆಗಳಲ್ಲಿ ಇದನ್ನು ಜಾರಿಗೆ ತಂದಿದ್ದೆವು, 459 ರೋಗಿಗಳು ಇದರ ಪ್ರಯೋಜನ ಪಡೆದಿದ್ದರು. ಪುನೀತ್ ‘ಹೃದಯ ಜ್ಯೋತಿ’ ಕಾರ್ಯಕ್ರಮದಡಿಯಲ್ಲಿ 25,000 ಜನರು ಪ್ರಯೋಜನ ಪಡೆದಿದ್ದರು, 18,000 ಜನರಿಗೆ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ತೆಗೆದುಹಾಕಲು ಚುಚ್ಚುಮದ್ದು ನೀಡಲಾಯಿತು ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಡಯಾಲಿಸಿಸ್ ರೋಗಿಗಳ ಪರಿಸ್ಥಿತಿ ಕೆಟ್ಟದಾಗಿತ್ತು. ನಮ್ಮ ಸರ್ಕಾರ ಹೊಸ ಯಂತ್ರಗಳನ್ನು ಖರೀದಿಸಿದ್ದು, ಇದರಿಂದ 7,767 ರೋಗಿಗಳು ಪ್ರಯೋಜನ ಪಡೆದಿದ್ದಾರೆ, ನಿಲ್ಲಿಸಲಾಗಿದ್ದ ‘ಶುಚಿ’ ಕಾರ್ಯಕ್ರಮವನ್ನು ಪುನರಾರಂಭಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಡಾ. ಹರ್ಷ ಗುಪ್ತಾ ಮತ್ತು ಸಚಿವಾಲಯದ ಸಿಬ್ಬಂದಿ ನಡುವಿನ ಮನಸ್ತಾಪ ಇತ್ಯರ್ಥವಾಗಿದೆ ಎಂದು ಸಚಿವರು ತಿಳಿಸಿದರು.

ಬಳಿಕ ಮಂಗನ ಕಾಯಿಲೆಗೆ (ಕ್ಯಾಸನೂರ್ ಫಾರೆಸ್ಟ್ ಡಿಸೀಸ್– ಕೆಎಫ್‌ಡಿ) ಹೈದರಾಬಾದ್‌ ಮೂಲದ ಕಂಪನಿ ಲಸಿಕೆ ತಯಾರಿಸಿದೆ. ಈ ವರ್ಷದ ಅಂತ್ಯಕ್ಕೆ ಲಸಿಕೆ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಮಂಗನ ಕಾಯಿಲೆಯಿಂದ ಈ ವರ್ಷ ಒಬ್ಬರು ಮೃತಪಟ್ಟಿದ್ದಾರೆ. ಕೆಎಫ್‌ಡಿ ಚಿಕಿತ್ಸೆಗೆ ಸದ್ಯ ಲಭ್ಯ ಇರುವ ಲಸಿಕೆ ಕೆಲಸ ಮಾಡುತ್ತಿಲ್ಲ. ಹೊಸ ಲಸಿಕೆ ತಯಾರಿಸುವ ಕುರಿತು ಕೇಂದ್ರ ಸರ್ಕಾರದ ಜೊತೆ ಮಾತನಾಡಿದ್ದೇನೆ. ದೆಹಲಿಯಲ್ಲಿ ಐಸಿಎಂಆರ್‌ ಮುಖ್ಯಸ್ಥರನ್ನು ಖುದ್ದು ಭೇಟಿಯಾಗಿ ಚರ್ಚೆ ಮಾಡಿದ್ದೇನೆ. ಹೈದರಾಬಾದ್‌ ಮೂಲದ ಕಂಪನಿ ತಯಾರಿಸಿದ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ನಡೆಯುತ್ತಿದೆ’ ಎಂದರು.

ನಂತರ ಮಾತನಾಡಿದ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಅಧ್ಯಕ್ಷ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು, ಸಮುದಾಯ ಆರೋಗ್ಯ ಕೇಂದ್ರಗಳನ್ನು (ಸಿಎಚ್‌ಸಿ) ಮುಚ್ಚುವ ಬಗ್ಗೆ ನಿರ್ಧಾರ ಕೈಗೊಳ್ಳುವ ಮೊದಲು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಬೇಕೆಂದು ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹೌದು, ನಾನು ಜೀವಂತವಾಗಿದ್ದೇನೆ': ಅಮೆರಿಕದ ರಾಯಭಾರಿಯೊಂದಿಗಿರುವ ಹೊಸ ವಿಡಿಯೋ ಹಂಚಿಕೊಂಡ ಇಸ್ರೇಲ್ ಪ್ರಧಾನಿ!

UAE ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ: ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಕುರಿತು ಚರ್ಚೆ!

ಬೆಂಗಳೂರು: ಜೀವಂತ ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಗೆ ಯತ್ನಿಸಿದ ಮಹಿಳೆ!ಮುಂದೇನಾಯ್ತು? ಈ Video ನೋಡಿ...

ನಿಮ್ಮ ಉದಾಸೀನ ಪ್ರವೃತಿಯಿಂದ ಸರ್ಕಾರಕ್ಕೆ ಮುಜುಗರ: ಸಚಿವರು-ಅಧಿಕಾರಿಗಳ ವಿರುದ್ಧ ಸಿಎಂ ಗರಂ, ಉತ್ತರಿಸುವಂತೆ ಖಡಕ್ ಸೂಚನೆ

ಕಾಬೂಲ್ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 'ಇತಿಹಾಸ ಪುನರಾವರ್ತನೆಯಾದರೆ, ಪಾಕ್‌ಗೆ ತುಂಬಾ ಕೆಟ್ಟದ್ದು' ಎಂದ ಮುಂಬೈ ಇಂಡಿಯನ್ಸ್ ಸ್ಪಿನ್ನರ್!

SCROLL FOR NEXT