ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ಬುಧವಾರ ನಡೆದ ಶಾಸಕರ ಫೋಟೋ ಶೂಟ್ ಇದೀಗ ನಾನಾ ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕಿದೆ. ಸರ್ಕಾರದ ಕೊನೆಯ ಅಧಿವೇಶನದ ವೇಳೆ ನಡೆಸುವ ಶಾಸಕರ ಫೋಟೋ ಶೂಟ್ ಅನ್ನು ಮಧ್ಯಮಾವಧಿಯಲ್ಲಿ ಮಾಡಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ.
ಸ್ಪೀಕರ್ ಯು.ಟಿ. ಖಾದರ್ ಅವಧಿಗೂ ಮುನ್ನವೇ ಈ ಫೋಟೋ ಶೂಟ್ ಆಯೋಜನೆ ಮಾಡಿಸಿದ್ದು ಸರ್ಕಾರದಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗಳಿಗೆ ನಾಂದಿ ಹಾಡುತ್ತಿದೆ. ಸರ್ಕಾರದ ಮಧ್ಯಮಾವಧಿಯಲ್ಲಿ ಮಾಡಿದ ಶಾಸಕರ ಈ ಫೋಟೋ ಶೂಟ್ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆಯ ಚರ್ಚೆಯನ್ನು ಹುಟ್ಟುಹಾಕಿದೆ. ಸ್ಪೀಕರ್ ಯು.ಟಿ. ಖಾದರ್ ಬುಧವಾರ ಬೆಳಗ್ಗೆ ವಿಧಾನಸೌಧದ ಮುಂದೆ ಶಾಸಕರುಗಳ ಗ್ರೂಪ್ ಫೋಟೋ ಶೂಟ್ ಮಾಡಿಸಿದರು. ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ಪಕ್ಷದ ಶಾಸಕರು ಈ ಫೋಟೋ ಶೂಟ್ ನಲ್ಲಿ ಭಾಗವಹಿಸಿದ್ದರು.
ಸಾಮಾನ್ಯವಾಗಿ ಸರ್ಕಾರದ ಕೊನೆ ವರ್ಷದಲ್ಲಿ ನಡೆಯುವ ಅಧಿವೇಶನ ವೇಳೆ ಎಲ್ಲಾ ಶಾಸಕರ ಫೋಟೋ ಶೂಟ್ ಮಾಡಲಾಗುತ್ತದೆ. ಆದರೆ, ಈ ಬಾರಿ ಮಧ್ಯಮಾವಧಿಯಲ್ಲೇ ಸ್ಪೀಕರ್ ಫೋಟೋ ಶೂಟ್ ಏರ್ಪಡಿಸಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ. ರೂಢಿ ಪ್ರಕಾರ ಸರ್ಕಾರ ಅಧಿಕಾರಕ್ಕೆ ಬಂದು ಅವಧಿ ಮುಗಿಯುವ ಕೊನೆಯ ಅಧಿವೇಶನದ ವೇಳೆ ನೆನಪಿಗಿರಲಿ ಎಂಬ ಕಾರಣಕ್ಕೆ ಈ ಫೋಟೋ ಶೂಟ್ ಆಯೋಜಿಸಲಾಗುತ್ತದೆ. ಇಲ್ಲ, ಬೆಳಗಾವಿಯಲ್ಲಿ ಸದನ ನಡೆಯುವ ಸಂದರ್ಭದಲ್ಲೂ ಈ ಫೋಟೋ ಶೂಟ್ ಆಗುತ್ತದೆ.
2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಖಾದರ್ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು, ಆದರೆ ಸ್ಪೀಕರ್ ಹುದ್ದೆಯನ್ನು ಅವರಿಗೆ ಬಲವಂತವಾಗಿ ನೀಡಲಾಯಿತು. ಖಾದರ್ ಈ ಹಿಂದೆ ಆರೋಗ್ಯ ಮತ್ತು ವಸತಿ ಸಚಿವರಾಗಿದ್ದರು.
ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್, ಇಂತಹ ಫೋಟೋ ಶೂಟ್‌ಗಳನ್ನು ಸಾಮಾನ್ಯವಾಗಿ ಯಾರೊಬ್ಬರ ಅಧಿಕಾರಾವಧಿಯ ಅಂತ್ಯದ ವೇಳೆಗೆ ಮಾಡಲಾಗುತ್ತದೆ ಎಂದು ಹೇಳಿದರು. ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಖಾದರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್‌ನಿಂದ ಅನುಮತಿ ಪಡೆದಿರಬಹುದು ಎಂದು ಅವರು ಹೇಳಿದರು. ಅಥವಾ ಈ ಫೋಟೋ ಶೂಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಿಯೇ ಏರ್ಪಡಿಸಲಾಗಿದೆಯೇ? ಶಾಸಕರೊಂದಿಗೆ ಗ್ರೂಪ್ ಫೋಟೋ ತೆಗೆದುಕೊಳ್ಳುವುದು ಅವರ ಹಕ್ಕು" ಎಂದು ಅವರು ಕೇಳಿದರು.
ಬುಧವಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದರು. ಸ್ಪೀಕರ್ ಶಾಸಕರ ಜೊತೆ ಫೋಟೋ ತೆಗೆಸಿಕೊಂಡ್ರು. ನನಗೆ ಅದೇ ಡೌಟ್ ಆಗಿದೆ. ಯಾವಾಗ ಸ್ಪೀಕರ್ ಸ್ಥಾನ ಬಿಟ್ಟು ಹೋಗ್ತಾರೋ ಅಂತ?. ಐದು ವರ್ಷಕ್ಕೊಮ್ಮೆ ಫೋಟೋ ತೆಗೆದುಕೊಳ್ತಾರೆ. ಇವರು ಈಗಲೇ ಯಾಕೆ ಫೋಟೋ ತೆಗೆಸಿಕೊಂಡ್ರು?. ಸ್ಪೀಕರ್ ಸ್ಥಾನದಿಂದ ಇಳಿಯಬಹುದೇನೋ ಎಂದು ಅನುಮಾನ ವ್ಯಕ್ತಪಡಿಸಿದರು. ಆದರೆ ಸಿದ್ದರಾಮಯ್ಯ ಅವರು ಯಾವುದೇ ಬದಲಾವಣೆಯಿಲ್ಲ, ಅದು ಪಕ್ಷದ ಹೈಕಮಾಂಡ್‌ನ ವಿಶೇಷಾಧಿಕಾರ ಎಂದು ಹೇಳಿದರು.
ಪ್ರಸ್ತುತ ಸಚಿವ ಸಂಪುಟದಲ್ಲಿ, ಮುಸ್ಲಿಂ ಸಮುದಾಯದ ಇಬ್ಬರು ಸಚಿವರಿದ್ದಾರೆ - ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಮತ್ತು ರಹೀಮ್ ಖಾನ್ - ಮತ್ತು ಅವರಲ್ಲಿ ಒಬ್ಬರನ್ನು ಕೈಬಿಡುವ ಸಾಧ್ಯತೆಯಿದೆ. ಖಾದರ್ ಆ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.