ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತಎಣಿಕೆಗೆ ಸಂಬಂಧಿಸಿದಂತೆ ರಾತ್ರಿಯಿಡೀ ಹೈಡ್ರಾಮಾ ನಡೆದಿದ್ದು, ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಹೈಕೋರ್ಟ್ ಆದೇಶದಂತೆ ನಡೆದ ಅಂಚೆ ಮತಗಳ (Postal Ballots) ಮರು ಎಣಿಕೆಯಲ್ಲಿ ಗೆಲುವು ಎಂದು ಘೋಷಿಸಲ್ಪಟ್ಟಿದ್ದ ಹಾಲಿ ಶಾಸಕ ಕಾಂಗ್ರೆಸ್ ನ ಟಿ.ಡಿ. ರಾಜೇಗೌಡ ಅವರಿಗೆ ಭಾರಿ ಹಿನ್ನಡೆಯಾಗಿದೆ.
ಅಂಚೆ ಮತಗಳ ಮರು ಮತಎಣಿಕೆಯಲ್ಲಿ ನಿನ್ನೆ ಸಾಯಂಕಾಲ ಟಿ ಡಿ ರಾಜೇಗೌಡ ಅವರು ವಿಜಯ ಸಾಧಿಸಿದರು ಎಂದು ಹೇಳಲಾಗಿತ್ತು. ಆದರೆ ಮತ ಏಣಿಕೆಯಲ್ಲಿ ಭಾರೀ ಗೊಂದಲಗಳು ಉಂಟಾಗಿತ್ತು. ನಿನ್ನೆ ಬೆಳಗ್ಗೆ ಏಳು ಗಂಟೆಗೆ ಆರಂಭವಾದ ಮತ ಎಣಿಕೆ ಮಧ್ಯರಾತ್ರಿಯವರಿಗೆ ನಡೆಯಿತು.
ಇಂದು ಬೆಳಗ್ಗೆ ಎಲ್ಲ ಗೊಂದಲಗಳಿಗೆ ಮಹತ್ವದ ತಿರುವು ಸಿಕ್ಕಿದೆ. 2023ರ ಮೇ 13 ರಂದು ನಡೆದಿದ್ದ ಮತ ಎಣಿಕೆ ವೇಳೆ ಸಿಂಧು (Valid) ಎಂದು ಪರಿಗಣಿಸಲಾಗಿದ್ದ ಮತಗಳು, ಈಗಿನ ಮರು ಎಣಿಕೆ ವೇಳೆ ತಿರಸ್ಕೃತಗೊಂಡಿವೆ.
ನಿನ್ನೆ ಸಾಯಂಕಾಲ ಏನಾಯಿತು?
ನಿನ್ನೆ ಮತಎಣಿಕೆ ಪತ್ರದಲ್ಲಿ ರಾಜೇಗೌಡ ಮತ್ತು ಮತ್ತೊಬ್ಬ ಅಭ್ಯರ್ಥಿ ಇಬ್ಬರಿಗೂ ‘ಡಬ್ಬಲ್ ಟಿಕ್’ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ 258 ಮತಗಳು ತಿರಸ್ಕೃತಗೊಂಡವು. ಈ ಹಿಂದೆ 569 ಅಂಚೆ ಮತಗಳನ್ನು ಪಡೆದಿದ್ದ ರಾಜೇಗೌಡರ ಪಟ್ಟಿಯಿಂದ 255 ಮತಗಳು ಮರು ಎಣಿಕೆ ವೇಳೆ ಕಡಿತಗೊಂಡವು. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ.
ಈಗಿನ ಮರು ಎಣಿಕೆಯಲ್ಲಿ ರಾಜೇಗೌಡರ 255 ಅಂಚೆ ಮತಗಳು ಕಡಿತಗೊಂಡಿರುವುದರಿಂದ ತನಗೆ ಬಹುಮತ ಬಂದಿದೆ ಎಂದು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡುವುದು ಬಾಕಿ ಇದೆ.
ರಾತ್ರಿಯಿಡೀ ಹೈಡ್ರಾಮಾ
ಮರು ಎಣಿಕೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬಂದ ಬೆನ್ನಲ್ಲೇ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಶಾಸಕ ರಾಜೇಗೌಡ ಅವರು ಇಂದು ನಸುಕಿನ ಜಾವ 4 ಗಂಟೆಯವರೆಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಬೀಡುಬಿಟ್ಟಿದ್ದರು.
ಕಾಂಗ್ರೆಸ್ ಮುಖಂಡ ಸುದೀರ್ ಕುಮಾರ್ ಮುರೋಳಿ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಮತ್ತು ಅಂದಿನ ಚುನಾವಣಾಧಿಕಾರಿ ವೇದಮೂರ್ತಿ ವಿರುದ್ಧ ಮತಗಳ ತಿದ್ದುಪಡಿ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ರಾಜೇಗೌಡರ ಮತಪತ್ರಗಳಲ್ಲಿ ‘ಡಬ್ಬಲ್ ಟಿಕ್’ ಮಾಡಿ ಉದ್ದೇಶಪೂರ್ವಕವಾಗಿ ಅವುಗಳನ್ನು ತಿರಸ್ಕೃತಗೊಳಿಸಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ.
ಹೈಕೋರ್ಟ್ ಆದೇಶದಂತೆ ಮರು ಎಣಿಕೆ ಮಾಡಿದ್ದೇವೆ. ಹ್ಯಾಂಡ್ ಬುಕ್ ನಿಯಮಗಳ ಪ್ರಕಾರ ಸಿಂಧು ಮತ್ತು ಅಸಿಂಧು ಮತಗಳನ್ನು ನಿರ್ಧರಿಸಲಾಗಿದೆ. ವರದಿಯನ್ನು ಈಗ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.