ಬೆಂಗಳೂರು/ಕನಕಪುರ: ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನ ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ದಕ್ಷ ಡಳಿತ ನೀಡುತ್ತಿರುವುದನ್ನು ಗಮನಿಸಿದ್ದಾರೆ. 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬೆಂಬಲ ನೀಡುವ ಸಂದೇಶ ನೀಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಹಾಗೂ ಕನಕಪುರದಲ್ಲಿ ಚುನಾವಣಾ ಫಲಿತಾಂಶ ವಿಚಾರವಾಗಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು. ಕರ್ನಾಟಕ ರಾಜ್ಯದಲ್ಲಿ ನಮ್ಮ ಇಬ್ಬರು ನಾಯಕರ ನಿಧನದಿಂದ ಎರಡು ವಿಧಾನಸಭಾ ಕ್ಷೇತ್ರಗಳು ತೆರವಾಗಿದ್ದವು.
ಈ ಎರಡು ಕ್ಷೇತ್ರಗಳ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿ ಹಳ್ಳಿಗೆ ಭೇಟಿ ನೀಡಿ ಹಗಲಿರುಳು ಶ್ರಮಿಸಿದ್ದಾರೆ. ಅವರಿಗೂ ನಾನು ಪಕ್ಷ ಹಾಗೂ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ” ಎಂದರು.
“ನಮ್ಮ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನ ಬಹಳ ಸಂತೋಷದಿಂದ ತಮ್ಮ ಮನೆಗೆ ಬರ ಮಾಡಿಕೊಂಡಿದ್ದಾರೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳಿಂದ ಪ್ರಯೋಜನ ಪಡೆದಿರುವ ಜನ ಚುನಾವಣೆ ಪ್ರಚಾರದ ವೇಳೆ ನಮ್ಮ ಕಾರ್ಯಕರ್ತರನ್ನು ಗೌರವದಿಂದ ನೋಡುತ್ತಿದ್ದಾರೆ. ಈ ಗ್ಯಾರಂಟಿ ಸರ್ಕಾರದ ಕೈ ಬಿಡುವುದಿಲ್ಲ, ಮತ್ತಷ್ಟು ಶಕ್ತಿ ತುಂಬುತ್ತೇವೆ. 2028ಕ್ಕೂ ನಿಮಗೆ ಬೆಂಬಲ ನೀಡುತ್ತೇವೆ ಎಂಬ ಸಂದೇಶ ನೀಡಿದ್ದಾರೆ” ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿ ನಾವು ಕಳೆದ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದೆವು. ಈ ಉಪಚುನಾವಣೆಯಲ್ಲಿ 22,332 ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಗ್ರಾಮೀಣ ಭಾಗದಲ್ಲಿ ಮತಯಾಚಿಸುವಾಗ ಪ್ರತಿ ಕುಟುಂಬದವರು ನಮ್ಮ ಕಾರ್ಯಕರ್ತರನ್ನು ಗೌರವಯುತದಿಂದ ಕಂಡು ಸರ್ಕಾರದ ಗ್ಯಾರಂಟಿ ಯೋಜನೆಗಳು ನಮ್ಮ ಬದುಕಿನಲ್ಲಿ ಬದಲಾವಣೆ ತಂದಿವೆ. ಹೀಗಾಗಿ ನಮ್ಮ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಎಂದು ಭರವಸೆ ನೀಡಿದ್ದರು. ಹೀಗಾಗಿ ಉಪಚುನಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸ ಮೂಡಿತ್ತು” ಎಂದು ತಿಳಿಸಿದರು.
ಪಕ್ಷದ ಕೆಲವು ನಾಯಕರು ಬೇರೆ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿಕೆ ನೀಡಲಾಗುತ್ತಿತ್ತು. ಈ ಮಧ್ಯೆ ನಿಮ್ಮ ಅಭ್ಯರ್ಥಿ ಗೆದ್ದಿರುವುದು ಹೇಗೆ ಎಂದು ಕೇಳಿದಾಗ, “ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಇದರ ಹೊರತಾಗಿ ಬೇರೆ ವಿಚಾರವನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ. ಇತರ ವಿಚಾರವಾಗಿ ತಿದ್ದುವುದು, ಮಾರ್ಗದರ್ಶನ ನೀಡುವ ಕೆಲಸವನ್ನು ಪಕ್ಷದ ವ್ಯಾಪ್ತಿಯಲ್ಲಿ ಮಾಡುತ್ತೇವೆ” ಎಂದರು.
ದಾವಣಗೆರೆ ಫಲಿತಾಂಶದಲ್ಲಿ ಒಳ ಏಟು ಬಿದ್ದಿದೆ ಎಂದು ಅನಿಸುತ್ತದೆಯೇ ಎಂದು ಕೇಳಿದಾಗ, “1995ರಿಂದ ಶಾಮನೂರು ಶಿವಶಂಕರಪ್ಪ ಅವರು ಆ ಕ್ಷೇತ್ರ ಉಳಿಸಿಕೊಂಡು ಬಂದಿದ್ದರು. ಅಲ್ಪಸಂಖ್ಯಾತ ನಾಯಕರು ನಮಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಅವರಿಗೆ ಸ್ಥಾನಮಾನ ನೀಡಲು ಮೂರು ಬಾರಿ ವಿಧಾನ ಪರಿಷತ್ ಸ್ಥಾನ ನೀಡಿ ಗೌರವ ನೀಡಿದ್ದೇವೆ. ವ್ಯಕ್ತಿಗಳಲ್ಲಿ ಅಭಿಪ್ರಾಯ ಬೇರೆ ಇದ್ದರೂ ಪಕ್ಷದಲ್ಲಿ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದರು.
ಮತ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಪರಾಮರ್ಶೆ ಮಾಡುತ್ತೀರಾ ಎಂದು ಕೇಳಿದಾಗ, “ಈಗ ಆ ಚರ್ಚೆ ಬೇಡ ಸಮಯ ಬಂದಾಗ ನೋಡೋಣ” ಎಂದರು. ಕೇರಳದಲ್ಲಿ ಬಹುದೊಡ್ಡ ಅಂತರದಿಂದ ಯುಡಿಎಫ್ ಸರ್ಕಾರವನ್ನು ಜನ ಅಧಿಕಾರಕ್ಕೆ ತಂದಿದ್ದಾರೆ. ಎಲ್ ಡಿಎಫ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡರೂ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಸೋತಿದ್ದರೂ ಬಿಜೆಪಿ ಅಂಗಪಕ್ಷವನ್ನು ಜನ ಸೋಲಿಸಿದ್ದಾರೆ. ಆಮೂಲಕ ಕೋಮುವಾದಿ ಶಕ್ತಿಯನ್ನು ದೂರವಿಟ್ಟಿದ್ದಾರೆ. ಹೀಗಾಗಿ ಅಲ್ಲಿನ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.
ಕೆಪಿಸಿಸಿ ಅಧ್ಯಕ್ಷರಾಗಿ ಪಂಚರಾಜ್ಯ ಚುನಾವಣೆಯನ್ನು ಹೇಗೆ ವ್ಯಾಖ್ಯಾನ ಮಾಡುತ್ತೀರಿ ಎಂದು ಕೇಳಿದಾಗ, “ಜನರಿಗೆ ಭಾವನೆ ಮೇಲೆ ರಾಜಕಾರಣ ಮಾಡಬೇಕು. ಇನ್ನು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ವಿಶೇಷವಾಗಿ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ತಮಿಳುನಾಡಿನಲ್ಲಿ ದೊಡ್ಡಮಟ್ಟದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. 2.50 ಲಕ್ಷ ಕೇಂದ್ರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ನಿಯೋಜಿಸಿ 96 ಲಕ್ಷ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕಿ ಚುನಾವಣೆ ಮಾಡಿದ್ದಾರೆ” ಎಂದು ತಿಳಿಸಿದರು.