ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಥವಾ ಸಚಿವ ಸಂಪುಟ ಪುನಾರಚನೆ ಕುರಿತ ಗೊಂದಲವನ್ನು ನಿವಾರಿಸುವ ನಿರ್ಧಾರವನ್ನು ಇನ್ನಷ್ಟು ಮುಂದೂಡಲು ಸಾಧ್ಯವಿಲ್ಲ ಎಂಬ ಹಂತಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಂತಿದೆ. ಕೆಲವು ಸಚಿವರನ್ನು ಒಳಗೊಂಡಂತೆ ಅನೇಕ ಹಿರಿಯ ಕಾಂಗ್ರೆಸ್ ನಾಯಕರು, ಪಕ್ಷದ ಕೇಂದ್ರ ನಾಯಕತ್ವವು ಮೇ ಅಂತ್ಯದೊಳಗೆ ಈ ಅನಿಶ್ಚಿತತೆಗೆ ತೆರೆ ಎಳೆಯಲಿದೆ ಎಂದು ಹೇಳಲಾಗುತ್ತಿದೆ.
ಪಕ್ಷದ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಮುಂದಿನ ಕೆಲವು ದಿನಗಳಲ್ಲಿ ದೆಹಲಿಗೆ ಕರೆಯುವ ಸಾಧ್ಯತೆ ಇದ್ದು, ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ನಾಯಕತ್ವ ಬದಲಾವಣೆ ವಿಚಾರಕ್ಕೆ ಅಂತ್ಯ ಹಾಡುವ ಉದ್ದೇಶ ಇದೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಹೆಚ್ ಮುನಿಯಪ್ಪ, ಹೈಕಮಾಂಡ್ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸೂಚನೆ ನೀಡಿದರು. ಈ ತಿಂಗಳ ಅಂತ್ಯದೊಳಗೆ ನಿರ್ಧಾರ ಆಗುತ್ತದೆ. ಏನಾಗಬೇಕೋ ಅದು ಆಗುತ್ತದೆ. ಹೈಕಮಾಂಡ್ ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುತ್ತಾರೆ ಎಂದು ನಾಯಕತ್ವ ಬದಲಾವಣೆ ಅಥವಾ ಸಚಿವ ಸಂಪುಟ ಪುನಾರಚನೆ ನಡೆಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದರು.
ಸಿದ್ದರಾಮಯ್ಯ ಅವರ ಬೆಂಬಲಿಗರು, ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಕೇರಳದಲ್ಲಿ ಮೇಲ್ವರ್ಗ ಸಮುದಾಯಗಳ ನಾಯಕರು ಮುಖ್ಯಮಂತ್ರಿಗಳಾಗಿರುವ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗದ ನಾಯಕರಾಗಿರುವ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಕರ್ನಾಟಕದಲ್ಲಿ ತನ್ನ ರಾಜಕೀಯ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುವ ಸಾಧ್ಯತೆಯಲ್ಲಿ ಹೈಕಮಾಂಡ್ ಇಲ್ಲ ಎನ್ನುತ್ತಿದ್ದಾರೆ.
ಒಂದು ವೇಳೆ ನಾಯಕತ್ವ ಬದಲಾವಣೆ ಅನಿವಾರ್ಯವಾದರೆ, ದಲಿತ ನಾಯಕನಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ಬೆಂಬಲಿಗರು, ಹೈಕಮಾಂಡ್ ಸಿದ್ದರಾಮಯ್ಯರಿಗೆ ಸ್ಥಾನ ತ್ಯಜಿಸುವಂತೆ ಸೂಚಿಸಿದರೆ ಅಥವಾ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಿ ಸಚಿವ ಸಂಪುಟ ಪುನಾರಚನೆಗೆ ಅನುಮತಿ ನೀಡಿದರೆ, ಪರಮೇಶ್ವರ್ ಅವರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೇ 28 ಅಥವಾ 29ರಂದು ಮುಖ್ಯಮಂತ್ರಿ ದೆಹಲಿಗೆ ಭೇಟಿ ನೀಡಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದ್ದು, ಆಗ ಸ್ಪಷ್ಟತೆ ಹೊರಬರುವ ನಿರೀಕ್ಷೆಯಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಾಹುಲ್ ಗಾಂಧಿ ನನ್ನನ್ನು ದೆಹಲಿಗೆ ಕರೆಯುವುದಾಗಿ ಹೇಳಿದ್ದಾರೆ. ಕರೆಯುವಾಗ ನಾನು ಹೋಗುತ್ತೇನೆ ಎಂದರು.
ಮಾಜಿ ಸಚಿವ ಕೆ ಎನ್ ರಾಜಣ್ಣ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಾದರೆ ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು ಎಂದು ಹೇಳಿದ್ದ ಕುರಿತು ಕೇಳಿದ ಪ್ರಶ್ನೆಗೆ ಶಿವಕುಮಾರ್, ರಾಜಣ್ಣ ಸಿಎಂ ಬದಲಾಯಿಸಲಿದ್ದಾರೆಯೇ? ಸಿಎಂ ಮುಂದುವರಿಯಬೇಕು ಎಂದು ಹೇಳುವುದರಲ್ಲಿ ತಪ್ಪೇನಿಲ್ಲ. ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು ಎಂದರೆ ಈಗಿನ ಸಿಎಂ ರಾಜೀನಾಮೆ ಕೊಡಬೇಕು ಎಂದರ್ಥವೇ? ನಾನು ಯಾವಾಗಲಾದರೂ ಸಿಎಂ ಬದಲಾವಣೆ ಆಗಬೇಕು ಎಂದಿದ್ದೇನಾ ನಾನು ಎಂದಿಗೂ ಹೇಳಿಲ್ಲ ಎಂದರು.
2023ರಲ್ಲಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ತಾವು ಮಾಡಿದ ಶ್ರಮಕ್ಕೆ ಪ್ರತಿಫಲ ಬಯಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನೀವು ಮಾಧ್ಯಮದವರು ಕಥೆಗಳನ್ನು ಸೃಷ್ಟಿಸುತ್ತಿದ್ದೀರಿ. ನಾನು ಯಾರ ಬಳಿಯೂ ಕೂಲಿ ಕೇಳಿಲ್ಲ ಎಂದು ಹೇಳಿದರು.
ಸೋಮವಾರ ಇಂಧನ ಸಚಿವ ಕೆ ಜೆ ಜಾರ್ಜ್ ನಿವಾಸದಲ್ಲಿ ನಡೆದ ಮಧ್ಯಾಹ್ನದ ಊಟದ ಸಭೆಯಲ್ಲಿ ಖರ್ಗೆ ಮತ್ತು ಸಿದ್ದರಾಮಯ್ಯ ಭಾಗವಹಿಸಿದ್ದರು. ಆ ಸಭೆಯಲ್ಲಿ ರಾಜ್ಯ ರಾಜಕೀಯ ಹಾಗೂ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.