ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನಡೆಸಿದ ಇತ್ತೀಚಿನ ಸಭೆಯು ಕೇವಲ ಪಕ್ಷವನ್ನು ಬಲಪಡಿಸುವ ಮತ್ತು ರಾಜ್ಯದ ಆಡಳಿತ ಸುಧಾರಣೆಯ ಕುರಿತಾಗಿಯೇ ಹೊರತು, ಯಾವುದೇ ನಾಯಕತ್ವ ಬದಲಾವಣೆಯ ಬಗ್ಗೆ ಅಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಮತ್ತು ಅಧಿಕಾರ ಹಂಚಿಕೆ ಕುರಿತು ಎದ್ದಿರುವ ಎಲ್ಲ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ. ಅಲ್ಲದೆ, ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಆಹ್ವಾನಿಸಿದರೆ ಈ ತಿಂಗಳಾಂತ್ಯಕ್ಕೆ ದೆಹಲಿಗೂ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
ಕೇರಳದಲ್ಲಿ ಹೊಸ ಕಾಂಗ್ರೆಸ್ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ತಿರುವನಂತಪುರಂನಿಂದ ಬೆಂಗಳೂರಿಗೆ ಒಟ್ಟಿಗೆ ಮರಳಿದ್ದರು.
ಆ ಬಳಿಕ ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನಿವಾಸದಲ್ಲಿ ಈ ನಾಯಕರು ಅನೌಪಚಾರಿಕ ಸಭೆ ನಡೆಸಿದ್ದು, ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಊಹಾಪೋಹಗಳಿಗೆ ಕಾರಣವಾಗಿತ್ತು.
ಕಳೆದ ವರ್ಷದ ನವೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಿದಾಗಿನಿಂದ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ನಡೆಯುತ್ತಲೇ ಇದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, "ನೀವೆಲ್ಲರೂ ನಾಯಕತ್ವ ಬದಲಾವಣೆಯ ವಿಭಿನ್ನ ಕಥೆಗಳನ್ನು ಸೃಷ್ಟಿಸುತ್ತಿದ್ದೀರಿ. ಆದರೆ ನಾವು ರಾಜಕೀಯ, ಆಡಳಿತ ಮತ್ತು ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ಹೇಗೆ ಎಂಬುದರ ಬಗ್ಗೆ ಮಾತ್ರ ಚರ್ಚಿಸಿದ್ದೇವೆ" ಎಂದು ಹೇಳಿದ್ದಾರೆ.
ಇದೇ ವೇಳೆ ನಾಯಕತ್ವ ಬದಲಾವಣೆಯಾದರೆ ಗೃಹ ಸಚಿವ ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕು ಎಂಬ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರ ಹೇಳಿಕೆಯನ್ನು ನಿರಾಕರಿಸಿದ ಡಿಸಿಎಂ, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಬೇಕು ಎಂದು ರಾಜಣ್ಣ ಅವರೇ ಹೇಳಿದ್ದಾರೆ. ನಾನು ಎಲ್ಲೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಸಕರಿಂದ ಕೇಳಿಬರುತ್ತಿರುವ ಸಚಿವ ಸಂಪುಟ ವಿಸ್ತರಣೆಯ ಬೇಡಿಕೆಯ ಬಗ್ಗೆ ಮಾತನಾಡಿ, ಸಂಪುಟದಲ್ಲಿ ಸ್ಥಾನ ಬಯಸುವ ಆಕಾಂಕ್ಷಿಗಳು ಇರುವುದು ಸಹಜ, ಸಿಎಂ ಅವರೇ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ನಾನು ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುತ್ತಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ನಡೆಸುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಗಡುವಿನ ಬಗ್ಗೆಯೂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
ಪಾಲಿಕೆಯ ಚುನಾವಣೆ ಪ್ರಕ್ರಿಯೆಯನ್ನು ಆಗಸ್ಟ್ 31 ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠವು ಕರ್ನಾಟಕ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಈ ಹಿಂದೆ ಜೂನ್ 30 ರೊಳಗೆ ಚುನಾವಣೆ ನಡೆಸಲು ಕೋರ್ಟ್ ಸೂಚಿಸಿತ್ತಾದರೂ, ಜನಗಣತಿ ಕಾರ್ಯ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಿಂದಾಗಿ ಸಿಬ್ಬಂದಿ ಕೊರತೆಯಿದೆ ಎಂದು ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಕೋರ್ಟ್ ಆಗಸ್ಟ್ 31 ರವರೆಗೆ ಕಾಲಾವಕಾಶ ವಿಸ್ತರಿಸಿದ್ದು, ಇನ್ನು ಮುಂದೆ ಯಾವುದೇ ವಿಸ್ತರಣೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.