'Boss ಯಾರು ಬಾಸ್ ಅಂತ ನೆತನ್ಯಾಹುಗೆ ಚೆನ್ನಾಗಿ ಗೊತ್ತಿದೆ'; ಇಸ್ರೇಲ್ ಪ್ರಧಾನಿಗೆ ಟ್ರಂಪ್ ಖಡಕ್ ಸಂದೇಶ, ಆಪ್ತರಿಂದಲೂ 'ಬಿಬಿ' ವಿರುದ್ಧ ಅಸಮಾಧಾನ..!

ಇದೇ ವೇಳೆ ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿದ ಟ್ರಂಪ್, "ನೆತನ್ಯಾಹು ಅವರಿಗೆ ಯಾರು ಬಾಸ್ ಎಂಬುದು ಚೆನ್ನಾಗಿ ಗೊತ್ತು" ಎಂದು ಹೇಳುವ ಮೂಲಕ ಜಾಗತಿಕ ರಾಜಕಾರಣದಲ್ಲಿ ಅಮೆರಿಕದ ಪ್ರಾಬಲ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.
Donald Trump-Benjamin Netanyahu
ಇಸ್ರೇಲ್ ಪ್ರಧಾನಿ ನೇತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್Evan Vucci
Updated on

ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ತೀವ್ರ ಬಿರುಕು ಕಾಣಿಸಿಕೊಂಡಿದೆ.

ಶ್ವೇತಭವನದಲ್ಲಿ ಇಬ್ಬರ ಭೇಟಿಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಟ್ರಂಪ್ ಮತ್ತು ಅವರ ಸಲಹೆಗಾರರು ಇಸ್ರೇಲ್ ಪ್ರಧಾನಿ ವಿರುದ್ಧ ಗಂಭೀರ ಅಸಮಾಧಾನ ಹೊರಹಾಕಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ನೆತನ್ಯಾಹು ಅವರು ಶ್ವೇತಭವನದಲ್ಲಿ ತುರ್ತು ಸಭೆಗಾಗಿ ವಿನಂತಿಸಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.

ಇದೇ ವೇಳೆ ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿದ ಟ್ರಂಪ್, "ನೆತನ್ಯಾಹು ಅವರಿಗೆ ಯಾರು ಬಾಸ್ ಎಂಬುದು ಚೆನ್ನಾಗಿ ಗೊತ್ತು" ಎಂದು ಹೇಳುವ ಮೂಲಕ ಜಾಗತಿಕ ರಾಜಕಾರಣದಲ್ಲಿ ಅಮೆರಿಕದ ಪ್ರಾಬಲ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.

ಈ ಭೇಟಿ ನಡೆದರೆ, ಕಳೆದ ಫೆಬ್ರವರಿಯಲ್ಲಿ ವೈಟ್‌ಹೌಸ್‌ನ ಸಿಟ್ಯುಯೇಷನ್ ರೂಮ್‌ನಲ್ಲಿ ನಡೆದ ಸಭೆಯ ಬಳಿಕ ಟ್ರಂಪ್ ಮತ್ತು ನೆತನ್ಯಾಹು ಮುಖಾಮುಖಿಯಾಗಿ ಭೇಟಿಯಾಗುತ್ತಿರುವ ಮೊದಲ ಸಂದರ್ಭವಾಗಲಿದೆ. ಆ ಸಭೆಯಲ್ಲಿ ಇರಾನ್ ವಿರುದ್ಧ ಜಂಟಿ ಸೇನಾ ಕಾರ್ಯಾಚರಣೆ ನಡೆಸುವ ಪ್ರಸ್ತಾವನೆಯನ್ನು ನೆತನ್ಯಾಹು ಮುಂದಿಟ್ಟಿದ್ದರು ಎಂದು ವರದಿಗಳು ತಿಳಿಸಿವೆ. ನಂತರ ಈ ಬೆಳವಣಿಗೆಗಳು ಪೂರ್ಣ ಪ್ರಮಾಣದ ಸಂಘರ್ಷಕ್ಕೆ ಕಾರಣವಾಗಿದ್ದವು.

ಇದೀಗ ಮತ್ತೊಂದು ಸಭೆ ನಡೆಸುವ ಬಗ್ಗೆ ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದರೂ, ಭೇಟಿಯ ದಿನಾಂಕ ಇನ್ನೂ ಅಂತಿಮವಾಗಿಲ್ಲ. ಜುಲೈ 7 ಮತ್ತು 8ರಂದು ಟರ್ಕಿಯಲ್ಲಿ ನಡೆಯಲಿರುವ ನ್ಯಾಟೋ ಶೃಂಗಸಭೆಯಲ್ಲಿ ಟ್ರಂಪ್ ಭಾಗವಹಿಸುವ ಕಾರಣ ಮುಂದಿನ ವಾರವೇ ಭೇಟಿ ಸಾಧ್ಯತೆ ಕಡಿಮೆ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ, ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೆತನ್ಯಾಹು ಟ್ರಂಪ್ ಅವರಿಗೆ ದೂರವಾಣಿ ಮೂಲಕ ಶುಭಾಶಯ ಕೋರಿದ್ದರು. ಈ ವೇಳೆ ಅಮೆರಿಕ ಜಾಗತಿಕ ಸ್ವಾತಂತ್ರ್ಯದ ಭರವಸೆಯ ರಾಷ್ಟ್ರವಾಗಿದ್ದು, ಎರಡೂ ದೇಶಗಳ ನಡುವಿನ ಆಪ್ತ ಸಂಬಂಧವನ್ನು ಇಸ್ರೇಲ್ ಅತ್ಯಂತ ಮೌಲ್ಯಯುತವಾಗಿ ಪರಿಗಣಿಸುತ್ತದೆ ಎಂದು ನೆತನ್ಯಾಹು ಹೇಳಿದ್ದಾರೆ. ಜೊತೆಗೆ ಇಬ್ಬರೂ ಶೀಘ್ರದಲ್ಲೇ ಅಮೆರಿಕದಲ್ಲಿ ಭೇಟಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಪ್ರಕಟಿಸಿದೆ.

Donald Trump-Benjamin Netanyahu
Israel-Lebanon ಸಂಘರ್ಷಕ್ಕೆ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ ತ್ರಿಪಕ್ಷೀಯ ಒಪ್ಪಂದ, Hezbollah ಮಣಿಸುವವರೆಗೆ ಹಿಂದೆ ಸರಿಯಲ್ಲ ಎಂದ ನೆತನ್ಯಾಹು..!

ಆದರೆ, ಸಾರ್ವಜನಿಕವಾಗಿ ಸ್ನೇಹಪರ ಹೇಳಿಕೆಗಳು ಕೇಳಿಬರುತ್ತಿದ್ದರೂ, ಟ್ರಂಪ್ ಅವರ ಆಪ್ತ ಸಲಹೆಗಾರರಲ್ಲಿ ನೆತನ್ಯಾಹು ಕುರಿತು ಅಸಮಾಧಾನ ಹೆಚ್ಚುತ್ತಿದೆ ಎಂದು Axios ವರದಿ ಹೇಳಿದೆ.

ಟ್ರಂಪ್ ಅವರ ಆಪ್ತ ವಲಯದ ಅಧಿಕಾರಿಯೊಬ್ಬರ ಹೇಳಿಕೆಯಂತೆ, "ನೆತನ್ಯಾಹು ಎಲ್ಲ ವಿಷಯಗಳಲ್ಲೂ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಟ್ರಂಪ್ ಅವರ ಅನೇಕ ಆಪ್ತರು ನಂಬಿದ್ದಾರೆ" ಎಂದು ತಿಳಿದುಬಂದಿದೆ.

ಕಳೆದ ತಿಂಗಳು ಲೆಬನಾನ್‌ನಲ್ಲಿ ಇಸ್ರೇಲ್ ಸೇನಾ ಕಾರ್ಯಾಚರಣೆ ತೀವ್ರಗೊಂಡ ಬಳಿಕ ಟ್ರಂಪ್, ನೆತನ್ಯಾಹು ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲೂ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆ ವೇಳೆ ನೆತನ್ಯಾಹು ಅವರನ್ನು "ಹುಚ್ಚ" ಎಂದು ಕರೆದಿದ್ದಲ್ಲದೆ, ತಮ್ಮ ಬಗ್ಗೆ ಕೃತಜ್ಞತೆಯೂ ಇಲ್ಲ ಎಂದು ಟೀಕಿಸಿದ್ದರು ಎಂದು ವರದಿ ತಿಳಿಸಿದೆ.

ಇತ್ತೀಚಿನ ತಿಂಗಳುಗಳಲ್ಲಿ ಇರಾನ್, ಲೆಬನಾನ್ ಹಾಗೂ ಮಧ್ಯಪ್ರಾಚ್ಯದ ಭದ್ರತಾ ವಿಚಾರಗಳಲ್ಲಿ ಟ್ರಂಪ್ ಮತ್ತು ನೆತನ್ಯಾಹು ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ತಿಂಗಳು ಟ್ರಂಪ್, ಇರಾನ್‌ನೊಂದಿಗೆ ಯುದ್ಧ ವಿರಾಮವನ್ನು ಮುಂದುವರಿಸುವ ಹಾಗೂ ಹೊಸ ಅಣು ಒಪ್ಪಂದದ ಮಾತುಕತೆ ಆರಂಭಿಸುವ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದರು. ಆದರೆ ಈ ನಿರ್ಧಾರಕ್ಕೆ ಇಸ್ರೇಲ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರಲಿಲ್ಲ ಎಂದು ವರದಿಯಾಗಿದೆ.

ಇದರ ಜೊತೆಗೆ, ದಕ್ಷಿಣ ಲೆಬನಾನ್‌ನಿಂದ ಇಸ್ರೇಲ್ ಸೇನೆಯನ್ನು ಹಂತ ಹಂತವಾಗಿ ಹಿಂದಕ್ಕೆ ಕರೆಸಿಕೊಳ್ಳುವ ಹಾಗೂ ಸೇನಾ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವಂತೆ ಟ್ರಂಪ್, ನೆತನ್ಯಾಹು ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ.

ಇದೇ ವರ್ಷ ಅಕ್ಟೋಬರ್‌ನಲ್ಲಿ ಇಸ್ರೇಲ್‌ನಲ್ಲಿ ಚುನಾವಣೆ ನಡೆಯಲಿದ್ದು, ಇತ್ತೀಚಿನ ಸಮೀಕ್ಷೆಗಳಲ್ಲಿ ನೆತನ್ಯಾಹು ತಮ್ಮ ಪ್ರಮುಖ ರಾಜಕೀಯ ಎದುರಾಳಿಗಳಿಗಿಂತ ಹಿನ್ನಡೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಟ್ರಂಪ್ ಅವರನ್ನು ವೈಟ್‌ಹೌಸ್‌ನಲ್ಲಿ ಭೇಟಿ ಮಾಡುವ ಅವಕಾಶ ನೆತನ್ಯಾಹು ಅವರಿಗೆ ರಾಜಕೀಯವಾಗಿ ಮಹತ್ವದ ಬೆಳವಣಿಗೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com