ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ 
ರಾಜಕೀಯ

ಕನ್ನಡಿಗರ ಹಿತ ಕಾಯ್ದದ್ದು ಮೋದಿ ಸರ್ಕಾರ, ಕನ್ನಡಿಗರ ಹೆಸರಿನಲ್ಲಿ ರಾಜಕೀಯ ಮಾಡಿದ್ದು, ಮಾಡುತ್ತಿರುವುದು ಕಾಂಗ್ರೆಸ್: ಪ್ರಿಯಾಂಕ್ ಖರ್ಗೆ ವಿರುದ್ಧ BJP ವಾಗ್ದಾಳಿ

32 ದೇಶಗಳ ಅತ್ಯುನ್ನತ ಗೌರವಗಳನ್ನು ಪಡೆದ ವಿಶ್ವನಾಯಕ ಆದರಣೀಯ ಪ್ರಧಾನಿ ಮೋದಿ ಅವರ ಬಗ್ಗೆ ನಿಮ್ಮ ಅಸಹನೆ ಅರ್ಥವಾಗುತ್ತದೆ. ಇದು ಆಕಾಶ ನೋಡಿ ಮೇಲೆ ಉಗಿದಂತೆ.

ಬೆಂಗಳೂರು: ರಾಜ್ಯದ ಜಿಡಿಪಿಗೆ ಶೇ 40ರಷ್ಟು ಕೊಡುಗೆ ನೀಡುವ ಬೆಂಗಳೂರಿನ ರಸ್ತೆಗಳು, ನೀರು, ಒಳಚರಂಡಿ, ಸಾರಿಗೆ ಯಾರ ಆಡಳಿತದಲ್ಲಿ ಹದಗೆಟ್ಟಿವೆ? ಯಾಕೆ? ಬೆಂಗಳೂರಿನಿಂದ ಅಷ್ಟು ಪಡೆಯುತ್ತಿರುವ ನಿಮ್ಮ ಸರ್ಕಾರ ಬೆಂಗಳೂರಿಗೆ ಎಷ್ಟು ತಿರುಗಿ ನೀಡಿದೆ? ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಶನಿವಾರ ಪ್ರಶ್ನೆ ಮಾಡಿದೆ.

ತೈಲ ಬೆಲೆ ಏರಿಕೆ ವಿರುದ್ಧ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸಚಿವ ಪ್ರಿಯಾಂಕ್ ಖರ್ಗೆಯರಿಗೆ ಬಿಜೆಪಿ ತಿರುಗೇಟು ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಬೆಲೆ ಏರಿಕೆಯ ಬಗ್ಗೆ ನಿಮ್ಮ ಹೇಳಿಕೆಯಲ್ಲಿ ಕೂಡ ನಿಮ್ಮ ಜನಪರ ಕಾಳಜಿ ಬದಲಿಗೆ ನಿಮ್ಮ ಕೊಳಕು ರಾಜಕೀಯ ಮನಸ್ಥಿತಿಯೇ ಎದ್ದು ಕಾಣುತ್ತಿದೆ. ಜಾಗತಿಕ ಸವಾಲುಗಳು, ಸೂಕ್ಷ್ಮ ಸನ್ನಿವೇಶಗಳು ಗೊತ್ತಿದ್ದರೂ, ದೇಶದ ಬಗ್ಗೆ ಯೋಚಿಸದೆ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್ ವರ್ತನೆ ಹೊಸದೇನಲ್ಲ ಎಂದು ಟೀಕಿಸಿದ್ದಾರೆ.

ತೈಲ ಬೆಲೆ ಏರಿಕೆ ಮಾಡುತ್ತಿರುವುದು ತೈಲ ಕಂಪನಿಗಳು, ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆ, ಅನ್ಯದೇಶಗಳಲ್ಲಿ ತೈಲಬೆಲೆಗಳ ಏರಿಕೆ ಪ್ರಮಾಣ ಇವೆಲ್ಲವೂ ಗೊತ್ತಿದ್ದರೂ ಜನರನ್ನು ದಾರಿ ತಪ್ಪಿಸಲು ನಿಮ್ಮ ರಾಜಕೀಯ ವ್ಯರ್ಥ ಪ್ರಯತ್ನವೇ ನಿಮ್ಮ ಮುತ್ಸದ್ದಿತನವೆಂದು ಪ್ರದರ್ಶಿಸಬೇಡಿ. ಜನರಿಗೆ ಸತ್ಯ ಗೊತ್ತಿದೆ.

ಪೆಟ್ರೋಲ್ ಬೆಲೆಯಲ್ಲಿ ಶೇ 32% VAT ಯಾರ ಸರ್ಕಾರ ವಸೂಲಿ ಮಾಡುತ್ತಿದೆ? ಹೇಗೂ ನಿಮ್ಮ ಮುಖ್ಯಮಂತ್ರಿಗಳ ಪ್ರಕಾರ ರಾಜ್ಯದ ಹಣಕಾಸು ಪರಿಸ್ಥಿತಿ ದೇಶಕ್ಕಿಂತಲೂ ಉತ್ತಮವಾಗಿದೆಯಲ್ಲವೇ? ಕೇಂದ್ರದ ಮೇಲೆ ಆರೋಪ ಮಾಡುವ ಮುನ್ನ ನಿಮ್ಮ ಸರ್ಕಾರ ವಾಟ್ ಯಾಕೆ ಕಡಿಮೆ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ, ದೇಶದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಬಡವರಿಗಾಗಿ 5 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ದಶಕಗಳಿಂದ 'ಗರೀಬಿ ಹಠಾವೋ' ಎಂದು ಜನರನ್ನು ವಂಚಿಸಿಕೊಂಡೇ ಬಂದ ಕಾಂಗ್ರೆಸ್ಸಿಗರ ಸ್ಲೋಗನ್ ಸಾಧನೆಯನ್ನು ಜನರು ಚೆನ್ನಾಗಿ ಅರ್ಥಮಾಡಿಕೊಂಡದ್ದಕ್ಕೆ ಇವತ್ತು ಕಾಂಗ್ರೆಸ್ ಪರಿಸ್ಥಿತಿ ದೇಶದಲ್ಲಿ ಇಷ್ಟು ಹೀನಾಯ ಹಂತದಲ್ಲಿದೆ.

ಈ ಬಗ್ಗೆ ಮಾತನಾಡುವ ಕಿಂಚಿತ್ ನೈತಿಕತೆ ಕೂಡ ನಿಮ್ಮಲ್ಲಿ ಉಳಿದಿಲ್ಲ. ಅಷ್ಟಕ್ಕೂ ಮಾನ್ಯ ಖರ್ಗೆಯವರೇ, ದೇಶದ ಚಿಂತೆ ಮಾಡುವ ಮುನ್ನ, ಮೊದಲು, ನಿಮ್ಮನ್ನು ನಂಬಿ ಅಧಿಕಾರ ನೀಡುತ್ತಲೇ ಬಂದಿರುವ ನಿಮ್ಮ ಜಿಲ್ಲೆಯನ್ನು, ಎಲ್ಲಾ ಮಾನದಂಡಗಳಲ್ಲೂ ಕೊನೆಯಲ್ಲಿರುವ ನಿಮ್ಮ ಜಿಲ್ಲೆಯತ್ತ, ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳತ್ತ ಸ್ವಲ್ಪವಾದರೂ ಗಮನಹರಿಸಿ. ಆಮೇಲೆ ಇನ್ನೊಬ್ಬರ ಬಗ್ಗೆ ಮಾತನಾಡುವಿರಂತೆ.

32 ದೇಶಗಳ ಅತ್ಯುನ್ನತ ಗೌರವಗಳನ್ನು ಪಡೆದ ವಿಶ್ವನಾಯಕ ಆದರಣೀಯ ಪ್ರಧಾನಿ ಮೋದಿ ಅವರ ಬಗ್ಗೆ ನಿಮ್ಮ ಅಸಹನೆ ಅರ್ಥವಾಗುತ್ತದೆ. ಇದು ಆಕಾಶ ನೋಡಿ ಮೇಲೆ ಉಗಿದಂತೆ ಎಂದು ಕಿಡಿಕಾರಿದ್ದಾರೆ.

ಭಾರತ ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವಾಗ, ಪ್ರಾದೇಶಿಕ ವಾದವನ್ನು ಮಂಡಿಸಿದ್ದೀರಿ! ಕನ್ನಡಿಗರ ಕೊಡುಗೆ ಬಗ್ಗೆ ನಾವೂ ಹೆಮ್ಮೆಪಡುತ್ತೇವೆ. ಆದರೆ ನಿಮ್ಮ ಕುತರ್ಕದ ಬಗ್ಗೆ ನಮ್ಮ ಆಕ್ಷೇಪವಿದೆ. ರಾಜ್ಯದ ಜಿಡಿಪಿಗೆ ಶೇ 40ರಷ್ಟು ಕೊಡುಗೆ ನೀಡುವ ಬೆಂಗಳೂರಿನ ರಸ್ತೆಗಳು, ನೀರು, ಒಳಚರಂಡಿ, ಸಾರಿಗೆ ಯಾರ ಆಡಳಿತದಲ್ಲಿ ಹದಗೆಟ್ಟಿವೆ? ಯಾಕೆ? ಬೆಂಗಳೂರಿನಿಂದ ಅಷ್ಟು ಪಡೆಯುತ್ತಿರುವ ನಿಮ್ಮ ಸರ್ಕಾರ ಬೆಂಗಳೂರಿಗೆ ಎಷ್ಟು ತಿರುಗಿ ನೀಡಿದೆ?

ನಿಮ್ಮ UPA ಕಾಲದಲ್ಲಿ (2004-2014) ಕರ್ನಾಟಕಕ್ಕೆ ನಿಮ್ಮ ಸರ್ಕಾರ ನೀಡಿದ್ದು 81,795 ಕೋಟಿ ರೂ. NDA ಕಾಲ (2014-2024) ರಾಜ್ಯಕ್ಕೆ ನೀಡಿದ್ದು 2,85,452 ಕೋಟಿ ರೂ.350% ಹೆಚ್ಚಳ ಮಾಡಿದ್ದು ಯಾವ ಸರ್ಕಾರ? ಕನ್ನಡಿಗರ ಹಿತ ಕಾಯ್ದದ್ದು ಮೋದಿ ಸರ್ಕಾರ, ಕನ್ನಡಿಗರ ಹೆಸರಿನಲ್ಲಿ ರಾಜಕೀಯ ಮಾಡಿದ್ದು, ಮಾಡುತ್ತಿರುವುದು ಕಾಂಗ್ರೆಸ್.

ದೇಶದ ಸವಾಲಿನ ಸೂಕ್ಷ್ಮ ಸಂದರ್ಭಗಳಲ್ಲಿ ಇಡೀ ದೇಶ ಒಂದಾಗಿ, ಒಗ್ಗಟ್ಟಿನಿಂದ ಮುನ್ನಡೆಯಬೇಕು ಎನ್ನುವುದನ್ನು ಎಂದಿಗೂ ಅರ್ಥಮಾಡಿಕೊಳ್ಳದ ನಿಮ್ಮ ಪಕ್ಷದ ಬಗ್ಗೆ ಹೆಚ್ಚು ಏನು ಹೇಳುವುದು ಸಾಧ್ಯ? ಕಾಂಗ್ರೆಸ್ ಎಂದಿಗೂ ತನ್ನ ಕೊಳಕು ರಾಜಕೀಯ ಬಿಟ್ಟು ಮೇಲೆ ಎದ್ದು ಬಂದಿಲ್ಲ. ಯಾವ ವಾಸ್ತವವನ್ನೂ ಪರಿಗಣಿಸದೆ ಕೇವಲ ನಿಮ್ಮ ರಾಜಕೀಯದ ಮೂಗಿನ ನೇರಕ್ಕೆ ಮಾತನಾಡುವ ಕಾಂಗ್ರೆಸ್ಸಿಗರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆಂದು ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್

ದೀದಿಗೆ ಮತ್ತೊಂದು ಶಾಕ್; ಮಮತಾ ನೇತೃತ್ವದ TMC ಬಣದ 12 ಬ್ಯಾಂಕ್ ಖಾತೆ ಫ್ರೀಜ್ ಮಾಡಿದ ಪೋಲೀಸರು!

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ

ಮೊದಲ ಮಹಿಳಾ ಟೆಸ್ಟ್ ಪಂದ್ಯ: ಲಾರ್ಡ್ಸ್ ನಲ್ಲಿ ಅಪರೂಪದ ದಾಖಲೆ ಬರೆದ ಸ್ಮೃತಿ ಮಂಧಾನಾ! ಆಕರ್ಷಕ ಅರ್ಧಶತಕ