ಬೆಂಗಳೂರು: ಬಿಜೆಪಿ ನಾಯಕ ಅಖಂಡ ಶ್ರೀನಿವಾಸ್ ಮೂರ್ತಿ ಮತ್ತೆ ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದು, ಇದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.
ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಇತ್ತೀಚೆಗೆ ಶ್ರೀನಿವಾಸ್ ಮೂರ್ತಿ ನಿವಾಸಕ್ಕೆ ಭೇಟಿ ನೀಡಿ ಪಕ್ಷಕ್ಕೆ ಮರಳುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶ್ರೀನಿವಾಸ್ ಮೂರ್ತಿ, ಕುಮಾರಸ್ವಾಮಿ ಭೇಟಿ ನೀಡಿದ್ದು ಹಾಗೂ ಜೆಡಿಎಸ್ ಸೇರುವಂತೆ ಆಹ್ವಾನಿಸಿರುವುದು ನಿಜ ಎಂದು ದೃಢಪಡಿಸಿದ್ದಾರೆ. ಆದರೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. “ಮುಂದಿನ ತಿಂಗಳು ನಿರ್ಧಾರ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
2013ರಲ್ಲಿ ಜೆಡಿಎಸ್ ಮೂಲಕ ರಾಜಕೀಯ ಪ್ರವೇಶಿಸಿದ್ದ ಶ್ರೀನಿವಾಸ್ ಮೂರ್ತಿ, ನಂತರ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಪುಲಕೇಶಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ಪ್ರಸನ್ನ ಕುಮಾರ್ ವಿರುದ್ಧ 81,626 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು.
ಪುಲಕೇಶಿನಗರ ಕ್ಷೇತ್ರದಲ್ಲಿ ಸುಮಾರು 2.36 ಲಕ್ಷ ಮತದಾರರಿದ್ದು, ಅದರಲ್ಲಿ ಸುಮಾರು 85 ಸಾವಿರ ಮುಸ್ಲಿಂ ಮತದಾರರು ಮತ್ತು 65 ಸಾವಿರ ಎಸ್‌ಸಿ/ಎಸ್‌ಟಿ ಮತದಾರರು ಇದ್ದಾರೆ.
2018ರ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಬೆಂಬಲ ಶ್ರೀನಿವಾಸ್ ಮೂರ್ತಿ ಗೆಲುವಿಗೆ ಪ್ರಮುಖ ಕಾರಣವಾಗಿತ್ತು ಎಂದು ಹೇಳಲಾಗುತ್ತದೆ.
ಮೂಲಗಳ ಪ್ರಕಾರ, ಮುಸ್ಲಿಂ ಸಮುದಾಯದ ಬೆಂಬಲವನ್ನು ಮತ್ತೆ ಗಳಿಸುವ ಉದ್ದೇಶದಿಂದಲೇ ಜೆಡಿಎಸ್ ಶ್ರೀನಿವಾಸ್ ಮೂರ್ತಿಯನ್ನು ಪಕ್ಷಕ್ಕೆ ಕರೆತರಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.
2023ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಮುಸ್ಲಿಂ ಸಮುದಾಯದ ಒಂದು ಭಾಗದಲ್ಲಿ ಅಸಮಾಧಾನ ಉಂಟಾಗಿದೆ ಎಂಬ ಚರ್ಚೆ ಇದೆ.
ಇತ್ತೀಚಿನ ದಾವಣಗೆರೆ ದಕ್ಷಿಣ ಉಪಚುನಾವಣೆಯ ಬಳಿಕ ಈ ಅಸಮಾಧಾನ ಇನ್ನಷ್ಟು ಹೆಚ್ಚಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಈ ಹಿನ್ನೆಲೆ 2028ರ ವಿಧಾನಸಭೆ ಚುನಾವಣೆಗೂ ಮುನ್ನ ಮುಸ್ಲಿಂ ಮತಗಳನ್ನು ವಿಭಜನೆಯಾಗದಂತೆ ತಡೆಯಲು ಮತ್ತು ತಮ್ಮ ಹಳೆಯ ಬೆಂಬಲವನ್ನು ಮರಳಿ ಪಡೆಯಲು ಜೆಡಿಎಸ್ ತಂತ್ರ ರೂಪಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಶ್ರೀನಿವಾಸ್ ಮೂರ್ತಿ ರಾಜಕೀಯ ಪಯಣ ಹಲವು ತಿರುವುಗಳನ್ನು ಕಂಡಿದೆ. 2016ರ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ಅವರನ್ನು ಅಮಾನತು ಮಾಡಿತ್ತು. ಬಳಿಕ 2018ರಲ್ಲಿ ಅವರು ಕಾಂಗ್ರೆಸ್ ಸೇರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅವರಿಗೆ ಆಪ್ತ ಸಂಬಂಧವಿದೆ ಎನ್ನಲಾಗುತ್ತದೆ.
ಆದರೆ 2023ರ ವಿಧಾನಸಭೆ ಚುನಾವಣೆಗೆ ಮುನ್ನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗಳ ಹಿನ್ನೆಲೆ ಪುಲಕೇಶಿನಗರ ಟಿಕೆಟ್ ನಿರಾಕರಿಸಿದ ಬಳಿಕ ಅವರು ಕಾಂಗ್ರೆಸ್ ತೊರೆದಿದ್ದರು. 2020ರ ಆಗಸ್ಟ್ 11ರಂದು ಅವರ ಅಳಿಯನ ಸಾಮಾಜಿಕ ಜಾಲತಾಣ ಪೋಸ್ಟ್ ಹಿನ್ನೆಲೆ ಗಲಭೆ ಉಂಟಾಗಿ, ಕಾವಲಬೈರಸಂದ್ರದಲ್ಲಿರುವ ಶ್ರೀನಿವಾಸ್ ಮೂರ್ತಿ ಮನೆಗೂ ಬೆಂಕಿ ಹಚ್ಚಲಾಗಿತ್ತು. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು.
ನಂತರ 2024ರ ಲೋಕಸಭೆ ಚುನಾವಣೆಗೂ ಮುನ್ನ ಶ್ರೀನಿವಾಸ್ ಮೂರ್ತಿ ಬಿಜೆಪಿ ಸೇರಿ ಎನ್‌ಡಿಎ ಮೈತ್ರಿ ಪರ ಪ್ರಚಾರ ನಡೆಸಿದ್ದರು. ಇದೀಗ ಮತ್ತೆ ಜೆಡಿಎಸ್ ಸೇರ್ಪಡೆ ಸಾಧ್ಯತೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.