ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಮೇ 26ರಂದು ನಡೆಯುವ ಸಭೆಗೆ ಕಾಂಗ್ರೆಸ್ ಹೈಕಮಾಂಡ್ ತಮ್ಮನ್ನು ದೆಹಲಿಗೆ ಆಹ್ವಾನಿಸಿದೆ ಎಂದು ತಿಳಿಸಿದ್ದಾರೆ. ಆದರೆ ಸಭೆಯ ಅಜೆಂಡಾ ಏನು ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ನನ್ನನ್ನು ದೆಹಲಿಗೆ ಆಹ್ವಾನಿಸಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ಸಭೆ ಇದೆ. ವಿಷಯ ಏನು ಎಂಬುದು ನನಗೆ ಗೊತ್ತಿಲ್ಲ. ಆದರೆ ಆಹ್ವಾನ ಬಂದಿದೆ. ನಿನ್ನೆ ರಾತ್ರಿ ಕೆ ಸಿ ವೇಣುಗೋಪಾಲ್ ಅವರು ಕರೆ ಮಾಡಿ ದಿನಾಂಕ ಹಾಗೂ ಸಭೆಯ ಬಗ್ಗೆ ಮಾಹಿತಿ ನೀಡಿದರು ಎಂದು ಸಿಎಂ ಸಿದ್ದರಾಮಯ್ಯ ಇಂದು ಸುದ್ದಿಗಾರರಿಗೆ ತಿಳಿಸಿದರು.
ಮೇ 20ರಂದು ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆ ಕುರಿತು ಊಹಾಪೋಹಗಳು ಜೋರಾಗಿವೆ.
ಇದರ ಮಧ್ಯೆ, ಉಪ ಮುಖ್ಯಮಂತ್ರಿ ಡಿ ಕೆ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಹೈಕಮಾಂಡ್ ದೆಹಲಿಗೆ ಕರೆದರೆ ನಾನು ಹೋಗುತ್ತೇನೆ ಎಂದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ವೇಳೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಕುರಿತ ಒಪ್ಪಂದವಾಗಿತ್ತು ಎಂಬ ವರದಿಗಳ ಹಿನ್ನೆಲೆಯಲ್ಲಿ, ಡಿ ಕೆ ಶಿವಕುಮಾರ್ ಬೆಂಬಲಿಗರು ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇನ್ನೊಂದೆಡೆ, ಸಿದ್ದರಾಮಯ್ಯ ಅವರು ತಾವು ಪೂರ್ಣ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸುವುದಾಗಿ ಈಗಾಗಲೇ ಹೇಳಿದ್ದಾರೆ. ಜೊತೆಗೆ, ಹೈಕಮಾಂಡ್ ನಿರ್ಧಾರವನ್ನು ಪಾಲಿಸುವುದಾಗಿ ಮತ್ತು ಪಕ್ಷ ಕರೆದರೆ ದೆಹಲಿಗೆ ತೆರಳಿ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಡಿ ಕೆ ಶಿವಕುಮಾರ್ ಕೂಡ ಕಾಂಗ್ರೆಸ್ ನಾಯಕತ್ವದ ನಿರ್ಧಾರವನ್ನು ಗೌರವಿಸುವುದಾಗಿ ನಿರಂತರವಾಗಿ ಹೇಳುತ್ತಿದ್ದು, ಮುಖ್ಯಮಂತ್ರಿ ಬದಲಾವಣೆಯ ಕುರಿತು ಸಮಯವೇ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆಗೆ ಒಲವು ತೋರಿದ್ದರೆ, ಡಿ ಕೆ ಶಿವಕುಮಾರ್ ಮೊದಲು ನಾಯಕತ್ವ ಬದಲಾವಣೆ ಕುರಿತು ಪಕ್ಷ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಬಯಸುತ್ತಿದ್ದಾರೆ.
ಹಲವು ಪಕ್ಷದ ಒಳಗಿನ ಮೂಲಗಳ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ಸಚಿವ ಸಂಪುಟ ಪುನಾರಚನೆಗೆ ಅನುಮೋದನೆ ನೀಡಿದರೆ, ಸಿದ್ದರಾಮಯ್ಯ ಪೂರ್ಣ ಐದು ವರ್ಷದ ಅವಧಿ ಮುಂದುವರಿಯಲಿದ್ದಾರೆ ಎಂಬ ಸ್ಪಷ್ಟ ಸಂದೇಶವಾಗಲಿದೆ. ಇದರಿಂದ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಸಾಧ್ಯತೆ ಕ್ಷೀಣವಾಗಬಹುದು.
ಮುಖ್ಯಮಂತ್ರಿಯನ್ನು ಒಳಗೊಂಡಂತೆ ಕರ್ನಾಟಕದಲ್ಲಿ ಒಟ್ಟು 34 ಸಚಿವ ಸ್ಥಾನಗಳಿಗೆ ಅನುಮತಿ ಇದೆ. ಪ್ರಸ್ತುತ ಮೂರು ಸಚಿವ ಸ್ಥಾನಗಳು ಖಾಲಿ ಇವೆ.
ಬಿ ನಾಗೇಂದ್ರ ಅವರು ಕರ್ನಾಟಕ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು. ಕೆ ಎನ್ ರಾಜಣ್ಣ ಅವರನ್ನು ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು. ಇತ್ತೀಚೆಗೆ ಸಚಿವ ಡಿ ಸುಧಾಕರ್ ಅವರ ನಿಧನದಿಂದ ಮೂರನೇ ಸ್ಥಾನವೂ ಖಾಲಿಯಾಗಿದೆ.