ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಗೊಂದಲಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ತೆರೆ ಎಳೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.
ಈ ಕುರಿತು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಸುಳಿವು ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ನಿನ್ನೆ ದೆಹಲಿಯ ಇಂದಿರಾ ಭವನದಲ್ಲಿ ನಡೆದ ಹೈವೋಲ್ಟೇಜ್ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಚರ್ಚಿಸಿದ್ದು, ಅಧಿಕಾರ ಹಂಚಿಕೆ ಸೂತ್ರದಂತೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ನಾಳೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದು, ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಇಂದು ಎಕ್ಸ್ ನಲ್ಲಿ ಮಹತ್ವದ ಪೋಸ್ಟ್ ಹಂಚಿಕೊಂಡಿದ್ದು, ಇದು ರಾಜೀನಾಮೆ ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ಕೆಲವರು ಈ ಪೋಸ್ಟ್‌ನ್ನು ರಾಜೀನಾಮೆಯ ಸುಳಿವು ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಇದನ್ನು ತಮ್ಮ ಸರ್ಕಾರದ ಮೂರು ವರ್ಷದ ಸಾಧನೆಗಳ ನೆನಪಿನ ರೂಪದಲ್ಲಿ ನೋಡುತ್ತಿದ್ದಾರೆ.
ರಾಜ್ಯ ಸರ್ಕಾರದ 3 ವರ್ಷದ ಸಾಧನೆ ನೆನೆದ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪೋಸ್ಟ್ ನಲ್ಲಿ, ರಾಜ್ಯ ಸರ್ಕಾರ ಮಾಡಿರುವ ಪ್ರತಿಯೊಂದು ಶ್ರೇಯಸ್ಸನ್ನೂ ಕನ್ನಡಿಗರಿಗೆ ಅರ್ಪಿಸುತ್ತೇವೆ ಎಂದು ಹೇಳಿದ್ದಾರೆ. ಅಂದರೆ, ಸರ್ಕಾರ ಮಾಡಿದ ಕೆಲಸದ ಕ್ರೆಡಿಟ್ ಜನರದ್ದೇ, ನಾವು ಕೇವಲ ಕರ್ತವ್ಯ ನಿರ್ವಹಿಸಿದ್ದೇವೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ಜೊತೆಗೆ, ಕೊಟ್ಟ ಮಾತಿಗೆ ಬದ್ದರಾಗಿ, ನುಡಿದಂತೆ ನಡೆದೆವು, ನಮ್ಮಲ್ಲಿ ಆ ಬದ್ಧತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಚುನಾವಣೆಯ ವೇಳೆಯಲ್ಲಿ ನೀಡಿದ ಭರವಸೆಗಳನ್ನು ಗ್ಯಾರಂಟಿ ಯೋಜನೆಗಳ ರೂಪದಲ್ಲಿ ಜಾರಿಗೆ ತಂದಿದ್ದೇವೆ ಎಂಬುದನ್ನು ಅವರು ನೆನಪಿಸಿದ್ದಾರೆ.
ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸಿರುವ ಈ ಸಾರ್ಥಕ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ.
ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದ ಹೆಮ್ಮೆ ನಮಗಿದೆ. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಪ್ರತಿ ಮನೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ.
ವಿದ್ಯುತ್ ಬಿಲ್ ಹೊರೆಯಿಂದ ಕಂಗೆಟ್ಟಿದ್ದ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿ, ನೆಮ್ಮದಿಯ ಬದುಕು ಕಲ್ಪಿಸುವ ಬದ್ಧತೆಯೊಂದಿಗೆ ನಾವು ಜಾರಿಗೆ ತಂದ ಗೃಹಜ್ಯೋತಿ ಯೋಜನೆ ಇಂದು ನಾಡಿನ ಪ್ರತಿ ಮನೆಯನ್ನು ಬೆಳಗುತ್ತಿದೆ.
ಈ ಯೋಜನೆಯಡಿ ರಾಜ್ಯದ ಒಟ್ಟು 1.64 ಕೋಟಿ ಕುಟುಂಬಗಳಿಗೆ ಮಾಸಿಕ ಗರಿಷ್ಠ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈವರೆಗೆ ಯೋಜನೆಗಾಗಿ ₹26,115 ಕೋಟಿ ಅನುದಾನವನ್ನು ವ್ಯಯಿಸಲಾಗಿದೆ ಎಂದು ಸಿಎಂ ಬರೆದುಕೊಂಡಿದ್ದಾರೆ.