ಸಿದ್ದರಾಮಯ್ಯ, ರಣದೀಪ್ ಸುರ್ಜೇವಾಲಾ, ಡಿಕೆ ಶಿವಕುಮಾರ್ 
ರಾಜಕೀಯ

ಚುನಾವಣೆಗೆ 17 ತಿಂಗಳು ಬಾಕಿ ಇರುವಾಗಲೇ ಕೈ ಪಾಳಯದಲ್ಲಿ ಮೇಜರ್ ಸರ್ಜರಿ: ಕರ್ನಾಟಕ ಉಸ್ತುವಾರಿ ಸ್ಥಾನದಿಂದ ಸುರ್ಜೇವಾಲಾ ನಿರ್ಗಮನ? ಶೀಘ್ರದಲ್ಲೇ ಹೊಸ ಸಾರಥಿ..?

ನವೆಂಬರ್ 1ರಂದು ರಾಜ್ಯೋತ್ಸವದ ಶುಭಾಶಯ ಕೋರಿದ್ದನ್ನು ಹೊರತುಪಡಿಸಿದರೆ, ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುರ್ಜೇವಾಲಾ ಇತ್ತೀಚೆಗೆ ಹೆಚ್ಚು ಸಾರ್ವಜನಿಕ ಹೇಳಿಕೆಗಳನ್ನು ನೀಡಿಲ್ಲ.

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯ ರಾಜಕಾರಣದಿಂದ ನಿರ್ಗಮಿಸಲಿದ್ದಾರೆ ಎಂಬ ಚರ್ಚೆಗಳು ಕೈ ಪಾಳಯದಲ್ಲಿ ಜೋರಾಗಿ ಕೇಳಿಬರುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಆರು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ಊಹಾಪೋಹಗಳು ತೀವ್ರಗೊಂಡಿವೆ.

ಎರಡು ತಿಂಗಳ ಹಿಂದೆ ಗುಜರಾತ್ ರಾಜ್ಯದ ಹೆಚ್ಚುವರಿ ಉಸ್ತುವಾರಿಯನ್ನೂ ಅವರಿಗೆ ವಹಿಸಿರುವುದು ಹಾಗೂ ಇತ್ತೀಚಿನ ತಿಂಗಳುಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳದಿರುವುದು ಈ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ನವೆಂಬರ್ 1ರಂದು ರಾಜ್ಯೋತ್ಸವದ ಶುಭಾಶಯ ಕೋರಿದ್ದನ್ನು ಹೊರತುಪಡಿಸಿದರೆ, ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುರ್ಜೇವಾಲಾ ಇತ್ತೀಚೆಗೆ ಹೆಚ್ಚು ಸಾರ್ವಜನಿಕ ಹೇಳಿಕೆಗಳನ್ನು ನೀಡಿಲ್ಲ. ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಬಹುತೇಕ ಅವರ ತವರು ರಾಜ್ಯ ಹರಿಯಾಣ ಮತ್ತು ಗುಜರಾತ್‌ಗೆ ಸಂಬಂಧಿಸಿದ ವಿಚಾರಗಳ ಸುತ್ತಲೇ ಇವೆ.

ಆದರೆ, ಕಾಂಗ್ರೆಸ್ ಹೈಕಮಾಂಡ್ ಈವರೆಗೆ ಅವರ ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಮಾಡುವ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಆದರೂ, ಅವರ ಗಮನ ಬೇರೆ ರಾಜ್ಯಗಳತ್ತ ಹರಿದಿರುವುದು ಕರ್ನಾಟಕದ ರಾಜಕೀಯ ವ್ಯವಹಾರಗಳಲ್ಲಿ ಅವರ ಪಾತ್ರ ಮುಂದುವರಿಯಲಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮತ್ತು ಕಾಂಗ್ರೆಸ್ ಪ್ರತಿಪಕ್ಷದಲ್ಲಿದ್ದ ಸಂದರ್ಭದಲ್ಲಿ ಸುರ್ಜೇವಾಲಾ ರಾಜ್ಯದ ಉಸ್ತುವಾರಿ ವಹಿಸಿಕೊಂಡಿದ್ದರು.

ಮೂರು ವರ್ಷಗಳ ಬಳಿಕ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿತು. ಇದರೊಂದಿಗೆ ಕರ್ನಾಟಕ ಪಕ್ಷದ ಪ್ರಮುಖ ರಾಜಕೀಯ ನೆಲೆಗಳಲ್ಲೊಂದಾಯಿತು.

ರಾಜ್ಯ ಕಾಂಗ್ರೆಸ್‌ನಲ್ಲಿದ್ದ ಬಣ ರಾಜಕೀಯ ಮತ್ತು ಭಿನ್ನಾಭಿಪ್ರಾಯಗಳನ್ನು ನಿಭಾಯಿಸಿ, ಪ್ರತಿಸ್ಪರ್ಧಿ ನಾಯಕರನ್ನು ಒಂದೇ ವೇದಿಕೆಗೆ ತರುವಲ್ಲಿ ಸುರ್ಜೇವಾಲಾ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿದೆ.

ರಾಜ್ಯದ ಪ್ರಮುಖ ನಾಯಕರ ನಡುವಿನ ಭಿನ್ನಮತಗಳು ಆಗಾಗ್ಗೆ ಬಹಿರಂಗವಾಗುತ್ತಿದ್ದ ಸಂದರ್ಭದಲ್ಲಿ, ಸಂಘಟನಾ ಸಭೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ನಾಯಕರನ್ನು ಒಗ್ಗೂಡಿಸಲು ಅವರು ಪ್ರಯತ್ನಿಸಿದ್ದರು. ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ ಎಂಬ ಸಂದೇಶವನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.

ವಿಶೇಷವಾಗಿ 2023ರ ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯ ಕಾಂಗ್ರೆಸ್‌ನ ವಿವಿಧ ಬಣಗಳ ನಡುವೆ ಕಾರ್ಯಸಾಧ್ಯವಾದ ಸಂಬಂಧವನ್ನು ಕಾಪಾಡಿಕೊಂಡು ಹೋಗಿದ್ದು ಅವರ ಪ್ರಮುಖ ಕೊಡುಗೆ ಎಂದು ಪರಿಗಣಿಸಲಾಗಿದೆ.

ಆದರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆರು ವರ್ಷ ಪೂರ್ಣಗೊಳಿಸಿರುವುದು ಪಕ್ಷದಲ್ಲಿ ಜವಾಬ್ದಾರಿಗಳ ಮರುಹಂಚಿಕೆ ನಡೆಯಲಿದೆಯೇ ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.

ಗುಜರಾತ್‌ನ ಹೆಚ್ಚುವರಿ ಉಸ್ತುವಾರಿ ನೀಡಿರುವುದು ಅವರ ಮೇಲಿನ ಹೈಕಮಾಂಡ್‌ನ ವಿಶ್ವಾಸವನ್ನು ಸೂಚಿಸುತ್ತಿವೆ. ಅದೇ ವೇಳೆ, ಪ್ರಮುಖ ರಾಜ್ಯಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಜವಾಬ್ದಾರಿಗಳನ್ನು ಮರುಹಂಚಿಕೆ ಮಾಡುವ ಪ್ರಕ್ರಿಯೆಯ ಭಾಗವೂ ಆಗಿರಬಹುದು ಎಂಬ ಚರ್ಚೆ ನಡೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸುರ್ಜೇವಾಲಾ ಅವರ ಸಾರ್ವಜನಿಕ ಹೇಳಿಕೆಗಳಲ್ಲಿ ಕರ್ನಾಟಕದ ಪ್ರಸ್ತಾಪ ಕಡಿಮೆಯಾಗಿರುವುದನ್ನು ಪಕ್ಷದ ನಾಯಕರು ಮತ್ತು ಕಾರ್ಯಕರ್ತರೂ ಗಮನಿಸಿದ್ದಾರೆ. ಆದರೆ, ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಈವರೆಗೂ ಮೌನವಾಗಿದೆ.

ಬದಲಾವಣೆಯಿಂದ ಮುಂಬರುವ ಸವಾಲುಗಳು...

ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಕೆ.ಸಿ. ವೇಣುಗೋಪಾಲ್ ಅವರಿಂದ ಉಸ್ತುವಾರಿ ವಹಿಸಿಕೊಂಡಿದ್ದ ಸುರ್ಜೇವಾಲಾ, 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಸುಮಾರು 17 ತಿಂಗಳು ಬಾಕಿ ಇದ್ದು, ಆ ಬಳಿಕ ಲೋಕಸಭಾ ಚುನಾವಣೆಯೂ ಎದುರಾಗಲಿದೆ.

ಒಂದು ವೇಳೆ ಹೈಕಮಾಂಡ್ ಹೊಸ ಉಸ್ತುವಾರಿಯನ್ನು ನೇಮಿಸಿದರೆ, ಮುಂದಿನ ಚುನಾವಣೆಗಳಿಗೆ ರಾಜ್ಯ ಘಟಕವನ್ನು ಸಜ್ಜುಗೊಳಿಸುವ ದೊಡ್ಡ ಜವಾಬ್ದಾರಿ ಹೊಸಬರ ಮೇಲಿರಲಿದೆ. ಸದ್ಯಕ್ಕೆ ವರಿಷ್ಠರು ಈ ಬಗ್ಗೆ ಮೌನವಹಿಸಿದ್ದು, ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು; ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?

ಮನರೇಗಾ ಯೋಜನೆಯ ₹13.57 ಲಕ್ಷ ಗುಳುಂ; ಕೆಲಸ ಮಾಡದೆ ಸರ್ಕಾರಿ ಹಣ ಲೂಟಿ, ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ!

ಊಟಿಯಲ್ಲಿ ಮೈಕೊರೆಯುವ ಚಳಿ; 5.9 ಡಿಗ್ರಿಗೆ ಕುಸಿದ ಕನಿಷ್ಠ ತಾಪಮಾನ, ಹಿಮದ ಹೊದಿಕೆಯಲ್ಲಿ ಗಿರಿಧಾಮ

Gold rate: ಭಾರಿ ಕುಸಿತದ ಬಳಿಕ ಚಿನ್ನದ ದರ ಮತ್ತೆ ಏರಿಕೆ; ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ? ಬೆಳ್ಳಿ ಬೆಲೆಯಲ್ಲೂ ಬದಲಾವಣೆ, ಇಲ್ಲಿದೆ ಸಂಪೂರ್ಣ ಪಟ್ಟಿ!

ಮತದಾರರ ಹೆಸರು ಅಳಿಸಲು ಫಾರ್ಮ್-7 ದುರ್ಬಳಕೆ ಆರೋಪ; ಬಿಜೆಪಿ ಬೂತ್ ಏಜೆಂಟರಿಗೆ ಹೈಕೋರ್ಟ್ ರಿಲೀಫ್, FIRಗೆ ತಡೆ