ಬೆಂಗಳೂರು: ಸಮಗ್ರ ಚುನಾವಣಾ ಸುಧಾರಣೆ ಜಾರಿಯಾಗದೆ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಚುನಾವಣೆಗಳಲ್ಲಿ ಹಣ, ಜಾತಿ ಮತ್ತು ಮದ್ಯದ ಪ್ರಭಾವ ಹೆಚ್ಚಾಗಿರುವುದರಿಂದ ಪ್ರಾಮಾಣಿಕರು, ಬಡವರು, ಬುದ್ಧಿವಂತರು ಹಾಗೂ ಸಮಾಜ ಸೇವೆಯ ಉದ್ದೇಶ ಹೊಂದಿರುವವರು ರಾಜಕೀಯಕ್ಕೆ ಪ್ರವೇಶಿಸುವುದು ಕಷ್ಟವಾಗಿದೆ ಎಂದು ಹೇಳಿದರು.
ಚುನಾವಣಾ ಸುಧಾರಣೆ ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದ ವಿಚಾರವಲ್ಲ. ಇದು ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳು, ಸಾರ್ವಜನಿಕರು, ಹೋರಾಟಗಾರರು ಹಾಗೂ ಸಮಾಜ ಸೇವಕರು ಮುಕ್ತ ಮನಸ್ಸಿನಿಂದ ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಕರೆ ನೀಡಿದರು.
ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೇ ಚುನಾವಣೆ ನಡೆಸುತ್ತೇವೆ ಎಂಬ ರಾಜಕಾರಣಿಗಳ ಹೇಳಿಕೆಗಳನ್ನು ಜನರು ಈಗ ನಂಬುತ್ತಿಲ್ಲ. ಪ್ರಸ್ತುತ ಇರುವ ಚುನಾವಣಾ ವ್ಯವಸ್ಥೆಯೇ ರಾಜಕಾರಣಿಗಳನ್ನು ಭ್ರಷ್ಟಾಚಾರದತ್ತ ತಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.
1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಜಾರ್ಜ್ ಫರ್ನಾಂಡಿಸ್ ಅವರು ತಮಗೆ ರೂ.10,000 ನೀಡಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಗ್ರಾಮಗಳಿಗೆ ಪ್ರಚಾರಕ್ಕೆ ತೆರಳಿದಾಗ ಜನರೇ ರೂ.200 ಅಥವಾ ರೂ.500ರಷ್ಟು ಹಣವನ್ನು ನೀಡುತ್ತಿದ್ದರು. ಆ ಚುನಾವಣೆಯನ್ನು ಸುಮಾರು ರೂ.63,000 ವೆಚ್ಚದಲ್ಲಿ ಪೂರ್ಣಗೊಳಿಸಿದ್ದೆ ಎಂದು ಅವರು ಹೇಳಿದರು.
ಕಳೆದ ಹಲವು ವರ್ಷಗಳಲ್ಲಿ ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿದೆ. ಈ ಹಿಂದೆ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಹಲವು ಪ್ರಯತ್ನಗಳು ನಡೆದಿವೆ. ಚುನಾವಣೆಗಳ ವೆಚ್ಚವನ್ನು ಸರ್ಕಾರವೇ ಭರಿಸುವಂತಹ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಹೇಳಿದರು.