ಬೆಂಗಳೂರು: ಅರ್ಹ ಮತದಾರರ ಹೆಸರುಗಳನ್ನು ಕಾನೂನುಬಾಹಿರವಾಗಿ ಮತದಾರರ ಪಟ್ಟಿಯಿಂದ ಕೈಬಿಡಲು ಸಂಚು ರೂಪಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಈಗ ಸಿಕ್ಕಿಬೀಳುವ ಭೀತಿಯಿಂದ ರಾಜಪಾಲರ ಬಳಿ ಓಡಿದ್ದಾರೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಮೈತ್ರಿಕೂಟದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
ಬಿಜೆಪಿ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಆರ್. ಅಶೋಕ್ ಸೇರಿದಂತೆ ಇತರರು ತಮ್ಮ ಪಕ್ಷದ ಕಾರ್ಯಕರ್ತರಿಗೆ ನಮೂನೆ-7 ಅರ್ಜಿಗಳನ್ನು ನೀಡಿರುವುದನ್ನು ಬಹಿರಂಗವಾಗಿ ಘೋಷಿಸಲಿ ಎಂದು ಸವಾಲು ಹಾಕಿದರು.
ನನಗೂ ಸಾಕಷ್ಟು ಸ್ನೇಹಿತರಿದ್ದಾರೆ. ಕಾರ್ಯಾಚರಣೆ ಹೇಗೆ ನಡೆದಿದೆ ಎಂಬುದನ್ನು ಅವರು ನನಗೆ ತಿಳಿಸಿದ್ದಾರೆ. ಬಡ ಕಾರ್ಯಕರ್ತರಿಗೆ 2,000, 5,000, 10,000 ಅರ್ಜಿಗಳನ್ನು ನೀಡಿದ್ದಾರೆ. ನಾನು ಚುನಾವಣಾ ಆಯೋಗಕ್ಕೆ ತೆರಳಿದ ಬಳಿಕ ರಾತ್ರೋರಾತ್ರಿ ಅವರು ಬಿಎಲ್‌ಒಗಳ ಬಳಿಗೆ ತೆರಳಿ, ಅರ್ಜಿಗಳನ್ನು ಕೇಳಿದ್ದಾರೆ. ಕೆಲವರು ಅರ್ಜಿಗಳನ್ನು ಕಸಿದುಕೊಂಡಿದ್ದಾರೆ. ಬಿಎಲ್‌ಒಗಳಿಗೆ ಬೆದರಿಕೆ ಹಾಕಿ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ವಾಪಸ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಿಎಲ್‌ಒಗಳು ವರದಿ ಮಾಡಿದ್ದಾರೆ.
ಯಾರಾದರೂ ತಮ್ಮ ಮತವನ್ನು ಕಸಿದುಕೊಳ್ಳಲಾಗಿದೆ ಎಂದು ಭಾವಿಸಿದರೆ ದೂರು ದಾಖಲಿಸಬಹುದು. ಪೂರ್ವಭಾವಿಯಾಗಿ ಮುದ್ರಿಸಲಾದ ನಮೂನೆ-7 ಅರ್ಜಿಗಳನ್ನು ಯಾರಿಗೆ ನೀಡಲಾಗಿದೆ ಎಂಬ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಹೇಳಿದರು.
ಮಂಗಳವಾರ ಎನ್‌ಡಿಎ ನಾಯಕರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಸ್‌ಐಆರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಯಾವುದೇ ವ್ಯಕ್ತಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯನ್ನು ಮುಖ್ಯಮಂತ್ರಿ ಶಿವಕುಮಾರ್ ಸಮರ್ಥಿಸಿಕೊಂಡರು.
ನಮ್ಮ ಬೇಡಿಕೆ ಸರಳ ಮತ್ತು ನ್ಯಾಯಸಮ್ಮತವಾಗಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇರಬೇಕು. ಅರ್ಹತೆ ಹೊಂದಿರುವ ಯಾವುದೇ ಮತದಾರನ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿ, ಎದ್ದಿರುವ ಗಂಭೀರ ಕಳವಳಗಳಿಗೆ ಹೊಣೆಗಾರಿಕೆ ವಹಿಸಬೇಕು.
ಪ್ರತಿಯೊಬ್ಬ ಮತದಾರ, ಪ್ರತಿಯೊಂದು ಮತ ಹಾಗೂ ನಮ್ಮ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಸಮಗ್ರತೆಯನ್ನು ಚುನಾವಣಾ ಆಯೋಗ ಕಾಪಾಡಬೇಕು ಎಂಬ ಬೇಡಿಕೆಯೊಂದಿಗೆ ನಾವು ಒಗ್ಗಟ್ಟಾಗಿ ಮುಂದುವರಿಯುತ್ತೇವೆ ಎಂದು ತಿಳಿಸಿದ್ದಾರೆ.