ಶಿವಮೊಗ್ಗ: ಬಿಜೆಪಿಯವರು ನಿಜವಾದ ದೇಶಭಕ್ತರಾಗಿದ್ದರೆ, ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಎಂದು ಒಪ್ಪಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸವಾಲು ಹಾಕಿದ್ದಾರೆ.
ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಹಾತ್ಮ ಗಾಂಧೀಜಿ ಹತ್ಯೆಗೆ ಕಾರಣವಾದ ಸಂಘಟನೆಗಳು ದೇಶದ ಮೊದಲ ಭಯೋತ್ಪಾದಕ ಸಂಘಟನೆಗಳಾಗಿದ್ದು, ಹತ್ಯೆ ನಡೆಸಿದ ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟ, ತ್ರಿವರ್ಣ ಧ್ವಜ ಮತ್ತು ದೇಶದ ಬಗ್ಗೆ ನಿಜವಾದ ಗೌರವ ಹೊಂದಿರುವ ದೇಶಭಕ್ತರು ಬಿಜೆಪಿಯಲ್ಲಿದ್ದರೆ ಈ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಸವಾಲು ಹಾಕಿದರು.
ಸ್ಟಿಂಗ್ ಆಪರೇಷನ್ ವಿವಾದ ಕುರಿತು ಮಾತನಾಡಿದ ಅವರು, ಕುಟುಕು ಕಾರ್ಯಾಚರಣೆಗಳು ಇತ್ತೀಚೆಗೆ ಆರಂಭವಾದ ವಿದ್ಯಮಾನವಲ್ಲ. 1970ರ ದಶಕದಿಂದಲೇ ಇಂತಹ ಕಾರ್ಯಾಚರಣೆಗಳು ನಡೆಯುತ್ತಿದ್ದು, ಅಂದಿನ ಸಚಿವ ಆರ್.ಡಿ. ಕಿತ್ತೂರು ಪ್ರಕರಣದಿಂದ ಆರಂಭಿಸಿ ಹಲವು ವ್ಯಕ್ತಿಗಳು ರಾಜಕೀಯ ದ್ವೇಷದ ಕಾರಣದಿಂದ ಇಂತಹ ಕಾರ್ಯಾಚರಣೆಗಳಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಪ್ರಧಾನಿ ಮೋದಿ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಪರೋಕ್ಷವಾಗಿ ಟೀಕಿಸಿದ ಅವರು, ಆಧುನಿಕ ಭಾರತದಲ್ಲಿ ಇಂತಹ ಕಾರ್ಯಾಚರಣೆಗಳ ‘ಜನಕ’ ಗುಜರಾತ್ನ ಪ್ರಮುಖ ಬಿಜೆಪಿ ನಾಯಕ ಎಂದು ಹೇಳಿದರು.
ಆಗ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಗುಜರಾತ್ನ ಪಕ್ಷದ ಉಸ್ತುವಾರಿಯಾಗಿದ್ದ ಸಂಜಯ್ ಜೋಶಿ ವಿರುದ್ಧ ಕುಟುಕು ಕಾರ್ಯಾಚರಣೆ ರೂಪಿಸಿ, ಅವರ ರಾಜಕೀಯ ಜೀವನ ಅಂತ್ಯಗೊಳ್ಳಲು ಈ ನಾಯಕ ಕಾರಣರಾಗಿದ್ದರು ಎಂದು ಆರೋಪಿಸಿದರು.
ಕಾಂಗ್ರೆಸ್ನೊಳಗಿನ ಸ್ಲೀಪರ್ ಸೆಲ್ಗಳಿಂದಲೇ ಕುಟುಕು ಕಾರ್ಯಾಚರಣೆ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ನಲ್ಲಿ ಅಂತಹ ಸ್ಲೀಪರ್ ಸೆಲ್ಗಳಿಲ್ಲ. ಇಂತಹ ಗುಂಪುಗಳೇನಾದರೂ ಇದ್ದರೆ ಅವು ಬಿಜೆಪಿ ಮತ್ತು ಆರ್ಎಸ್ಎಸ್ನಲ್ಲಿವೆ ಎಂದು ಆರೋಪಿಸಿದರು.
ಕಾಂಗ್ರೆಸ್ನ ಯಾರೇ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೂ, ಅವರ ಹುದ್ದೆ ಅಥವಾ ಪ್ರಭಾವವನ್ನು ಲೆಕ್ಕಿಸದೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೃಪಾ ಆಳ್ವಾ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಈ ಸಂಬಂಧ ಕೆಪಿಸಿಸಿಯ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಅವರಿಗೆ ಈಗಾಗಲೇ ಸೂಚನೆ ನೀಡಿದ್ದು, ಸಂಬಂಧಪಟ್ಟವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ತಿಳಿಸಿರುವುದಾಗಿ ಹೇಳಿದರು.