ಬೆಂಗಳೂರು: ಸ್ಟಿಂಗ್ ಆಪರೇಷನ್ ವಿವಾದದ ಕುರಿತು ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಈಗಾಗಲೇ ಚರ್ಚಿಸಿದ್ದು, ನವೆಂಬರ್ 1ರಂದು ದೆಹಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಾಧ್ಯವಾದರೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈ ವಿಚಾರವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಆ ಕುಟುಕು ಕಾರ್ಯಾಚರಣೆಯಲ್ಲಿ(Sting operation) ಏನಿದೆ? ಅದೊಂದು ಸುಳ್ಳು ಮತ್ತು ಕಟ್ಟುಕಥೆ ಎಂದು ಹೇಳಿದರು.
ತಮ್ಮ ದೂರಿನ ಸಂಬಂಧ ಪೊಲೀಸರು ನಡೆಸುತ್ತಿರುವ ತನಿಖೆಯಿಂದ ತೃಪ್ತರಾಗಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತನಿಖೆ ಪ್ರಗತಿಯಲ್ಲಿದೆ. ಇಲ್ಲಿ ತೃಪ್ತಿ ಅಥವಾ ಅತೃಪ್ತಿಯ ಪ್ರಶ್ನೆಯೇ ಇಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂಬುದು ನನ್ನ ಒತ್ತಾಯ ಎಂದು ತಿಳಿಸಿದರು.
ತನಿಖೆಯ ವಿಳಂಬಕ್ಕೆ ಅಸಮಾಧಾನ
ಇದೇ ಸಂದರ್ಭದಲ್ಲಿ ಅವರು ಕೇಂದ್ರ ಅಪರಾಧ ವಿಭಾಗದ (CCB) ಅಧಿಕಾರಿಗಳ ತನಿಖಾ ವಿಧಾನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ ಪ್ರಕರಣದ ಪ್ರಗತಿ ವರದಿ ನೀಡಲು ತಮ್ಮನ್ನು ಭೇಟಿ ಮಾಡಿದ ಸಿಸಿಬಿ ಅಧಿಕಾರಿಗಳ ತಂಡವನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ತನಿಖೆಯ ಮಂದಗತಿಯ ಬಗ್ಗೆ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ, ಏನ್ ತನಿಖೆ ಮಾಡ್ತಿದ್ದೀರಾ ನೀವು? ಬೆಳಗ್ಗೆ ಯಾರನ್ನೋ ಬಂಧಿಸ್ತೀರಾ, ಸಂಜೆ ವೇಳೆಗೆ ಅವರಿಗೆ ಜಾಮೀನು ಸಿಗುತ್ತೆ. ಅದ್ಯಾವ ರೀತಿ ನೀವು ತನಿಖೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿ ಅಸಮಾಧಾನ ಹೊರಹಾಕಿದ್ದಾರೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.