ಬೆಂಗಳೂರು: ಜನಾರ್ದನ ರೆಡ್ಡಿ ಅಂತಾರಾಷ್ಟ್ರೀಯ ಕಳ್ಳರ ಸಂಘದ ಅಧ್ಯಕ್ಷ ಮತ್ತು ಶ್ರೀರಾಮುಲು ಉಪಾಧ್ಯಕ್ಷ. ಇಂತಹ ಲೂಟಿಕೋರರಿಂದ ಪಾಠ ಕಲಿಯಬೇಕಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಗುರುವಾರ ಬಿಜೆಪಿ ನಾಯಕ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಪ್ರದೀಪ್ ಈಶ್ವರ್, ಕರ್ನಾಟಕ ಜನತೆಗೆ ಒಂದು ವಿಷಯ ಹೇಳ್ತೀನಿ. ಕರ್ನಾಟಕ ಅಂತಾರಾಷ್ಟ್ರೀಯ ಕಳ್ಳರ ಸಂಘದ ಅಧ್ಯಕ್ಷ ಜನಾರ್ದನ ರೆಡ್ಡಿ, ಉಪಾಧ್ಯಕ್ಷ ಶ್ರೀರಾಮುಲು ಎಂದರು.
ಕರ್ನಾಟಕವನ್ನು ಲೂಟಿ ಮಾಡಿದ್ದೇ ಈ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು. ಇವರಿಂದ ನಾನು ಪಾಠ ಕಲಿಯಬೇಕಿಲ್ಲ. ಬಿಜೆಪಿ ಅವಧಿಯಲ್ಲಿ ಕೋವಿಡ್ ಹಗರಣ, ಬೋವಿ ನಿಗಮ ಹಗರಣ, ನೀಟ್ ಹಗರಣ, ದೇವರಾಜ್ ಟ್ರಕ್ ಟರ್ಮಿನಲ್ ಹಗರಣ, ಕಿಯೋನಿಕ್ಸ್ ಹಗರಣ, ಪಿಎಸ್ಐ ಹಗರಣ, ಪರಶುರಾಮ್ ಥೀಮ್ ಪಾರ್ಕ್ ಹಗರಣ, ಬಿಟ್ ಕಾಯಿನ್, ಕೆಕೆಆರ್ ಡಿ ಅಕ್ರಮ. ಹೀಗೆ ನೂರಾರು ಕೋಟಿ ಹಗರಣ ಬಿಜೆಪಿ ಅವಧಿಯಲ್ಲಿ ನಡೆದಿವೆ ಎಂದು ಆರೋಪಿಸಿದರು.
ಯಡಿಯೂರಪ್ಪ, ಬೊಮ್ಮಾಯಿ, ಶ್ರೀರಾಮುಲು, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಸುಧಾಕರ್, ಜನಾರ್ದನ ರೆಡ್ಡಿ, ಅಶೋಕ್ ಸೇರಿ ಅನೇಕರ ಕಾಲದಲ್ಲಿ ಹಗರಣ ಆಗಿದೆ. ಇದಕ್ಕೆ ಉತ್ತರ ಕೊಡಲಿ. ಈ ಲೂಟಿಕೋರರಿಂದ ನಾವು ಪಾಠ ಕಲಿಯೋ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಶಾಸಕ ಆಕ್ರೋಶ ವ್ಯಕ್ತಪಡಿಸಿದರು.