ಬೆಂಗಳೂರು: ನಗರದ ಪ್ರತಿಷ್ಠಿತ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸಕ್ಕಾಗಿ ಕಾಂಗ್ರೆಸ್‌ನ ಹಾಲಿ ಹಾಗೂ ಮಾಜಿ ಸಚಿವರ ನಡುವೆ ತೀವ್ರ ತಿಕ್ಕಾಟ ಶುರುವಾಗಿದೆ.
ಕ್ರೆಸೆಂಟ್ ರಸ್ತೆಯ ನಂ. 2 ಸರ್ಕಾರಿ ಬಂಗಲೆಯನ್ನು ತಮ್ಮ ವಶಕ್ಕೆ ಪಡೆಯಲು ಸಾರಿಗೆ ಸಚಿವ ಬೈರತಿ ಸುರೇಶ್ ಹಾಗೂ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ನಡುವೆ ತೆರೆಮರೆಯ ಜಟಾಪಟಿ ಆರಂಭವಾಗಿದೆ.
ಸಚಿವರಾಗಿದ್ದ ಅವಧಿಯಿಂದಲೂ ಡಾ. ಎಚ್.ಸಿ. ಮಹದೇವಪ್ಪ ಇದೇ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ನಿಯಮಾವಳಿಗಳ ಪ್ರಕಾರ ಸರ್ಕಾರಿ ನಿವಾಸವನ್ನು ತೆರವುಗೊಳಿಸಲು ಅವರಿಗೆ ಇನ್ನೂ ಸಮಯಾವಕಾಶವಿದೆ. ಆದರೆ ಅಷ್ಟರಲ್ಲೇ ಈ ನಿವಾಸವನ್ನು ತಮ್ಮ ಸುಪರ್ದಿಗೆ ಪಡೆಯಲು ಮುಂದಾಗಿರುವ ಸಚಿವ ಬೈರತಿ ಸುರೇಶ್ ಮಹದೇವಪ್ಪ ಅವರು ಬಂಗಲೆಯಲ್ಲೇ ಇರುವಾಗಲೇ ಏಕಾಏಕಿ ನವೀಕರಣ ಕಾಮಗಾರಿ ಶುರುಮಾಡಿಸಿದ್ದಾರೆ.
ಮಹದೇವಪ್ಪ ಅವರು ಮನೆಯಲ್ಲಿ ಇರುವಾಗಲೇ ಬಂಗಲೆಯ ಆವರಣಕ್ಕೆ ಜೆಸಿಬಿ ತರಿಸಿ ಅಲ್ಲಿದ್ದ ಮೀಟಿಂಗ್ ಹಾಲ್ ನೆಲಸಮ ಮಾಡಿಸಲಾಗಿದೆ. ಅಷ್ಟೇ ಅಲ್ಲದೆ ಬೈರತಿ ಸುರೇಶ್ ಅವರ ಸೂಚನೆಯ ಮೇರೆಗೆ ಬಂಗಲೆಗೆ ಪೇಂಟಿಂಗ್ ಹಾಗೂ ನವೀಕರಣ ಕಾರ್ಯಗಳು ಭರದಿಂದ ಸಾಗುತ್ತಿವೆ.
ಸಚಿವರಾಗಿದ್ದ ಅವಧಿಯಿಂದಲೂ ಡಾ. ಎಚ್.ಸಿ. ಮಹದೇವಪ್ಪ ಇದೇ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ನಿಯಮಾವಳಿಗಳ ಪ್ರಕಾರ ಸರ್ಕಾರಿ ನಿವಾಸವನ್ನು ತೆರವುಗೊಳಿಸಲು ಅವರಿಗೆ ಇನ್ನೂ ಸಮಯಾವಕಾಶವಿದೆ.
ಮಹದೇವಪ್ಪ ಅವರು ಮನೆಯಲ್ಲಿದ್ದರೂ ಬೈರತಿ ಸುರೇಶ್ ಅವರನ್ನು ಭೇಟಿ ಮಾಡಿ ಮತನಾಡಿಸಿಲ್ಲ ಎಂಬ ಆರೋಪ ಸಹ ಕೇಳಿ ಬಂದಿದೆ. ಇನ್ನೊಂದೆಡೆ ನಿವಾಸವನ್ನು ಎರಡೇ ದಿನಗಳಲ್ಲಿ ಖಾಲಿ ಮಾಡುವಂತೆ ಸಚಿವ ಬೈರತಿ ಸುರೇಶ್ ಹಾಗೂ ಅವರ ಬೆಂಬಲಿಗರು ಮಹದೇವಪ್ಪ ಅವರ ಮನೆ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ನನಗೆ ಬಾಡಿಗೆ ಮನೆ ಸಿಕ್ಕಿದ ತಕ್ಷಣ ಹಳೆ ಬಂಗಲೆಯನ್ನು ಖಾಲಿ ಮಾಡುತ್ತೇನೆ ಎಂದು ಮಾಜಿ ಸಚಿವ ಮಹದೇವಪ್ಪ ಹೇಳಿದ್ದಾರೆ. ಹೀಗಾಗಿ ಅವರು ಖಾಲಿ ಮಾಡುವಂತೆ ಕೇಳಿದ್ದಾರೆ. ಅವರಿಗೆ ತೊಂದರೆ ಇರುವುದರಿಂದಲೇ ಬೇಗ ಖಾಲಿ ಮಾಡಲು ಒತ್ತಾಯಿಸುತ್ತಿರಬಹುದು, ಇದರಲ್ಲಿ ಅವರ ತಪ್ಪೇನೂ ಇಲ್ಲ. ಇಲ್ಲಿ ಹಿರಿಯ-ಕಿರಿಯ ಎಂಬ ಪ್ರಶ್ನೆಯೇ ಬರುವುದಿಲ್ಲ. ಅವರು ಹಾಲಿ ಸಚಿವರಾಗಿದ್ದು, ಅವರ ದೈನಂದಿನ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗಬಾರದು ಎಂಬುದು ನನ್ನ ಉದ್ದೇಶ ಎಂದು ಮಹದೇವಪ್ಪ ಹೇಳಿದರು.
ನಾನು ಈ ಹಿಂದೆ ಸಚಿವ ಸ್ಥಾನದಲ್ಲಿದ್ದ ಕಾರಣ ಸರ್ಕಾರ ಈ ನಿವಾಸವನ್ನು ನೀಡಿತ್ತು. ಈಗ ನಾನು ಸಚಿವನಾಗಿಲ್ಲ, ಹಾಗಾಗಿ ಬೇಗನೆ ಬಿಟ್ಟುಕೊಡಬೇಕಿರುವುದು ಧರ್ಮ. ನನಗೆ ಬೆಂಗಳೂರಿನಲ್ಲಿ ಸ್ವಂತ ಮನೆ ಇಲ್ಲದಿರುವುದರಿಂದ ಬಾಡಿಗೆ ಮನೆ ಹುಡುಕುತ್ತಿದ್ದೇನೆ. ಸೂಕ್ತ ಮನೆ ಅಂತಿಮವಾದ ತಕ್ಷಣವೇ ಈ ಬಂಗಲೆಯನ್ನು ಖಾಲಿ ಮಾಡುತ್ತೇನೆ ಎಂದಿದ್ದಾರೆ.