ಬೆಂಗಳೂರು: ಬಿಜೆಪಿ ಅಪ್ಪ-ಮಕ್ಕಳ ಪಕ್ಷವಾಗಿದ್ದು, ಅಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ನೆಲ ಇಲ್ಲದ ಕಾರಣ ಆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಸೆ.13ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಪ್ರಕಟಿಸಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಬಿಜೆಪಿಯ ಹಿಂದುಳಿದ ವರ್ಗ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದು, ಇದೀಗ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯನಾಗಿ ಮೂರು ಬಾರಿ ಮತ್ತು ಎರಡು ಬಾರಿ ಶಾಸಕನಾಗಿ 40 ವರ್ಷಗಳಿಂದ ಸಾರ್ವಜನಿಕರ ಬೆಂಬಲದಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ ಎಂದರು.
ಹತ್ತು ವರ್ಷಗಳಿಂದ ಬಿಜೆಪಿಗೆ ನನ್ನನ್ನು ಸಮರ್ಪಿಸಿಕೊಂಡಿದ್ದೆ. ಅದಕ್ಕೆ ಯಾವುದೇ ಬೆಲೆ ಸಿಗದೇ ಇದ್ದುದ್ದರಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು. ರಾಜಾಜಿನಗರ ಮತ್ತು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಮತ್ತು ನನ್ನ ಕಾರ್ಯಕರ್ತರನ್ನು ದೂರ ಮಾಡಿದರು. ನನ್ನ ವಿರುದ್ದ ಪಿತೂರಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಿಲ್ಲ, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಸುರೇಶ್ ಕುಮಾರ್, ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಗೋಪಾಲಯ್ಯರವರ ಪರ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇ ಎಂದು ತಿಳಿಸಿದರು.
ಬಿಜೆಪಿ ಅಪ್ಪ-ಮಕ್ಕಳ ಪಕ್ಷವಾಗಿದೆ. ಗೋಪಾಲಯ್ಯ ಸೇರಿದಂತೆ 17ಮಂದಿ ಶಾಸಕರು ಬಿಜೆಪಿ ಸೇರಿದಾಗ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನೀವು ಸಹಕಾರ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಆರೆಸ್ಸೆಸ್ ಮುಖಂಡ ಬಿ.ಎಲ್.ಸಂತೋಷ್ ತಮ್ಮನ್ನು ಮನವೊಲಿಸಿದರು.
ಪಕ್ಷಕ್ಕಾಗಿ ತ್ಯಾಗ ಮಾಡಿದ ತಮಗೆ ನಂತರ ಜವಾಬ್ದಾರಿ ನೀಡುವ ವಿಚಾರದಲ್ಲಿ ಬಿಜೆಪಿ ನಾಯಕರು ಜಾಣ ಮೌನ ವಹಿಸಿದ್ದಾರೆ. ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಕಡೆ ನೋಡಲಿಲ್ಲ. ಕೆಲಸ ಮಾಡುವವರಿಗೆ ಬಿಜೆಪಿಯಲ್ಲಿ ಬೆಲೆಯಿಲ್ಲ. ಹಿಂಬಾಲಕರಿಗೆ ಮಾತ್ರ ಅವಕಾಶ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನಲ್ಲಿ ನನ್ನ ಶ್ರಮವಿದೆ. ನಿಗಮ, ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂಬ ಮನವಿಗೆ ಕಿವಿಗೊಡಲಿಲ್ಲ. ಕಾಂಗ್ರೆಸ್ ಪಕ್ಷ ನನಗೆ ಹೆಚ್ಚಿನ ಅವಕಾಶ ನೀಡಿತ್ತು. ಆದರೂ ಬಿಜೆಪಿ ಸೇರಿದೆ ಎಂದರು.
ಇದೀಗ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಉತ್ತಮ ಸರಕಾರವಿದ್ದು, ಬಿ.ಕೆ.ಹರಿಪ್ರಸಾದ್ ಸಾರಥ್ಯದಲ್ಲಿ ಪಕ್ಷ ಸಂಘಟನೆ ರಾಜ್ಯಾದ್ಯಂತ ಬಿರುಸಿನಿಂದ ಸಾಗುತ್ತಿದೆ. ಆದರೆ ಬಿಜೆಪಿಯಲ್ಲಿ ಆರೆಸ್ಸೆಸ್ ತೀರ್ಮಾನವೇ ಅಂತಿಮವಾಗಿದೆ. ನಿಷ್ಟಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ. ರಾಜ್ಯದ ಸಮಸ್ಯೆಗಳಿಗೆ ಬಿಜೆಪಿ ಸಂಸದರು ಸ್ಪಂದಿಸುವುದಿಲ್ಲ. ಹೀಗಾಗಿ ನನ್ನ ಮತ್ತು ಜೊತೆಯಲ್ಲಿ ಇರುವ ಸ್ನೇಹಿತರು, ಕಾರ್ಯಕರ್ತರ ಜೊತೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದರು.